ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಜಿಲ್ಲೆಯಲ್ಲಿ 193 ಪ್ರಕರಣಗಳು ದೃಢ

ಡೆಂಗಿ: ಜಾಗೃತಿ ಜಾಥಾ, ಆರೋಗ್ಯ ಇಲಾಖೆಯಿಂದ ಸಮೀಕ್ಷೆ
Last Updated 26 ಜುಲೈ 2019, 13:23 IST
ಅಕ್ಷರ ಗಾತ್ರ

ಬೆಳಗಾವಿ: ‘ಜಿಲ್ಲೆಯಲ್ಲಿ ಜನವರಿಯಿಂದ ಇಲ್ಲಿವರೆಗೆ 246 ರಕ್ತ ಮಾದರಿಗಳನ್ನು ಪರೀಕ್ಷಿಸಲಾಗಿದ್ದು ಅದರಲ್ಲಿ 26 (ಡೆಂಗಿ) ದೃಢಪಟ್ಟಿರುತ್ತವೆ. ಇವುಗಳಲ್ಲಿ ಬೆಳಗಾವಿ ನಗರ, ಚಿಕ್ಕೋಡಿ ಹಾಗೂ ಅಥಣಿಯಲ್ಲಿ ಹೆಚ್ಚನ ಪ್ರಕರಣಗಳು ವರದಿಯಾಗಿವೆ. ಅದರಂತೆ ಬಿಮ್ಸ್‌ ಆಸ್ಪತ್ರೆಯಲ್ಲಿ 167 ಪ್ರಕರಣಗಳು ದೃಢಪಟ್ಟಿವೆ’ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಎಂ.ಎಸ್. ಪಲ್ಲೇದ ತಿಳಿಸಿದರು.

ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನಗರಪಾಲಿಕೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಕಚೇರಿ ಸಹಯೋಗದಲ್ಲಿ ಶುಕ್ರವಾರ ಇಲ್ಲಿನ ವಂಟಮೂರಿಯಲ್ಲಿ ಡೆಂಗಿ ವಿರೋಧಿ ಮಾಸಾಚರಣೆ ಅಂಗವಾಗಿ ನಡೆದ ಜಾಗೃತಿ ಜಾಥಾದಲ್ಲಿ ಅವರು ಮಾತನಾಡಿದರು.

‘ಡೆಂಗಿ ಜ್ವರ ವೈರಸ್‌ನಿಂದ ಉಂಟಾಗುವ ಕಾಯಿಲೆ. ಇದು ಸೋಂಕು ಹೊಂದಿದ ಈಡಿಸ್ ಇಜಿಪ್ಟೈ ಎಂಬ ಸೊಳ್ಳೆ ಕಚ್ಚುವುದರಿಂದ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಇದ್ದಕ್ಕಿದ್ದಂತೆ ತೀವ್ರ ಜ್ವರ, ವಿಪರೀತ ತಲೆ ನೋವು, ಕಣ್ಣುಗಳ ಹಿಂಭಾಗ, ಮಾಂಸಖಂಡ ಹಾಗೂ ಕೀಲುಗಳಲ್ಲಿ ವಿಪರಿತ ನೋವು ಕಾಣಿಸಿಕೊಳ್ಳುವುದು ಇದರ ಲಕ್ಷಣವಾಗಿದೆ’ ಎಂದು ತಿಳಿಸಿದರು.

‘ನೀರಿನ ತೊಟ್ಟಿ, ಡ್ರಮ್‌, ಏರ್ ಕೂಲರ್ ಮೊದಲಾದವುಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಒಣಗಿಸಿ ಮತ್ತೆ ಭರ್ತಿ ಮಾಡ‌‌ಬೇಕು. ಕಳೆದ ವರ್ಷಕ್ಕೆ ಹೊಲಿಸಿದರೆ ಈ ಬಾರಿ ಜಿಲ್ಲೆಯಲ್ಲಿ ಡೆಂಗಿ ಪ್ರಕರಣಗಳು ಇಳಿಮುಖವಾಗಿವೆ. ಆದರೆ, ಇನ್ನೂ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿಲ್ಲ. ಹೀಗಾಗಿ, ಅರಿವು ಮೂಡಿಸಲಾಗುತ್ತಿದೆ’ ಎಂದು ಹೇಳಿದರು.

‘ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಆಶಾ ಮತ್ತು ಆರೋಗ್ಯ ಕಾರ್ಯಕರ್ತೆಯರು ಮನೆಗಳಿಗೆ ಭೇಟಿ ನೀಡಿ ಲಾರ್ವಾ ಸಮೀಕ್ಷೆ ನಡೆಸುವರು. ಡೆಂಗಿ ರೋಗದ ಲಕ್ಷಣಗಳು, ಮುಂಜಾಗ್ರತಾ ಕ್ರಮ ಹಾಗೂ ನಿಯಂತ್ರಣದ ಕುರಿತು ನಿವಾಸಿಗಳಿಗೆ ಅರಿವು ಮೂಡಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.

ನಗರಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಮತ್ತು ಡಿಎಚ್‌ಒ ಡಾ.ಶಶಿಕಾಂತ ವಿ.ಮುನ್ಯಾಳ ಚಾಲನೆ ನೀಡಿದರು. ‘ಯಾವುದೇ ಜ್ವರ ಬಂದರೂ ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತಪರೀಕ್ಷೆ ಮಾಡಿಸಿಕೊಳ್ಳಬೇಕು. ಚಿಕಿತ್ಸೆ ಪಡೆದುಕೊಳ್ಳಬೇಕು. ನಿರ್ಲಕ್ಷ್ಯ ವಹಿಸಬಾರದು. ಆಗ, ಸಾಂಕ್ರಾಮಿಕ ರೋಗಗಳಿಂದ ದೂರವಿರಬಹುದು’ ಎಂದರು.

ನಗರಪಾಲಿಕೆ ಆರೋಗ್ಯಾಧಿಕಾರಿ ಡಾ.ಶಶಿಧರ ನಾಡಗೌಡ, ಜಿಲ್ಲಾ ಸವೇಕ್ಷಣಾಧಿಕಾರಿ ಡಾ.ಬಿ.ಎನ್. ತುಕ್ಕಾರ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸಾವಿತ್ರಿ ಬೆಂಡಿಗೇರಿ, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಅನಿಲ ಕೊರಬು, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಂಜಯ ಡುಮ್ಮಗೋಳ, ಕೀಟಶಾಸ್ತ್ರಜ್ಞರಾದ ಗಣಪತಿ ಬಾರ್ಕಿ, ಶಿಲ್ಪಾ ಹಳೆಮನಿ, ಖಾತ್ರಿ ಗುಣಮಟ್ಟ ವಿಭಾಗದ ಜಿಲ್ಲಾ ಸಲಹೆಗಾರ್ತಿ ಡಾ.ಶಿವಲೀಲಾ ಶಿರೋಳ, ಪ್ರಭಾರ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಪಿ ಯಲಿಗಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT