ಉಗರಗೋಳ: ಈ ಚಿಕ್ಕ ಹಳ್ಳಿಯಲ್ಲಿ ಆರಂಭಗೊಂಡ ಡಿಜಿಟಲ್ ಗ್ರಂಥಾಲಯ ಗ್ರಾಮೀಣ ಭಾಗದ ವಿದ್ಯಾರ್ಥಿಗಳು, ಯುವಜನರಿಗೆ ಹೊಸ ಅವಕಾಶಗಳನ್ನು ತೆರೆದಿದೆ.
ಇಲ್ಲಿನ ಗ್ರಾಮ ಪಂಚಾಯಿತಿ ಬಳಿ ಇರುವ ಹಳೇ ಗ್ರಂಥಾಲಯ ಚಿಕ್ಕದಾಗಿತ್ತು. ಇಂದಿನ ಅಗತ್ಯಕ್ಕೆ ತಕ್ಕಂತಹ ಪುಸ್ತಕಗಳು ಅಲ್ಲಿರಲಿಲ್ಲ. ಓದುಗರ ಸಂಖ್ಯೆಯೂ ಹೆಚ್ಚಿದ್ದರಿಂದ ಡಿಜಿಟಲ್ ಗ್ರಂಥಾಲಯ ಸ್ಥಾಪಿಸಬೇಕೆನ್ನುವ ಬೇಡಿಕೆಯಿತ್ತು. ಇದಕ್ಕೆ ಸ್ಪಂದಿಸಿದ ಗ್ರಾಮ ಪಂಚಾಯಿತಿ, 14 ಹಾಗೂ 15ನೇ ಹಣಕಾಸು ಯೋಜನೆಯಡಿ ₹4.90 ಲಕ್ಷ ವೆಚ್ಚದಲ್ಲಿ ಡಿಜಿಟಲ್ ಗ್ರಂಥಾಲಯ ನಿರ್ಮಿಸಿದೆ.
ಸುಸಜ್ಜಿತ ಕಟ್ಟಡದಲ್ಲಿ ನಿರ್ಮಾಣಗೊಂಡ ಈ ಗ್ರಂಥಾಲಯದಲ್ಲಿ 2 ಕಂಪ್ಯೂಟರ್‌ಗಳಿವೆ. ಅವುಗಳಿಗೆ ಇಂಟರ್‌ನೆಟ್ ಸಂಪರ್ಕ ಕಲ್ಪಿಸಲಾಗಿದೆ. ಸುರಕ್ಷತೆ ದೃಷ್ಟಿಯಿಂದ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಕತೆ, ಕಾದಂಬರಿ, ನಾಟಕ ಸೇರಿದಂತೆ ವಿವಿಧ ಪ್ರಕಾರಗಳ 2,700 ಪುಸ್ತಕಗಳಿವೆ. ಸ್ಪರ್ಧಾತ್ಮಕ ಪರೀಕ್ಷೆಗೆ ಪೂರಕವಾದ ಪುಸ್ತಕಗಳೂ ಇದರಲ್ಲಿ ಸೇರಿವೆ. ಪ್ರಚಲಿತ ವಿದ್ಯಮಾನಗಳನ್ನು ಅರಿಯಲು ಅನುಕೂಲವಾಗಲೆಂದು ವಿವಿಧ ದಿನಪತ್ರಿಕೆಗಳನ್ನು ತರಿಸಲಾಗುತ್ತಿದೆ.
ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಗ್ರಂಥಾಲಯ ತೆರೆದಿರಲಿದ್ದು, ನಿತ್ಯ 50ಕ್ಕೂ ಅಧಿಕ ಜನರು ಭೇಟಿ ನೀಡಿ, ತಮ್ಮಿಷ್ಟದ ಪುಸ್ತಕಗಳನ್ನು ಓದುತ್ತಿದ್ದಾರೆ. ಇದೇ ಮಾರ್ಗವಾಗಿ ಯಲ್ಲಮ್ಮನಗುಡ್ಡಕ್ಕೆ ಹೋಗುವ ಭಕ್ತರು, ಗ್ರಂಥಾಲಯಕ್ಕೆ ಭೇಟಿ ಕೊಡುತ್ತಿದ್ದಾರೆ.
ಪಿಎಸ್‍ಐ ಪರೀಕ್ಷೆ ತಯಾರಿಗೆ ಅನುಕೂಲ: ‘ಬಿ.ಎ ಪದವೀಧರನಾದ ನಾನು ಪಿಎಸ್‍ಐ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದೇನೆ. ಮನೆಯಲ್ಲಿ ಓದಲು ಪೂರಕವಾದ ವಾತಾವರಣವಿರಲಿಲ್ಲ. ಹೆಚ್ಚಿನ ಕಲಿಕಾ ಸಾಮಗ್ರಿಗಳೂ ಇಲ್ಲ. ಡಿಜಿಟಲ್ ಗ್ರಂಥಾಲಯ ಆರಂಭಿಸಿದ್ದರಿಂದ ಅಧ್ಯಯನಕ್ಕೆ ಅನುಕೂಲವಾಗಿದೆ. ಇಲ್ಲಿ ಹೆಚ್ಚಿನ ಸ್ಪರ್ಧಾತ್ಮಕ ಪರೀಕ್ಷೆ ಪುಸ್ತಕಗಳನ್ನು ತರಿಸುವಂತಾಗಲಿ ಎಂದು ಕರೆಪ್ಪ ಸಿದ್ಲಿ ‘ಪ್ರಜಾವಾಣಿ’ಗೆ ತಿಳಿಸಿದರು.
-ಮಲ್ಲನಗೌಡ ಪಾಟೀಲ
ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಡಿಜಿಟಲ್ ಗ್ರಂಥಾಲಯ ನಿರ್ಮಿಸಿದ್ದೇವೆ. ಮುಂದೆ ಇನ್ನಷ್ಟು ಸ್ಪರ್ಧಾತ್ಮಕ ಪುಸ್ತಕಗಳನ್ನು ತರಿಸುತ್ತೇವೆ ಮಹೇಶ ತೆಲಗಾರ ಪಿಡಿಒ ಉಗರಗೋಳ
ನಾನು ಎಲ್‍ಎಲ್‍ಬಿ ಓದುತ್ತಿದ್ದೇನೆ. ಡಿಜಿಟಲ್ ಗ್ರಂಥಾಲಯದಿಂದ ಕಲಿಕೆಗೆ ಅನುಕೂಲವಾಗಿದೆ. ಅಂತರ್ಜಾಲ ಸೌಕರ್ಯದ ಮೂಲಕ ಸಾಕಷ್ಟು ಮಾಹಿತಿ ಪಡೆಯಲು ಸಾಧ್ಯವಾಗುತ್ತಿದೆ -ಸಂಗಮೇಶ ಉಪಲಿ ವಿದ್ಯಾರ್ಥಿ
ಕ್ಷೇತ್ರದಲ್ಲಿ ಡಿಜಿಟಲ್ ಗ್ರಂಥಾಲಯಗಳ ಸ್ಥಾಪನೆಗೆ ಒತ್ತು ಕೊಡುತ್ತೇನೆ. ಉಗರಗೋಳ ಗ್ರಂಥಾಲಯಕ್ಕೆ ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗೆ ಪೂರಕವಾದ ಪುಸ್ತಕ ಒದಗಿಸುತ್ತೇನೆ -ವಿಶ್ವಾಸ ವೈದ್ಯ ಶಾಸಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.