ಶುಕ್ರವಾರ, ನವೆಂಬರ್ 27, 2020
21 °C

ಜಾತಿ ಗಣತಿ ವರದಿ ಬಿಡುಗಡೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‌ರಾಜ್ಯದಲ್ಲಿ 2015ರ ಏಪ್ರಿಲ್‌ನಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ, ಸಾವಿರಾರು ಸಿಬ್ಬಂದಿ ಬಳಸಿಕೊಂಡು ನಡೆಸಿದ ಜಾತಿ ಗಣತಿ ವರದಿಯನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿ ಸವದತ್ತಿಯ ಮಾಹಿತಿ ಹಕ್ಕು ಕಾರ್ಯಕರ್ತ ಅಶೋಕ ಬಡಿಗೇರ ಜಿಲ್ಲಾಧಿಕಾರಿ ಕಚೇರಿಗೆ ಬುಧವಾರ ಮನವಿ ಸಲ್ಲಿಸಿದರು.

‘ಮೀಸಲಾತಿಗೆ ಸಂಬಂಧಿಸಿದಂತೆ ವಿವಿಧ ಪ್ರಕರಣಗಳ ವಿಚಾರಣೆ ನಡೆದಾಗಲೆಲ್ಲಾ ಜಾತಿ ಆಧಾರಿತ ಮೀಸಲಾತಿಗೆ ಆಧಾರಗಳೇನು ಎಂದು ಸುಪ್ರೀಂ ಕೋರ್ಟ್‌ ಪ್ರಶ್ನಿಸುತ್ತಲೇ ಬಂದಿದೆ. ಇಂತಹ ಪ್ರಶ್ನೆಗಳಿಗೆ ಯಾವುದೇ ಸರ್ಕಾರಕ್ಕೆ ಸಮರ್ಪಕವಾಗಿ ಉತ್ತರ ನೀಡಲು ಸಾಧ್ಯವಾಗಿಲ್ಲ. ಜನಸಂಖ್ಯೆ ಆಧರಿಸಿ ಸರ್ಕಾರದ ಸೌಲಭ್ಯ ತಲುಪಿಸಲು ಹಾಗೂ ಯೋಜನೆಗಳನ್ನು ರೂಪಿಸಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾತಿಗಣತಿ ನಡೆಸಿದೆ. ಆದರೆ, ಹಲವು ವರ್ಷಗಳು ಗತಿಸಿದರೂ ವರದಿ ಬಹಿರಂಗಪಡಿಸದಿರುವುದು ಖಂಡನೀಯ’ ಎಂದರು.

‘ಸರ್ಕಾರದಲ್ಲಿ ಸಮಗ್ರ ಸ್ವರೂಪದ ಜಾತಿ ಗಣತಿಯ ಮಾಹಿತಿಯೇ ಇಲ್ಲದಿರುವ ಕಾರಣ ತಪ್ಪುಗಳಿಂದ ಕೂಡಿದ ಜಾತಿ ಮಾಹಿತಿಯಿಂದಲೇ ಅನಿವಾರ್ಯವಾಗಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತಿದೆ. ವಿವಿಧ ಜಾತಿ, ಜನಾಂಗಗಳ ಅಭಿವೃದ್ಧಿಯಲ್ಲಿ ವ್ಯತ್ಯಾಸಗಳನ್ನು ಕಡಿಮೆ ಮಾಡಲು ಸಾಮಾಜಿಕ ನ್ಯಾಯದ ಗುರಿ ಸಾಧನೆಗಾಗಿ ಜಾತಿಗಣತಿ ವರದಿಯ ಬಿಡುಗಡೆ ಮಾಡುವುದು ಅತ್ಯಗತ್ಯವಾಗಿದೆ’ ಎಂದು ತಿಳಿಸಿದರು.

‘ಮೀಸಲಾತಿ ಹೆಸರಿನಲ್ಲಿ ರಾಜಕೀಯ ಮತ್ತು ಆರ್ಥಿಕವಾಗಿ ಪ್ರಬಲವಾಗಿರುವ ಸಮುದಾಯಗಳು ಮೀಸಲಾತಿಯ ಕೆನೆಪದರ ಸವಿದು ದುರ್ಬಲ ಸಮುದಾಯಗಳನ್ನು ಶೋಷಿಸುತ್ತೇವೆ. ಹೆಸರಿಗಾಗಿ ಮಾತ್ರ ಪಟ್ಟಿಯಲ್ಲಿರುವ ಕೆಲ ದುರ್ಬಲ ವರ್ಗಗಳು ಸ್ವಾತಂತ್ರ್ಯ ದೊರೆತು 70 ವರ್ಷಗಳು ಗತಿಸಿದರೂ ಸಬಲರಾಗಿಲ್ಲ. ಸಂವಿಧಾನದ ಸಮಾನತೆ ಆಶಯ ಕೈಗೂಡಲು ಜಾತಿ ಗಣತಿ ವರದಿಯನ್ನು ಕೂಡಲೇ ಬಹಿರಂಗಪಡಿಸಬೇಕು. ಒಳಮೀಸಲಾತಿ ಜಾರಿಗೆ ತರಲು ಸಮಿತಿ ರಚಿಸಬೇಕು’ ಎಂದು ಕೋರಿದರು.

ಮುಖಂಡರಾದ ಮಹಾದೇವ ಮುರಗೋಡ, ಸದಾನಂದ ಬಡಿಗೇರ, ರಮೇಶ ಬಡಿಗೇರ, ನಾರಾಯಣ ಪತ್ತಾರ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು