ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇಲ್ಲ'ಗಳ ತಾಣವಾದ ಬೆಳಗಾವಿ ಕೋಟೆ ಕೆರೆ: ಅಭಿವೃದ್ಧಿಪಡಿಸಲು ಜನರ ಒತ್ತಾಯ

ಸೌಲಭ್ಯ ಕಲ್ಪಿಸಲು, ಅಭಿವೃದ್ಧಿಪಡಿಸಲು ಜನರ ಒತ್ತಾಯ
Last Updated 2 ಜನವರಿ 2022, 8:56 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿ ಶೌಚಗೃಹವಿಲ್ಲ. ಶುದ್ಧ ಕುಡಿಯುವ ನೀರಿಲ್ಲ. ಸ್ವಚ್ಛತೆ ಇಲ್ಲ. ಬೆಳಕಿನ ವ್ಯವಸ್ಥೆಯನ್ನಂತೂ ಕೇಳುವಂತೆಯೇ ಇಲ್ಲ!

ಹೀಗೆ... ‘ಇಲ್ಲ’ಗಳ ತಾಣವಾಗಿ ಮಾರ್ಪಟ್ಟಿರುವುದು ನಗರದ ಹೃದಯಭಾಗದಲ್ಲೇ ಇರುವ ಕೋಟೆ ಕೆರೆ. ಕುಂದಾನಗರಿಯ ಮುಕುಟಪ್ರಾಯದಂತಿರುವ ಕೆರೆಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಪೂರಕ ಅವಕಾಶಗಳಿವೆ. ಆದರೆ, ಮಹಾನಗರ ಪಾಲಿಕೆ ನಿರ್ಲಕ್ಷ್ಯದಿಂದಾಗಿ ಪ್ರವಾಸಿಗರಿಂದ ದೂರವಾಗುತ್ತಿದೆ ಎನ್ನುವುದು ಪ್ರಜ್ಞಾವಂತರ ಅಸಮಾಧಾನವಾಗಿದೆ.

ವಾಯುವಿಹಾರಕ್ಕಾಗಿ ನಿತ್ಯ ಬೆಳಗ್ಗೆ ಹಾಗೂ ಸಂಜೆ ನೂರಾರು ಜನರು ಕೆರೆಯಂಗಳದತ್ತ ಹೆಜ್ಜೆ ಹಾಕುತ್ತಾರೆ. ಕೆರೆಯ ಸೊಬಗು ಕಣ್ತುಂಬಿಕೊಳ್ಳಲು ಹಾಗೂ ಬೋಟಿಂಗ್‌ಗಾಗಿಯೂ ಹಲವರು ಆಗಮಿಸುತ್ತಾರೆ. ಆದರೆ, ಕನಿಷ್ಠ ಮೂಲಸೌಲಭ್ಯಗಳೂ ಇಲ್ಲದ್ದರಿಂದ ಜನರು ಪರದಾಡುವಂತಾಗಿದೆ.

ಶೌಚಕ್ಕೆ ಪರದಾಟ: ಕೆರೆ ಆವರಣದಲ್ಲಿರುವ ನಾಲೆ ವಿಸ್ತರಣೆ, ಕಾಂಪೌಂಡ್ ಎತ್ತರ ಹೆಚ್ಚಿಸುವ ಕಾಮಗಾರಿಗೆ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಈಚೆಗೆ ಚಾಲನೆ ನೀಡಿದ್ದಾರೆ. ಈ ಕಾಮಗಾರಿ ಪ್ರಗತಿಯಲ್ಲಿದ್ದು, ಬಿಹಾರ ಮೂಲದ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಶೌಚಗೃಹ ವ್ಯವಸ್ಥೆಯೇ ಇಲ್ಲದ್ದರಿಂದ ಕಾರ್ಮಿಕರ ಜೊತೆಗೆ ಪ್ರವಾಸಿಗರು ತೊಂದರೆ ಅನುಭವಿಸುವಂತಾಗಿದೆ. ಕೆರೆ ಆವರಣದಲ್ಲೇ ಮಹಾನಗರ ಪಾಲಿಕೆ ನಿರ್ಮಿಸಿದ್ದ ಇ-ಶೌಚಗೃಹವೂ ಮುಚ್ಚಿದೆ.

ಬೆಳಗದ ದೀಪ: ವಾಯುವಿಹಾರಿಗಳು ಬೆಳಿಗ್ಗೆ 5ಗಂಟೆಯಿಂದಲೇ ಕೆರೆಯತ್ತ ಧಾವಿಸುತ್ತಾರೆ. 9.30ರಿಂದ ರಾತ್ರಿ 8.30ರ ಅವಧಿಯಲ್ಲಿ ಪ್ರವಾಸಿಗರಿಗೆ ಕೆರೆ ಆವರಣ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಇಲ್ಲಿ ಅಳವಡಿಸಿದ ವಿದ್ಯುತ್‌ ದೀಪಗಳು ಬೆಳಗುತ್ತಿಲ್ಲ.

‘ಪಾದಚಾರಿ ಮಾರ್ಗದ ಪಕ್ಕ ಹೇರಳವಾಗಿ ಕಸ ಬೆಳೆದಿದೆ. ವಿಷಜಂತುಗಳ ಹಾವಳಿ ಇದೆ. ಗಾಂಜಾ ಸೇವಿಸಲು ಕಿಡಿಗೇಡಿಗಳು ನಿರಾತಂಕವಾಗಿ ಕೆರೆಯಂಗಳ ಪ್ರವೇಶಿಸುತ್ತಿದ್ದಾರೆ. ಆದರೆ, ಬೆಳಕಿನ ವ್ಯವಸ್ಥೆ ಇಲ್ಲದ್ದರಿಂದ ಆತಂಕದಲ್ಲೇ ವಾಯುವಿಹಾರ ಮಾಡುವ ಸ್ಥಿತಿ ಇದೆ’ ಎಂದು ಶಿವಾಜಿ ನಗರದ ನಿವಾಸಿ ಜ್ಯೋತಿ ಹೆದ್ದೂರಶೆಟ್ಟಿ ಅಳಲು ತೋಡಿಕೊಂಡರು.

‘ಇಲ್ಲಿನ ಮೊಹರಂ ಟ್ಯಾಂಕ್ ಕಲುಷಿತಗೊಂಡಿದ್ದು, ಸುತ್ತಲಿನ ಪರಿಸರದಲ್ಲಿ ದುರ್ವಾಸನೆ ಹರಡಿದೆ. ತ್ವರಿತವಾಗಿ ಅದನ್ನು ಸ್ವಚ್ಛಗೊಳಿಸಬೇಕು. ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕು. ಪ್ರವಾಸಿಗರ ಸಂಖ್ಯೆಗೆ ಅನುಗುಣವಾಗಿ ಆಸನ ವ್ಯವಸ್ಥೆ ಕಲ್ಪಿಸಬೇಕು' ಎಂದು ಪ್ರವಾಸಿಗ ರವಿ ಮಾರಿಹಾಳ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT