ಶುಕ್ರವಾರ, ಮೇ 20, 2022
23 °C

‘ರೈತ ವಿರೋಧಿ ಕಾಯ್ದೆ ಹಿಂಡೆಯಬೇಕು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಥಣಿ: ‘ದೇಶದ ಬೆನ್ನೆಲುಬಾದ ರೈತರ ಶೋಷಣೆ ನಿಲ್ಲಬೇಕು. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮಾರಕ ಕಾಯ್ದೆಗಳನ್ನು ತಕ್ಷಣವೇ ಹಿಂಪಡೆಯಬೇಕು’ ಎಂದು ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ಮಹಾದೇವ ಮಡಿವಾಳ ಆಗ್ರಹಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ನಡೆದ ಸಭೆಯಲ್ಲಿ, ನೂತನವಾಗಿ ಸೇರ್ಪಡೆಯಾದವರನ್ನು ಬರಮಾಡಿಕೊಂಡು ಅವರು ಮಾತನಾಡಿದರು.

‘ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸಿದ ರೈತರಿಗೆ ನಿಯಮಗಳ ಪ್ರಕಾರ 14 ದಿನಗಳ ಒಳಗೆ ಬಿಲ್ ಪಾವತಿಸಬೇಕು. ಬಾಕಿಯನ್ನು ಕೂಡಲೇ ನೀಡಬೇಕು’ ಎಂದು ಒತ್ತಾಯಿಸಿದರು.

‘ನಿಯಮವಿದ್ದರೂ ಜಾರಿಗೆ ತರುವಲ್ಲಿ ಅಧಿಕಾರಿಗಳು ಗಮನಹರಿಸುತ್ತಿಲ್ಲ. ಶೋಷಣೆಗಳು ನಡೆಯುತ್ತಿದ್ದರೂ ರೈತರು ಬದುಕುವುದಾದರೂ ಹೇಗೆ? ಎರಡು ವರ್ಷಗಳಿಂದ ಬಹುತೇಕ ಸಕ್ಕರೆ ಕಾರ್ಖಾನೆಗಳಲ್ಲಿ ಟನ್ ಕಬ್ಬಿನ ₹ 200ರಿಂದ ₹ 350 ಬಿಲ್ ಪಾವತಿಸಿಲ್ಲ. ಕೋಟ್ಯಂತರ ರೂಪಾಯಿ ಬಾಕಿ ಉಳಿಸಿಕೊಂಡಿವೆ. ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು’ ಎಂದರು.

‘ತಾಲ್ಲೂಕಿನ ಪೂರ್ವ ಭಾಗದಲ್ಲಿ ಐದಾರು ಹಳ್ಳಿಗಳಿಗೆ ಸುತ್ತಿ ಬಳಸಿ ಅಂದರೆ 72 ಕಿ.ಮೀ. ಹರಿದು ಬರುವಂತೆ ಕಾಲುವೆ ಮಾಡಲಾಗಿದೆ. ಇದು ಅವೈಜ್ಞಾನಿಕವಾಗಿದೆ. ಐಗಳಿ ಸುತ್ತಮುತ್ತ ಅರಟಾಳ, ಬಾಡಗಿ ಮುಂತಾದ ಗ್ರಾಮಗಳಿಗೆ ನೇರವಾಗಿ ಕಾಲುವೆ ನಿರ್ಮಿಸಿ ಬೇಗ ನೀರು ತಲುಪುವಂತೆ ವ್ಯವಸ್ಥೆ ಮಾಡಬೇಕು. 18 ಕೆರೆಗಳನ್ನು ತುಂಬಿಸುವ ಕಾಮಗಾರಿ ಶೀಘ್ರವಾಗಿ ಆರಂಭಿಸಬೇಕು. ಬಸವೇಶ್ವರ ಏತ ನೀರಾವರಿ ಯೋಜನೆ ಕಾಮಗಾರಿ ತ್ವರಿತಗೊಳಿಸಬೇಕು’ ಎಂದು ಆಗ್ರಹಿಸಿದರು.

ಬಾಗಲಕೋಟೆ ಜಿಲ್ಲಾ ಘಟಕದ ಅಧ್ಯಕ್ಷ ಬಸವಂತ ಕಾಂಬಳೆ, ತಾಲ್ಲೂಕು ಘಟಕದ ಉಪಾಧ್ಯಕ್ಷ ಪಾರಿಶ ಯಳಗೂಡ, ಮಹಾದೇವ ಕುಚ್ಚನೂರ, ಜಗದೀಶ ಪಾರಶೆಟ್ಟಿ, ದುಂಡಪ್ಪ ತನಂಗಿ, ಸಂಗಪ್ಪ ಕರಿಗಾರ, ನಿಂಗಪ್ಪ ಮಂಟೂರ, ಚನಗೌಡ ಇಮಗೌಡರ, ಪಿಂಟು ಕಬಾಡಗಿ, ಮಹಾದೇವ ಹೊನಮಾನೆ, ಈರಪ್ಪ ಅಂಗಡಿ, ಕಿರಣ ಮಿಸಾಳ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.