ಶನಿವಾರ, ಅಕ್ಟೋಬರ್ 31, 2020
25 °C
ಸಂಚಾರಕ್ಕೆ ಯೋಗ್ಯವಲ್ಲದಂತಾಗಿದೆ ಕಲ್ಲೋಳ-ಯಡೂರ ಬ್ಯಾರೇಜ್

ಚಿಕ್ಕೋಡಿ:ಪರ್ಯಾಯ ಸೇತುವೆ ನಿರ್ಮಾಣ ಯಾವಾಗ?

ಸುಧಾಕರ ತಳವಾರ Updated:

ಅಕ್ಷರ ಗಾತ್ರ : | |

Prajavani

ಚಿಕ್ಕೋಡಿ: ತಾಲ್ಲೂಕಿನ ಕಲ್ಲೋಳ ಮತ್ತು ಯಡೂರ ಗ್ರಾಮಗಳ ಮಧ್ಯೆ ಮೂರು ದಶಕಗಳ ಹಿಂದೆ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬ್ರಿಜ್‌ ಕಂ ಬ್ಯಾರೇಜ್ ಸಂಪೂರ್ಣ ಶಿಥಿಲಗೊಂಡಿದ್ದು, ಸಂಚಾರಕ್ಕೆ ಯೋಗ್ಯವಲ್ಲದಂತಾಗಿದೆ.

ಸಣ್ಣ ನೀರಾವರಿ ಇಲಾಖೆಯು 13 ವರ್ಷಗಳಿಂದ ಈ ಬ್ಯಾರೇಜ್ ಮೇಲೆ ಭಾರಿ ವಾಹನಗಳ ಸಂಚಾರ ನಿಷೇಧಿಸಿದೆ. 2-3 ತಿಂಗಳುಗಳಲ್ಲಿ ಮಹಾರಾಷ್ಟ್ರದಲ್ಲಿ  ಸುರಿದ ಭಾರಿ ಮಳೆಯಿಂದಾಗಿ ಕೃಷ್ಣಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಸೇರಿದ ಪರಿಣಾಮ ಬ್ಯಾರೇಜ್‌ನ ಪಿಲ್ಲರ್‌ ಆಗಸ್ಟ್‌ನಲ್ಲಿ ಕೊಚ್ಚಿ ಹೋಗಿದೆ. ಹೀಗಾಗಿ ಬ್ಯಾರೇಜ್ ಮೇಲೆ ಲಘು ವಾಹನ ಮತ್ತು ದ್ವಿಚಕ್ರವಾಹನ ಸಂಚಾರವೂ ಅಪಾಯಕಾರಿಯಾಗಿ ಪರಿಣಮಿಸಿದೆ.

ಬ್ಯಾರೇಜ್‌ನ ಎರಡೂ ಬದಿಗಳಲ್ಲಿ ಕಲ್ಲು ಮಣ್ಣಿನ ಒಡ್ಡು ಹಾಕಿ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದರಿಂದ ಸಾರ್ವಜನಿಕರು ಸುತ್ತಿ ಬಳಸಿ ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಹಲವೆಡೆಗೆ:

1981-82ರಲ್ಲಿ ₹ 15 ಲಕ್ಷ ವೆಚ್ಚದಲ್ಲಿ ಬ್ಯಾರೇಜ್‌ ನಿರ್ಮಿಸಲಾಗಿದೆ. 7.22 ಮೀಟರ್ ಎತ್ತರ ಮತ್ತು 242 ಮೀಟರ್ ಉದ್ದವಿದೆ. ಇಲ್ಲಿ ಸಂಗ್ರಹವಾಗುವ ನೀರು 2,226 ಹೆಕ್ಟೇರ್ ಭೂಮಿ ನೀರಾವರಿಗೆ ಉಪಯುಕ್ತವಾಗಿದೆ. ಅಲ್ಲದೇ, ತಾಲ್ಲೂಕಿನ ವಿವಿಧ ಗ್ರಾಮಗಳ ರೈತರು ಏತ ನೀರಾವರಿ ಯೋಜನೆ ಮೂಲಕ  ಇಲ್ಲಿಂದ ನೀರಾವರಿ ಸೌಕರ್ಯ ಪಡೆದಿದ್ದಾರೆ. ಜೊತೆಗೆ ಸಕ್ಕರೆ ಕಾರ್ಖಾನೆಗಳಿಗೂ ಇಲ್ಲಿಂದ ನೀರು ಸರಬರಾಜಾಗುತ್ತಿದೆ.

2005ರಲ್ಲಿ ಉಂಟಾದ ಮಹಾಪೂರದಿಂದ ನೀರು ಸಂಗ್ರಹಣಾ ಗೇಟ್‌ಗಳಿಗೆ ಧಕ್ಕೆಯಾಗಿ ತುಕ್ಕು ಹಿಡಿದು ಹಾನಿಗೀಡಾಗಿವೆ. ಇದರಿಂದ ನೀರು ಸೋರುತ್ತಿದೆ. ಶಿಥಿಲಾವಸ್ಥೆ ತಲುಪಿದ ಪರಿಣಾಮವಾಗಿ 2007ರಿಂದ ಭಾರೀ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.

ಸ್ಥಳೀಯರ ಒತ್ತಾಯ:

‘ಸಂಚಾರಕ್ಕೆ ಯೋಗ್ಯವಿಲ್ಲದಿರುವ ಈ ಬ್ಯಾರೇಜ್‌ಗೆ ಪರ್ಯಾಯವಾಗಿ ಹೊಸ ಸೇತುವೆ ನಿರ್ಮಿಸಬೇಕು’ ಎನ್ನುವುದು ‌ಸ್ಥಳೀಯರ ಒತ್ತಾಯವಾಗಿದೆ.

ಕೇಂದ್ರದ ಅಧಿಕಾರಿಗಳ ತಂಡವು, ಶಿಥಿಲಗೊಂಡಿರುವ ಸೇತುವೆ ಪರಿಶೀಲನೆ ನಡೆಸಿತ್ತು. ಆಗಿನ ಸಂಸದ ಪ್ರಕಾಶ ಹುಕ್ಕೇರಿ ಮತ್ತು ಶಾಸಕ ಗಣೇಶ ಹುಕ್ಕೇರಿ ಸೇತುವೆ ನಿರ್ಮಾಣ ಕಾಮಗಾರಿಗೆ ಆಗಿನ ಸಚಿವ ಡಾ.ಎಚ್.ಸಿ. ಮಹಾದೇವಪ್ಪ ಅವರಿಂದ ಶಿಲಾನ್ಯಾಸವನ್ನೂ ನೇರವೇರಿಸಿದ್ದರು. ಆದರೆ, ಕಾಮಗಾರಿ  ಆರಂಭಗೊಂಡಿಲ್ಲ!

ಕಳೆದ ಆಗಸ್ಟ್‌ನಲ್ಲಿ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರೂ ಬ್ಯಾರೇಜ್ ಪರಿಶೀಲನೆ ನಡೆಸಿ, ಹೊಸ ಸೇತುವೆ ನಿರ್ಮಣಕ್ಕೆ ಅನುದಾನ ಮಂಜೂರು ಮಾಡುವ ಭರವಸೆ ನೀಡಿದ್ದಾರೆ. ಕೂಡಲೇ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎನ್ನುವುದು ಜನರ ಆಗ್ರಹವಾಗಿದೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ನೀರಾವರಿ ಇಲಾಖೆಯ ಇಇ ಸಿ.ಡಿ. ಪಾಟೀಲ ‘ಅನುದಾನ ಮಂಜೂರಾತಿ ಕೋರಿ 2013ರಿಂದಲೂ ಪ್ರಸ್ತಾವ ಸಲ್ಲಿಸುತ್ತಿದ್ದೇವೆ. ಇಲಾಖೆ ಸಭೆಯಲ್ಲೂ ಚರ್ಚೆಯಾಗಿದೆ. ಹೋದ ವರ್ಷ ₹ 35 ಕೋಟಿ ಕೋರಿ ಪ್ರಸ್ತಾವ ನೀಡಿದ್ದೆವು. ಜುಲೈನಲ್ಲಿ ಪರಿಷ್ಕೃತ ಪ್ರಸ್ತಾವ ಕಳುಹಿಸಲಾಗಿದೆ. ಅನುಮೋದನೆ ಸಿಕ್ಕ ನಂತರ ನಿರ್ಮಾಣ ಪ್ರಾರಂಭವಾಗಲಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.