ಶನಿವಾರ, ಜನವರಿ 29, 2022
22 °C

ಸವದತ್ತಿ ಯಲ್ಲಮ್ಮ ಸೇರಿ ಹಲವು ದೇಗುಲಗಳಲ್ಲಿ ಸಾರ್ವಜನಿಕ ದರ್ಶನ ನಿಷೇಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರವಾದ ಸವದತ್ತಿಯ ಯಲ್ಲಮ್ಮನಗುಡ್ಡದ ರೇಣುಕಾ ಯಲ್ಲಮ್ಮ ದೇವಸ್ಥಾನ ಸೇರಿದಂತೆ 9 ದೇಗುಲಗಳಲ್ಲಿ ಸಾರ್ವಜನಿಕ ದರ್ಶನವನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಗುರುವಾರ ಆದೇಶ ಹೊರಡಿಸಿದ್ದಾರೆ.

ಸವದತ್ತಿ ತಾಲ್ಲೂಕಿನ ಜೋಗುಳಬಾವಿ ಸತ್ತೆಮ್ಮದೇವಿ, ರಾಮದುರ್ಗ ತಾಲ್ಲೂಕು ಗೊಡಚಿಯ ವೀರಭದ್ರೇಶ್ವರ, ರಾಯಬಾಗ ತಾಲ್ಲೂಕು ಚಿಂಚಲಿಯ ಮಾಯಕ್ಕದೇವಿ, ಬೆಳಗಾವಿ ತಾಲ್ಲೂಕು ಪಂತ ಬಾಳೇಕುಂದ್ರಿಯ ದತ್ತ ಮಂದಿರ, ಹುಕ್ಕೇರಿ ತಾಲ್ಲೂಕು ಬಡಕುಂದ್ರಿಯ ಹೊಳೆಮ್ಮದೇವಿ, ಕಾಗವಾಡ ತಾಲ್ಲೂಕು ಮಂಗಸೂಳಿಯ ಮಲ್ಲಯ್ಯ, ಅಥಣಿ ತಾಲ್ಲೂಕು ಖಿಳೇಗಾಂವದ ಬಸವೇಶ್ವರ ಹಾಗೂ ಕೊಕಟನೂರ ಗ್ರಾಮದ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಂಗಡಿಗಳನ್ನು ತೆರೆಯುವುದನ್ನು ಕೂಡ ನಿಷೇಧಿಸಲಾಗಿದೆ.

ಈ ದೇವಾಲಯಗಳಿಗೆ ಮಹಾರಾಷ್ಟ್ರ, ಗೋವಾ ಸೇರಿದಂತೆ ವಿವಿಧ ರಾಜ್ಯಗಳಿಂದ ಭಕ್ತರು ಬರುವ ಹಿನ್ನೆಲೆಯಲ್ಲಿ ನಿರ್ಬಂಧ ವಿಧಿಸಲಾಗಿದೆ. ಕೋವಿಡ್ ಮೊದಲನೇ ಹಾಗೂ 2ನೇ ಅಲೆಯ ಸಂದರ್ಭದಲ್ಲೂ ಈ ಕ್ರಮ ಕೈಗೊಳ್ಳಲಾಗಿತ್ತು.

‘ಕೋವಿಡ್–19 ಮತ್ತು ಓಮೈಕ್ರಾನ್‌ ಹರಡುವಿಕೆ ನಿಯಂತ್ರಿಸಲು ಹಾಗೂ ಸಾರ್ವಜನಿಕರ ಆರೋಗ್ಯ ಕಾಪಾಡುವ ಉದ್ದೇಶದಿಂದ ಕೈಗೊಂಡಿರುವ ಮುಂಜಾಗ್ರತಾ ಕ್ರಮ ವಹಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.

‘ಮುಂಬರುವ ದಿನಗಳಲ್ಲಿ ಜಿಲ್ಲೆಯಾದ್ಯಂತ ನಿಗದಿಯಾಗಿರುವ ಎಲ್ಲ ಧರ್ಮೀಯರ ಜಾತ್ರೆ, ವಿಶೇಷ ಉತ್ಸವ ಹಾಗೂ ಧಾ‌ರ್ಮಿಕ ಕಾರ್ಯಕ್ರಮಗಳನ್ನು ನಿರ್ಬಂಧಿಸಿದೆ. ದೇವಾಲಯದ ಆಡಳಿತ ಮಂಡಳಿಯವರು, ಅರ್ಚಕರು ಮತ್ತು ಸಿಬ್ಬಂದಿ ಸೇರಿ ಕೋವಿಡ್ ಮಾರ್ಗಸೂಚಿ ಪಾಲನೆಯೊಂದಿಗೆ ಪ್ರಾಂಗಣದೊಳಗೆ ನಡೆಸುವುದಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಆದೇಶ ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005 ಹಾಗೂ ಭಾರತೀಯ ದಂಡ ಸಂಹಿತೆ 188ರ ಪ್ರಕಾರ ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು