ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮತಕ್ಷೇತ್ರದ ಅಭಿವೃದ್ಧಿಗೆ ನಡಹಳ್ಳಿ ಶ್ರಮಿಸಲಿ’

ರಾಜ್ಯಪಾಲರ ನಡೆ ಸಂಶಯಾಸ್ಪದ: ಅಪ್ಪಾಜಿ ನಾಡಗೌಡ ಟೀಕೆ
Last Updated 17 ಮೇ 2018, 6:54 IST
ಅಕ್ಷರ ಗಾತ್ರ

ಮುದ್ದೇಬಿಹಾಳ: ಈ ಚುನಾವಣೆಯಲ್ಲಿ ನನಗೆ 55,000ಕ್ಕೂ ಹೆಚ್ಚು ಮತದಾರರು ಬೆಂಬಲ ನೀಡಿದ್ದಾರೆ. ಇದು ಈ ಕ್ಷೇತ್ರದ ರಾಜಕೀಯ ಇತಿಹಾಸದಲ್ಲಿ ಅತಿ ಹೆಚ್ಚು ಮತ. ಈ ಎಲ್ಲ ಮತದಾರರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಸದಾಕಾಲ ಇವರಿಗೆಲ್ಲ ಚಿರಋಣಿಯಾಗಿರಬಯಸುತ್ತೇನೆ ಎಂದು ಚುನಾವಣೆಯಲ್ಲಿ ಸೋತ ಕಾಂಗ್ರೆಸ್ ಅಭ್ಯರ್ಥಿ ಸಿ.ಎಸ್.ನಾಡಗೌಡ ಹೇಳಿದರು.

ಅವರು ಇಲ್ಲಿನ ಪ್ರವಾಸಿ ಮಂದಿರದಲ್ಲಿ ಬುಧವಾರ ಪಕ್ಷದ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಹೊಸದಾಗಿ ಆಯ್ಕೆಗೊಂಡ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಅವರಿಗೆ ಶುಭವಾಗಲಿ. ಅವರಲ್ಲಿ ಸಹಕಾರ ಮನೋಭಾವ ಇರಲಿ. ಜನರ ನಿರೀಕ್ಷೆಗೆ ತಕ್ಕಂತೆ ಮುಂದುವರೆಯಿರಿ ಎಂದು ನೂತನ ಶಾಸಕರಿಗೆ ಸಲಹೆ ನೀಡಿದರು.

ಮತಕ್ಷೇತ್ರದಲ್ಲಿ ಜನಪರ ಕೆಲಸ ಮಾಡುವ ಮೂಲಕ ಜನರ ವಿಶ್ವಾಸಕ್ಕೆ ಚ್ಯುತಿ ಬರದಂತೆ ನೂತನ ಶಾಸಕರು ನಡೆದುಕೊಳ್ಳಬೇಕು. ನನ್ನ ಅಧಿಕಾರದ ಅವಧಿಯಲ್ಲಿ ಪ್ರಾರಂಭಗೊಂಡಿದ್ದ ಆಲಮಟ್ಟಿ ಎಡದಂಡೆ ಕಾಲುವೆ ನವೀಕರಣ, ನಾಗರಬೆಟ್ಟ, ಬೂದಿಹಾಳ ಪೀರಾಪುರ ಏತ ನೀರಾವರಿ, ವಸತಿ ಶಾಲೆ, ಐಟಿಐ ಕಾಲೇಜು, ಅಂಬೇಡ್ಕರ್ ಭವನ, ಎಸ್ಸಿ ಎಸ್ಟಿ ಜನರ ಗಂಗಾ ಕಲ್ಯಾಣ ಸೌಕರ್ಯ, ಕೃಷಿ ಸಂಶೋಧನಾ ಕೇಂದ್ರ ಮುಂತಾದವುಗಳನ್ನು ಮುಂದುವರೆಸಿಕೊಂಡು ಹೋಗಬೇಕು ಎಂದು ಮನವಿ ಮಾಡಿದರು.

ರಾಜ್ಯಪಾಲರ ನಡೆ ಸಂಶಯಾಸ್ಪದ: ರಾಜ್ಯದಲ್ಲಿ ಜೆಡಿಎಸ್, ಕಾಂಗ್ರೆಸ್ ದೋಸ್ತಿ ಮಾಡಿಕೊಂಡಿವೆ. ಈ ಹಂತದಲ್ಲಿ ರಾಜ್ಯಪಾಲರ ನಡೆ ಸಂಶಯಾಸ್ಪದವಾಗಿದೆ. ಕೋಮುವಾದಿ ಬಿಜೆಪಿ ದೂರ ಇಡಲು ಮಿತ್ರ ಪಕ್ಷಗಳ ಸಂಖ್ಯಾಬಲಕ್ಕೆ ರಾಜ್ಯಪಾಲರು ಸರ್ಕಾರ ರಚಿಸಲು ಅವಕಾಶ ಕೊಡಬೇಕು. ಗೋವಾ ಮತ್ತಿತರ ರಾಜ್ಯಗಳಲ್ಲಿ ಈ ಹಿಂದೆ ಏನಾಗಿತ್ತು ಅನ್ನೋದನ್ನು ಬಿಜೆಪಿ, ರಾಜ್ಯಪಾಲರು ಅವಲೋಕಿಸಬೇಕು. ಆ ರಾಜ್ಯಗಳಲ್ಲಿ ಅತಂತ್ರ ಸೃಷ್ಟಿಯಾದಾಗ ಸಂಖ್ಯಾಬಲ ಹೊಂದಿರುವ ಮಿತ್ರ ಪಕ್ಷಗಳಿಗೆ ಸರ್ಕಾರ ರಚಿಸಲು ಅವಕಾಶ ಕೊಡಲಾಗಿತ್ತು. ಇದನ್ನೇ ಇಲ್ಲಿಯೂ ಮುಂದುವರೆಸಬೇಕು. ಹೆಚ್ಚು ಶಾಸಕರನ್ನು ಹೊಂದಿರುವ ಜೆಡಿಎಸ್, ಕಾಂಗ್ರೆಸ್ ಮಿತ್ರಪಕ್ಷಕ್ಕೆ ಸರ್ಕಾರ ರಚಿಸಲು ರಾಜ್ಯಪಾಲರು ಆಹ್ವಾನ ನೀಡಬೇಕಾದದ್ದು ನ್ಯಾಯ ಎಂದು ನಾಡಗೌಡ ಹೇಳಿದರು.

ಸಭೆಯಲ್ಲಿ ಎಂ.ಬಿ.ನಾವದಗಿ, ಸಿದ್ದಣ್ಣ ಮೇಟಿ, ಎಪಿಎಂಸಿ ಅಧ್ಯಕ್ಷ ಗುರಣ್ಣ ಮೇಟಿ, ಎಸ್.ಜಿ.ಪಾಟೀಲ, ಪೃಥ್ವಿರಾಜ ನಾಡಗೌಡ, ಪುರಸಭೆ ಅಧ್ಯಕ್ಷ ಬಸನಗೌಡ ಪಾಟೀಲ, ಮಹ್ಮದರಫೀಕ್ ಶಿರೋಳ, ನರೇಂದ್ರ ಓಸ್ವಾಲ್ ಇದ್ದರು.

ಇಂಡಿ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸುವಷ್ಟು ಜನಾದೇಶ ನೀಡಿಲ್ಲ. ಇದರಿಂದ ಪಕ್ಷದ  ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ಸರ್ಕಾರ ರಚಿಸಲು ಪ್ರಯತ್ನಿಸುವುದು ತಪ್ಪು. ದೇಶದಲ್ಲಿ ಬಿಜೆಪಿ ಒಳ್ಳೆಯ ಆಡಳಿತ ನೀಡುತ್ತಿದೆ. ವಿಶ್ವದಲ್ಲಿಯೇ ಪಕ್ಷ ಒಳ್ಳೆಯ ಹೆಸರು ಮಾಡಿದೆ. ಇಂತಹ ಸಂದರ್ಭದಲ್ಲಿ ಪಕ್ಷದ ಅಧ್ಯಕ್ಷರಾದವರೇ ವಾಮಮಾರ್ಗ ಹಿಡಿದುಕೊಂಡು ರಾಜ್ಯದಲ್ಲಿ ಸರ್ಕಾರ ರಚಿಸಲು ಹೊರಟಿರುವುದು ಸಂಪೂರ್ಣ ತಪ್ಪು. ಆ ಕೆಲಸ ಎಂದೆಂದಿಗೂ ಮಾಡಬಾರದು ಎಂದು ವಿಜಯಪುರ ಜಿಲ್ಲಾ ಹಾಲು ಪ್ರಕೋಷ್ಠದ ಅಧ್ಯಕ್ಷ ಹಣಮಂತರಾಯಗೌಡ ಪಾಟೀಲ ಅಭಿಪ್ರಾಯಪಟ್ಟಿದ್ದಾರೆ.

ಅವರು ಬುಧವಾರ ಇಂಡಿ ಪಟ್ಟಣದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷ ಜಂಟಿಯಾಗಿ ಸರ್ಕಾರ ರಚಿಸಲು ಮುಂದಾಗಿವೆ. ಅವುಗಳಿಗೆ ಬಿಜೆಪಿ ಮತ್ತು ಪಕ್ಷದ ಅಧ್ಯಕ್ಷರು, ಪದಾಧಿಕಾರಿಗಳು ಮುಕ್ತವಾಗಿ ಅವಕಾಶ ಮಾಡಿಕೊಡಬೇಕು ಎಂದು ಹೇಳಿರುವ ಅವರು ಈ ಸಂದರ್ಭದಲ್ಲಿ ವಿವಿಧ ಪಕ್ಷಗಳ ಶಾಸಕರನ್ನು ತನ್ನತ್ತ ಸೆಳೆಯಲು ಕುದುರೆ ವ್ಯಾಪಾರ ಮಾಡಿದರೆ ಪಕ್ಷಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದಿದ್ದಾರೆ.

‘ಹಣದ ಆಮಿಷಕ್ಕೊಳಪಡಿಸಿ ಶಾಸಕರನ್ನು ತನ್ನತ್ತ ಸೆಳೆಯುವು ದಕ್ಕಾಗಿಯೇ ಕೆಲವು ಬಿಜೆಪಿ ಮುಖಂಡರನ್ನು ನೇಮಕ ಮಾಡಿ ದ್ದೇವೆ ಎಂದು ಹೇಳುವುದೂ ಕೂಡಾ ಅಕ್ಷಮ್ಯ ಎಂದಿರುವ ಅವರು ರಾಷ್ಟ್ರೀಯ ಪಕ್ಷ ಇಂತಹ ಕೆಲಸದಲ್ಲಿ ತೊಡಗಿಸಿಕೊಂಡರೆ ತಳಮಟ್ಟದಲ್ಲಿ ಪಕ್ಷ ಸಂಘಟನೆಗೆ ಮುಂದಾಗಿರುವ ಬಿಜೆಪಿ ನಿಷ್ಠಾವಂತ ಕಾರ್ಯಕರ್ತರಿಗೆ ಮುಜಗರ ಉಂಟಾಗುತ್ತದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಸಂವಿಧಾನದ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಬೇಕು. ಅದನ್ನು ಬಿಟ್ಟು ರಾಜ್ಯಪಾಲರ ಅಂಗಳವನ್ನು ದುರುಪಯೋಗ ಮಾಡಿಕೊಳ್ಳಬಾರದು. ನಮಗೆ ಜನಾದೇಶ ನೀಡುವವರೆಗೆ ಪಕ್ಷ ಸಂಘಟನೆಯಲ್ಲಿ ಮತ್ತು ರಾಜ್ಯದ ಅಭಿವೃದ್ಧಿ ಕೆಲಸಗಳಲ್ಲಿ ಮಗ್ನರಾ ಗಬೇಕು’ ಎಂದು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT