ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೊಚ್ಚಲ ಪ್ರಶಸ್ತಿ ಗೆದ್ದ ಹಲೆಪ್‌

Last Updated 9 ಜೂನ್ 2018, 19:30 IST
ಅಕ್ಷರ ಗಾತ್ರ

ಪ್ಯಾರಿಸ್‌: ಮೊದಲ ಸೆಟ್‌ನಲ್ಲಿ ಅನುಭವಿಸಿದ ಹಿನ್ನಡೆಯಿಂದ ನಿರಾಸೆಗೊಳ್ಳದ ರುಮೇನಿಯಾದ ಸಿಮೊನಾ ಹಲೆಪ್‌ ಪಟ್ಟುಬಿಡದೆ ಕಾದಾಡಿ ಫ್ರೆಂಚ್ ಓಪನ್‌ ಟೆನಿಸ್ ಟೂರ್ನಿಯ ಮಹಿಳೆಯರ ವಿಭಾಗದ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ವಿಶ್ವದ ಅಗ್ರ ಕ್ರಮಾಂಕದ ಆಟಗಾರ್ತಿಯಾದ ಅವರು ಶನಿವಾರ ರಾತ್ರಿ ಇಲ್ಲಿ ನಡೆದ ಪಂದ್ಯದಲ್ಲಿ ಅಮೆರಿಕದ ಸ್ಲಾನೆ ಸ್ಟೀಫನ್ಸ್ ಅವರ ಸವಾಲನ್ನು ಮೆಟ್ಟಿ ನಿಂತರು. 3–6, 6–4, 6–1ರಿಂದ ಗೆದ್ದು ಚೊಚ್ಚಲ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗೆದ್ದ ಸಾಧನೆ ಮಾಡಿದರು.

ಮೂರು ಪ್ರಮುಖ ಟೂರ್ನಿಗಳಲ್ಲಿ ಪ್ರಶಸ್ತಿ ಹಂತದಲ್ಲಿ ಮುಗ್ಗರಿಸಿದ್ದ ಹಲೆಪ್‌ಗೆ ಶನಿವಾರದ ಪಂದ್ಯ ಸವಾಲಿ ನದ್ದಾಗಿತ್ತು. 10ನೇ ಶ್ರೇಯಾಂಕದ ಆಟಗಾರ್ತಿ ಸ್ಟೀಫನ್ಸ್‌ ಆರಂಭದಲ್ಲೇ ಪಾಯಿಂಟ್‌ಗಳನ್ನು ಗಳಿಸಿ ಹಲೆಪ್ ಅವರನ್ನು ಬೆಚ್ಚಿ ಬೀಳಿಸಿದರು.

ಮೊದಲ ಸೆಟ್‌ನಲ್ಲಿ ಸೋತಾಗ ಹಲೆಪ್ ಅಭಿಮಾನಿಗಳು ಈ ಹಿಂದಿನ ಟೂರ್ನಿಗಳ ಫಲಿತಾಂಶ ಪುನರಾವರ್ತಿಸಲಿದೆ ಎಂದು ನಿರಾಸೆಗೊಂಡರು. 41 ನಿಮಿಷಗಳಲ್ಲಿ ಮೊದಲ ಸೆಟ್‌ ಕೊನೆಗೊಂಡಿತು. ಎರಡನೇ ಸೆಟ್‌ನಲ್ಲೂ ಆರಂಭದಲ್ಲಿ ಸ್ಟೀಫನ್ಸ್‌ ಅವರ ಬಲಶಾಲಿ ಹೊಡೆತಗಳಿಗೆ ಉತ್ತರ ನೀಡಲು ಹಲೆಪ್ ವಿಫಲರಾದಾಗ ಅಭಿಮಾನಿಗಳು ಮತ್ತಷ್ಟು ಬೇಸರಗೊಂಡರು.

ನಾಲ್ಕನೇ ಗೇಮನ್‌ನಲ್ಲಿ ಹಲೆಪ್ ಅವರ ಸರ್ವ್ ಮುರಿದು ಅಮೆರಿಕ ಆಟಗಾರ್ತಿ ಪಾಯಿಂಟ್ ಗೆದ್ದರು. ಆದರೆ ನಿಧಾನವಾಗಿ ಲಯ ಕಂಡುಕೊಂಡ ಹಲೆಪ್‌ ಎದುರಾಳಿಗೆ ಭಾರಿ ತಿರುಗೇಟು ನೀಡಿದರು. ರೋಚಕ ಅಂತ್ಯ ಕಂಡ ಈ ಸೆಟ್‌ನಲ್ಲಿ ಹಲೆಪ್ ಅವರು ಹೊಡೆದ ಚೆಂಡನ್ನು ಬ್ಯಾಕ್‌ಹ್ಯಾಂಡ್‌ ಮೂಲಕ ಹಿಂದಿರುಗಿಸಲು ಎಡವಿದ ಸ್ಟೀಫನ್ಸ್‌ ಸೆಟ್‌ ಪಾಯಿಂಟ್‌ ಬಿಟ್ಟುಕೊಟ್ಟರು.

ಅಂತಿಮ ಸೆಟ್‌ ರೋಚಕ ಹಣಾಹಣಿಗೆ ಸಾಕ್ಷಿಯಾಯಿತು. ಕಳೆದ ಬಾರಿಯ ಫೈನಲ್‌ನಲ್ಲಿ ಲ್ಯಾಟ್ವಿಯಾದ ಜೆಲೆನಾ ಓಸ್ತಪೆಂಕೊ ಅವರ ವಿರುದ್ಧ ಸೆಟ್‌ ಮತ್ತು 3–0 ಗೇಮ್‌ಗಳ ಮುನ್ನಡೆ ಸಾಧಿಸಿದ್ದರೂ ಹಲೆಪ್‌ ಪಂದ್ಯ ಸೋತಿದ್ದರು. ಆ ಫಲಿತಾಂಶ ಪುನರಾವರ್ತಿಸಲು ಇಷ್ಟಪಡದ ಅವರು ಶನಿವಾರ ಎಚ್ಚರಿಕೆಯಿಂದ ಆಡಿದರು. ಆರಂಭದಲ್ಲೇ 5–0ಯಿಂದ ಮುನ್ನಡೆ ಸಾಧಿಸಿ ಭರವಸೆ ಹೆಚ್ಚಿಸಿಕೊಂಡರು. ಸ್ಫೋಟಕ ಸ್ಮ್ಯಾಷ್‌ ಸಿಡಿಸಿ ಮ್ಯಾಚ್‌ ಪಾಯಿಂಟ್‌ ಗಳಿಸಿದ ಅವರು ಸಂಭ್ರಮದ ಅಲೆಯಲ್ಲಿ ತೇಲಿದರು.

‘ಹಿಂದಿನ ಟೂರ್ನಿಗಳಲ್ಲಿ ಆಗಿದ್ದ ತಪ್ಪುಗಳು ಮರುಕಳಿಸಬಾರದು ಎಂದು ದೃಢ ನಿರ್ಧಾರ ಕೈಗೊಂಡಿದ್ದೆ. ಕೊನೆಯ ಸೆಟ್‌ನ ಕೊನೆಯ ಗೇಮ್‌ ನಂತರವೇ ನಿಟ್ಟುಸಿರು ಬಿಟ್ಟೆ.’

– ಸಿಮೋನಾ ಹಲೆಪ್‌, ಪ್ರಶಸ್ತಿ ಗೆದ್ದ ಆಟಗಾರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT