ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಕ ಸಾವು: ತನಿಖೆಗೆ ಆಗ್ರಹ, ವಿಎಚ್‌ಪಿ–ಬಜರಂಗ ದಳ ಕಾರ್ಯಕರ್ತರ ಪ್ರತಿಭಟನೆ

Last Updated 29 ಮೇ 2019, 11:52 IST
ಅಕ್ಷರ ಗಾತ್ರ

ಬೆಳಗಾವಿ: ‘ತಾಲ್ಲೂಕಿನ ಹಿರೇಬಾಗೇವಾಡಿ ಎಪಿಎಂಸಿ ಆವರಣದ ಸಾರ್ವಜನಿಕ ಶೌಚಾಲಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಗೋಕಾಕ ತಾಲ್ಲೂಕು ಅಂಕಲಗಿ ಗ್ರಾಮದ ಶಿವಕುಮಾರ ಉಪ್ಪಾರ (19) ಸಾವಿಗೆ ನ್ಯಾಯ ದೊರಕಿಸಿಕೊಡಬೇಕು. ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್- ಬಜರಂಗ ದಳ ಕಾರ್ಯಕರ್ತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಬಳಿ ಬುಧವಾರ ಪ್ರತಿಭಟಿಸಿದರು.

‘ಆ ಯುವಕ ನಮ್ಮ ಕಾರ್ಯಕರ್ತನಾಗಿದ್ದ. ಗೋವುಗಳ ರಕ್ಷಣೆಗೆ ಪ್ರಾಣ ಬಲಿ ಕೊಟ್ಟಿದ್ದಾನೆ. ಆದರೆ, ಆತನ ಸಾವನ್ನು ಆತ್ಮಹತ್ಯೆ ಎಂದು ಪರಿಗಣಿಸಿ ಪ್ರಕರಣ ಮುಚ್ಚಿ ಹಾಕಲು ಯತ್ನಿಸಲಾಗುತ್ತಿದೆ. ಗೋವುಗಳನ್ನು ಅಕ್ರಮವಾಗಿ ಸಾಗಣೆ ಮಾಡುವವರ ವಿರುದ್ಧ ಆತ ಸಮರ ಸಾರಿದ್ದ. ಸಾಯುವ ಮುನ್ನ ಆತ ಮಾಡಿದ್ದ ವಿಡಿಯೊದಲ್ಲಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದ. ಗೋಹತ್ಯೆ ವಿರುದ್ಧ ದನಿ ಎತ್ತಿದ್ದ. ಹೀಗಾಗಿ, ಆತನ ಸಾವು ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ. ಆತ್ಮಹತ್ಯೆ ಎಂದರೆ ಒಪ್ಪಿಕೊಳ್ಳಲಾಗುವುದಿಲ್ಲ’ ಎಂದು ತಿಳಿಸಿದರು.

‘ನಮ್ಮ ಕಾರ್ಯಕರ್ತ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿಯಲ್ಲ. ಅವನದು ಆತ್ಮಹತ್ಯೆಯಲ್ಲಿ ಅದೊಂದು ಪೂರ್ವನಿಯೋಜಿತ ಕೊಲೆ ಎಂಬ ಬಲವಾದ ನಂಬಿಕೆ ನಮ್ಮನ್ನು ಕಾಡುತ್ತಿದೆ. ಹಿಂದೂ ವಿರೋಧಿ ರಾಜ್ಯ ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿರುವ ಪೊಲೀಸರು, ಪ್ರಕರಣ ಮುಚ್ಚಿ ಹಾಕುತ್ತಿದ್ದಾರೆ. ಅವರ ಹೇಳಿಕೆಗಳು ನಂಬಲರ್ಹವಾಗಿಲ್ಲ’ ಎಂದು ದೂರಿದರು. ‘ಹೀಗಾಗಿ, ತನಿಖೆಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳುವಂತೆ ಪೊಲೀಸರಿಗೆ ಸೂಚಿಸಬೇಕು. ಇಲ್ಲವಾದಲ್ಲಿ ಪ್ರಕರಣವನ್ನು ಸಿಬಿಐಗೆ ವಹಿಸಬೇಕು’ ಎಂದು ಆಗ್ರಹಿಸಿದರು.

‘ಆತ ಮಾತನಾಡಿರುವ ಆಡಿಯೊ, ವಿಡಿಯೊ ಕ್ಲಿಪ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಅವುಗಳನ್ನು ಸಾಕ್ಷಿಯಾಗಿ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.

‘ಆತನಿಗೆ ಬೆದರಿಕೆ ಇದ್ದ ಆಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು. ನನಗೆ ಹಾಗೂ ಕುಟುಂಬಕ್ಕೆ ಬೆದರಿಕೆ ಹಾಕುತ್ತಿದ್ದಾರೆ ಎಂದೂ ಶಿವು ವಿಡಿಯೊ ಮಾಡಿದ್ದ. ಇಷ್ಟಾದರೂ ಪೊಲೀಸರು ಸರಿಯಾದ ಭದ್ರತೆ ನೀಡಲಿಲ್ಲ. ಈಗ, ಅವನ ಸಾವನ್ನು ಆತ್ಮಹತ್ಯೆ ಎಂದು ಸಾಧಿಸುತ್ತಿದ್ದಾರೆ’ ಎಂದು ದೂರಿದರು.

ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.

ನಾಗನಾಥ ಸ್ವಾಮೀಜಿ, ಸಂಘಟನೆಯ ಜಿಲ್ಲಾ ಸಂಯೋಜಕರಾದ ಬಾವಕಣ್ಣ ಲೋಹಾರ, ಸತೀಶ ಮಾಳವದೆ, ಮುಖಂಡರಾದ ಮಹಾಂತೇಶ ಒಕ್ಕುಂದ, ಮಹಾದೇವ ದರೆಣ್ಣವರ, ಆದರ್ಶ ಬುಚಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT