ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಧಾರ ಪುನರ್‌ಪರಿಶೀಲನೆಗೆ ಸಮ್ಮತಿ

ಕೋಟೆ ಕೆರೆ ಪ್ರವೇಶಕ್ಕೆ ಶುಲ್ಕ;
Last Updated 7 ಜೂನ್ 2019, 20:09 IST
ಅಕ್ಷರ ಗಾತ್ರ

ಬೆಳಗಾವಿ: ‘ಇಲ್ಲಿನ ಕೋಟೆ ಕೆರೆಯ ಉದ್ಯಾನವನಕ್ಕೆ ಪ್ರವೇಶ ಶುಲ್ಕವಿಧಿಸಿರುವ ಹಿಂದಿನ ಜಿಲ್ಲಾಧಿಕಾರಿಯವರ ನಿರ್ಧಾರದ ಬಗ್ಗೆ ಪುನರ್‌ ಪರಿಶೀಲಿಸಲಾಗುವುದು’ ಎಂದು ಪ್ರಾದೇಶಿಕ ಆಯುಕ್ತ ಪಿ.ಎ. ಮೇಘಣ್ಣವರ ಹಾಗೂ ಹಾಲಿ ಜಿಲ್ಲಾಧಿಕಾರಿ ಎಸ್‌.ಬಿ. ಬೊಮ್ಮನಹಳ್ಳಿ ಭರವಸೆ ನೀಡಿದರು.

ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಶುಕ್ರವಾರ ಪ್ರಾದೇಶಿಕ ಆಯುಕ್ತ ಹಾಗೂ ಜಿಲ್ಲಾಧಿಕಾರಿಯವರನ್ನು ಭೇಟಿಯಾಗಿ, ಪ್ರವೇಶ ಶುಲ್ಕ ರದ್ದುಪಡಿಸುವಂತೆ ಆಗ್ರಹಿಸಿದ್ದರು.

‘ಹಿಂದಿನ ಜಿಲ್ಲಾಧಿಕಾರಿ ಡಾ.ವಿಶಾಲ್‌ ಆರ್‌. ಪ್ರವೇಶ ಶುಲ್ಕ ವಿಧಿಸಲು ಯಾವ ಮಾನದಂಡಗಳನ್ನು ಅನುಸರಿಸಿದ್ದಾರೆ, ಏತಕ್ಕಾಗಿ ಪ್ರವೇಶ ಶುಲ್ಕ ವಿಧಿಸಿದ್ದಾರೆ ಎನ್ನುವುದನ್ನು ಮೊದಲು ಅಧ್ಯಯನ ಮಾಡುತ್ತೇವೆ. ನಂತರ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ’ ಎಂದು ಪಿ.ಎ. ಮೇಘಣ್ಣವರ ಹಾಗೂ ಎಸ್‌.ಬಿ ಬೊಮ್ಮನಹಳ್ಳಿ ಹೇಳಿದರು.

ಇದಕ್ಕೂ ಮೊದಲು ಮಾತನಾಡಿದ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ, ‘ತಪ್ಪು ತಿಳುವಳಿಕೆಯಿಂದಾಗಿ ಹಾಗೂ ವಾಸ್ತವತೆಯ ಅರಿವಿನ ಅಭಾವದಿಂದಾಗಿ ಹಿಂದಿನ ಜಿಲ್ಲಾಧಿಕಾರಿ ಇಂತಹ ನಿರ್ಧಾರ ಕೈಕೊಂಡಿರಬಹುದು. ಆದರೆ, ಅವರ ಈ ನಿರ್ಧಾರದಿಂದಾಗಿ ಕೋಟೆ ಕೆರೆಯ ಆವರಣದಲ್ಲಿ ನಿತ್ಯ ವಾಯುವಿಹಾರ ಮಾಡುತ್ತಿದ್ದ ಸಾಮಾನ್ಯ ಜನರು ತೊಂದರೆ ಅನುಭವಿಸುವಂತಾಗಿದೆ’ ಎಂದು ತಿಳಿಸಿದರು.

‘1991ರಲ್ಲಿ ಅಂದಿನ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯದರ್ಶಿ ಭರತಲಾಲ ಮೀನಾ ಸ್ಥಾಪಿಸಿದ್ದ ಅಪ್ನಾ ದೇಶ ಸಂಸ್ಥೆಯೊಂದಿಗೆ ಬೆಳಗಾವಿಯ 60ಕ್ಕೂ ಅಧಿಕ ಸಂಘಟನೆಗಳ ಸಾವಿರಾರು ಯುವಕರು ಶ್ರಮದಾನ ನಡೆಸಿ ಕೆರೆಗೆ ಒಂದು ರೂಪ ಕೊಟ್ಟಿದ್ದರು. ಅಂದಿನಿಂದ ಬಹಳಷ್ಟು ಜನರು ವಾಯುವಿಹಾರಕ್ಕಾಗಿ ಹೋಗಲು ಆರಂಭಿಸಿದರು. ಆದರೆ, ಇಂದು ಮಹಿಳೆಯರು ಮತ್ತು ಮಕ್ಕಳು ಯಾರೊಬ್ಬರೂ ಹೋಗುತ್ತಿಲ್ಲ. ಕೆರೆಯ ಆವರಣ ಬಿಕೋ ಎನ್ನುತ್ತಿದೆ. ಪ್ರವೇಶ ಶುಲ್ಕದ ನಿರ್ಧಾರವನ್ನು ಪುನರ್ ಪರಿಶೀಲಿಸಬೇಕು’ ಎಂದು ಮನವಿ ಮಾಡಿದರು.

ಯುನೈಟೆಡ್ ಸಮಾಜ ಕಲ್ಯಾಣ ಸಂಸ್ಥೆಯ ಅಧ್ಯಕ್ಷ ಬಿ.ತಿಪ್ಪೇಸ್ವಾಮಿ ಮಾತನಾಡಿ, ‘ಜನರ ಅಭಿಪ್ರಾಯವನ್ನು ಕೇಳದೆ ಏಕಪಕ್ಷೀಯವಾಗಿ ಕೈಕೊಂಡ ಶುಲ್ಕ ಹೇರಿಕೆ ನಿರ್ಧಾರವನ್ನು ವಾಪಸ್ ಪಡೆಯಬೇಕು’ ಎಂದು ಕೋರಿದರು.

ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಮಹಾದೇವ ತಳವಾರ, ಯುವ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ, ಜಿಲ್ಲಾ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಸಲೀಮ ಖತೀಬ, ಎಂ.ಜಿ. ಮಕಾನದಾರ, ಶಿವಪ್ಪ ಶಮರಂತ, ರಾಜು ಕುಸೋಜಿ, ಸಾಗರ ಬೊರಗಲ್ಲ, ಬಾಬು ಸಂಗೋಡಿ, ಎಂ.ಕೆ. ಕುಂದರಗಿ, ರಜತ ಅಂಕಲೆ ಮುಂತಾದವರು ಪ್ರವೇಶ ಶುಲ್ಕವನ್ನು ತೀವ್ರವಾಗಿ ವಿರೋಧಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT