ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿಂಡಲಕೊಪ್ಪ: ಅಭಿವೃದ್ಧಿಯೇ ಇಲ್ಲಿ ಯಾತನೆ!

ರಸ್ತೆ, ಚರಂಡಿಗಳು ಮೇಲೆ, ಮನೆಗಳು ಮೂರ್ನಾಲ್ಕು ಅಡಿ ಕೆಳಗೆ
Published 6 ಜೂನ್ 2023, 19:30 IST
Last Updated 6 ಜೂನ್ 2023, 19:30 IST
ಅಕ್ಷರ ಗಾತ್ರ

ಪ್ರದೀಪ ಮೇಲಿನಮನಿ

ಚನ್ನಮ್ಮನ ಕಿತ್ತೂರು: ತಾಲ್ಲೂಕಿನಲ್ಲಿಯೇ ಹಿಂದುಳಿದ ಪ್ರದೇಶವೆಂದು ಗುರುತಿಸಿಕೊಂಡಿದ್ದ ಕುಲವಳ್ಳಿ ಗುಡ್ಡ ಸೇರಿದಂತೆ ಒಂಬತ್ತು ಗ್ರಾಮಗಳು ನಿಧಾನವಾಗಿ ಅಭಿವೃದ್ಧಿ ಕಡೆಗೆ ಹೆಜ್ಜೆ ಹಾಕುತ್ತಿವೆ. ಸಿಮೆಂಟ್ ರಸ್ತೆ, ಕುಡಿಯುವ ನೀರು, ಶಾಲೆ ಮತ್ತಿತರ ಮೂಲಸೌಲಭ್ಯಗಳನ್ನು ಈ ಪ್ರದೇಶಕ್ಕೆ ಒದಗಿಸಲಾಗುತ್ತಿದೆ. ಆದರೆ, ಗುಡ್ಡದ ವ್ಯಾಪ್ತಿಯ ದಿಂಡಲಕೊಪ್ಪ ಗ್ರಾಮದಲ್ಲಿ ಅಭಿವೃದ್ಧಿಯೇ ಜನರಿಗೆ ಯಾತನೆಯಾಗಿ ಮಾರ್ಪಟ್ಟಿದೆ.

‘ಮೂರು ಓಣಿಗಳಿರುವ ಈ ಊರಿನ ಸರ್ಕಾರಿ ಶಾಲೆ ಹಿಂಭಾಗದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ಇದರ ಬದಿಗೆ ಚರಂಡಿ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ, ರಸ್ತೆ ಹಾಗೂ ಚರಂಡಿ ನಿರ್ಮಾಣದಿಂದ ಕೆಲವರ ಮನೆಗಳು ಮೂರ್ನಾಲ್ಕು ಅಡಿ ಕೆಳಗೆ ಹೋಗಿವೆ. ಮನೆಯಿಂದ ರಸ್ತೆಗೆ ಬರಬೇಕೆಂದರೆ ಚಿಕ್ಕ ಏಣಿ ಹಚ್ಚಿ, ಮೇಲಕ್ಕೇರಬೇಕಾದ ಪರಿಸ್ಥಿತಿ ಬಂದಿದೆ’ ಎಂದು ಕುಟುಂಬಸ್ಥರು ‘ಪ್ರಜಾವಾಣಿ’ ಎದುರು ಅಳಲು ತೋಡಿಕೊಂಡರು.

‘ಅಭಿವೃದ್ಧಿ ಕೆಲಸಗಳಿಂದ ನಮಗೆ ಅನುಕೂಲವಾಗುತ್ತದೆ ಎಂದು ಭಾವಿಸಿದ್ದೆವು. ಆದರೆ, ಮತ್ತೆ ಸಂಕಷ್ಟ ಎದುರಿಸುವಂತಾಗಿದೆ’ ಎಂಬುದು ಅವರ ಅಳಲು.

‘ಇದೇ ಊರಲ್ಲಿ ಇಬ್ಬರು ಗ್ರಾಮ ಪಂಚಾಯ್ತಿ ಸದಸ್ಯರಿದ್ದಾರೆ. ಅವರಾದರೂ ನಮ್ಮ ಸಮಸ್ಯೆಗೆ ಕೂಡಲೇ ಸ್ಪಂದಿಸಬೇಕು’ ಎಂಬುದು ಗ್ರಾಮಸ್ಥರ ಆಗ್ರಹ.

ಸುಮಾರು 1 ಸಾವಿರ ಜನಸಂಖ್ಯೆ ಹೊಂದಿದ ಊರಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. 400 ಅಡಿಯವರೆಗೆ ಕೊಳವೆಬಾವಿ ಕೊರೆಯಿಸಿದರೂ ನೀರು ಸಿಗುತ್ತಿಲ್ಲ. ಹಾಗಾಗಿ ಪಕ್ಕದ ನಿಂಗಾಪುರದಿಂದ ಈ ಗ್ರಾಮಕ್ಕೆ ನೀರು ಸರಬರಾಜು ಆಗಬೇಕಿದೆ. ಜನರು ದಿನವಿಡೀ ನಲ್ಲಿಯ ಮುಂದೆ ಕೊಡಗಳನ್ನಿಟ್ಟು ನೀರಿಗಾಗಿ ಕಾಯುವ ಪರಿಸ್ಥಿತಿ ಇದೆ.

ಬಿಷ್ಟಪ್ಪ ಶಿಂಧೆ
ಬಿಷ್ಟಪ್ಪ ಶಿಂಧೆ

ಇನ್ನೂ ಸಿಗದ ಹಕ್ಕುಪತ್ರ: ಬ್ರಿಟಿಷರಿಗೆ ಸಿಂಹಸ್ವಪ್ನವಾಗಿ ಕಾಡಿದ್ದ ಸಂಗೊಳ್ಳಿ ರಾಯಣ್ಣನನ್ನು ಹಿಡಿದು ಕೊಟ್ಟಿದ್ದರಿಂದ ಸಾವಿರಾರು ಎಕರೆ ಭೂಮಿಯನ್ನು ಇದೇ ಪ್ರದೇಶದಲ್ಲಿ ‘ಇನಾಂ’ ರೂಪದಲ್ಲಿ ನೀಡಲಾಗಿದೆ. ಕುಲವಳ್ಳಿ ಗುಡ್ಡದ ವ್ಯಾಪ್ತಿಯ ಒಂಬತ್ತು ಹಳ್ಳಿಗಳ ನೂರಾರು ರೈತರು ಈ ಭೂಮಿ ಉಳುಮೆ ಮಾಡುತ್ತಿದ್ದಾರೆ. ಇದರ ಹಕ್ಕುಪತ್ರಗಳನ್ನು ನಮಗೆ ಕೊಡಬೇಕೆಂದು ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ. ಆದರೆ, ಈವರೆಗೂ ಬೇಡಿಕೆ ಈಡೇರಿಲ್ಲ.

‘ಇನಾಂ’ ಪಡೆದ ಇನಾಮದಾರ ಕುಟುಂಬಕ್ಕೂ ಮತ್ತು ಅರಣ್ಯ ಇಲಾಖೆ ಮಧ್ಯೆ ನಡೆಯುತ್ತಿರುವ ವ್ಯಾಜ್ಯ ನ್ಯಾಯಾಲಯದಲ್ಲಿದೆ. ಇದು ಇತ್ಯರ್ಥವಾದರೆ ಸಾಗುವಳಿ ಮಾಡುತ್ತಿರುವ ರೈತರಿಗೆ ಭೂಮಿಯ ಹಕ್ಕು ಸಿಗಲಿದೆ. 1989ರಲ್ಲಿ ರೈತ ಸಂಘದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಬಾಬಾಗೌಡ ಪಾಟೀಲ ಅವರ ಕಾಲಕ್ಕೆ ಅಂತ್ಯ ಕಂಡಿತು ಎಂದು ರೈತರು ನಂಬಿದ್ದ ಸಮಸ್ಯೆ ಇಂದಿನವರೆಗೂ ಜೀವಂತವಾಗಿದೆ. ಹಿಂದೆ ಕಂದಾಯ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪ ಮತ್ತು ಕಿತ್ತೂರು ಶಾಸಕರಾಗಿದ್ದ ಡಿ.ಬಿ.ಇನಾಮದಾರ ಈ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದರು. ಅದೂ ಸಾಧ್ಯವಾಗದೆ ಹೋಯಿತು ಎನ್ನುತ್ತಾರೆ ಕುಲವಳ್ಳಿ ಗುಡ್ಡದ ಸಾಗುವಳಿದಾರರು.

ಚನ್ನಮ್ಮನ ಕಿತ್ತೂರು ತಾಲ್ಲೂಕಿನ ದಿಂಡಲಕೊಪ್ಪದಲ್ಲಿ ಕೊಡಗಳ ಗುಡ್ಡೆ ಹಾಕಿ ನೀರಿಗಾಗಿ ಕಾಯುತ್ತಿರುವ ಗ್ರಾಮಸ್ಥ
ಚನ್ನಮ್ಮನ ಕಿತ್ತೂರು ತಾಲ್ಲೂಕಿನ ದಿಂಡಲಕೊಪ್ಪದಲ್ಲಿ ಕೊಡಗಳ ಗುಡ್ಡೆ ಹಾಕಿ ನೀರಿಗಾಗಿ ಕಾಯುತ್ತಿರುವ ಗ್ರಾಮಸ್ಥ

ದಿಂಡಲಕೊಪ್ಪದ ಸಮಸ್ಯೆ ಪರಿಹರಿಸಲು ಗ್ರಾಮ ಪಂಚಾಯ್ತಿಯಲ್ಲೇ ಸಭೆ ಕರೆಯಲಾಗಿತ್ತು. ಆದರೆ ಆ ಊರಿನ ಸದಸ್ಯರು ಪಾಲ್ಗೊಳ್ಳಲಿಲ್ಲ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದರೆ ಗ್ರಾಮಸ್ಥರ ಸಮಸ್ಯೆಗೆ ಪರಿಹಾರ ಸಿಗುತ್ತದೆ –ಬಿಷ್ಟಪ್ಪ ಶಿಂಧೆ ಅಧ್ಯಕ್ಷ ಕುಲವಳ್ಳಿ ಗ್ರಾಮ ಪಂಚಾಯ್ತಿ

ಖಾಸಗಿ ವಾಹನಗಳ ಅವಲಂಬನೆ ಕುಲವಳ್ಳಿ ಗುಡ್ಡದ ಇತರೆ ಗ್ರಾಮಗಳಲ್ಲಿ ಒಂದಿಲ್ಲೊಂದು ಸಮಸ್ಯೆ ಇಂದಿಗೂ ಜೀವಂತವಾಗಿವೆ. ಸುಮಾರು ಎರಡು ದಶಕದ ಹಿಂದೆ ಕುಲವಳ್ಳಿಗೆ ಹೋಗಲು ಸರಿಯಾದ ರಸ್ತೆ ಇರಲಿಲ್ಲ. ಪಕ್ಕದಲ್ಲಿರುವ ಸಣ್ಣ ಊರುಗಳಿಗೆ ಸಂಪರ್ಕ ಸಾಧಿಸುವುದೇ ದೊಡ್ಡ ಸಾಹಸವಾಗಿತ್ತು. ಪ್ರೌಢಶಾಲೆಯೂ ಇರಲಿಲ್ಲ. ಈ ಊರಿನ ಹುಡುಗನೊಬ್ಬ ಕಿತ್ತೂರು ಪಟ್ಟಣಕ್ಕೆ ಬಂದು ಕಲಿತು ಎಸ್ಸೆಸ್ಸೆಲ್ಸಿ ಪಾಸಾಗಿದ್ದಾನೆ ಎಂದರೆ ಇಡೀ ಊರೇ ಸಂಭ್ರಮಪಡುವ ವಾತಾವರಣವಿತ್ತು. ಈಗ ಸಮಯ ಉರುಳಿದೆ. ಗುಡ್ಡದ ಹೃದಯಭಾಗ ಆಗಿರುವ ಕತ್ರಿದಡ್ಡಿಯಲ್ಲಿ ಸರ್ಕಾರಿ ಪ್ರೌಢಶಾಲೆ ಆರಂಭವಾಗಿದೆ. ಪ್ರಾಥಮಿಕ ಶಾಲೆ ಅಂಗನವಾಡಿ ಕೇಂದ್ರಗಳನ್ನು ತೆರೆಯಲಾಗಿದೆ. ಆದರೆ ಸಾರಿಗೆ ಸೌಲಭ್ಯ ಮಾತ್ರ ಸುಧಾರಣೆ ಕಂಡಿಲ್ಲ. ಖಾಸಗಿ ವಾಹನಗಳನ್ನೇ ಆಶ್ರಯಿಸಬೇಕಾದ ಪರಿಸ್ಥಿತಿ ಮುಂದುವರಿದಿದೆ ಎಂಬುದು ನಾಗರಿಕರು ಮತ್ತು ವಿದ್ಯಾರ್ಥಿಗಳ ಅಳಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT