ಮಧ್ಯಮ ವರ್ಗದವರಿಗೆ ತೆರಿಗೆ ‘ಹೊರೆ’

7
ಚಿನ್ನಾಭರಣ ವ್ಯಾಪಾರಿಗಳಿಂದ ಮಿಶ್ರ ಪ್ರತಿಕ್ರಿಯೆ

ಮಧ್ಯಮ ವರ್ಗದವರಿಗೆ ತೆರಿಗೆ ‘ಹೊರೆ’

Published:
Updated:
Deccan Herald

ಬೆಳಗಾವಿ: ದೇಶದಾದ್ಯಂತ ಏಕರೂಪ ‘ಸರಕು ಮತ್ತು ಸೇವಾ ತೆರಿಗೆ’ (ಜಿಎಸ್‌ಟಿ) ವ್ಯವಸ್ಥೆ ಜಾರಿಯಾದ ನಂತರ ಚಿನ್ನಾಭರಣಗಳ ಮೇಲಿನ ತೆರಿಗೆ ಶೇ 1ರಿಂದ ಶೇ 3ಕ್ಕೆ ಏರಿದೆ. ಗರಿಷ್ಠ ಮುಖಬೆಲೆಯ ನೋಟುಗಳ ಚಲಾವಣೆ ರದ್ದಾದಾಗ ಕುಸಿದಿದ್ದ ವ್ಯಾಪಾರ, ಜಿಎಸ್‌ಟಿಯಿಂದಾಗಿ ಮತ್ತಷ್ಟು ಕಡಿಮೆಯಾಗಿದೆ. ಶ್ರಾವಣದಲ್ಲಿ ಚೇತರಿಕೆ ನಿರೀಕ್ಷಿಸುತ್ತಿದ್ದೇವೆ. – ನಗರದ ಚಿನ್ನಾಭರಣ ವ್ಯಾಪಾರಿಗಳ ಅನಿಸಿಕೆ ಇದು.

ಜಿಎಸ್‌ಟಿ ಬಂದ ಒಂದು ವರ್ಷದಲ್ಲಿ ಚಿನ್ನಾಭರಣ ವ್ಯಾಪಾರದ ಮೇಲೆ ಆಗಿರುವ ಪರಿಣಾಮ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅವರು, ಸಾಧಕ–ಬಾಧಕಗಳನ್ನು ಹಂಚಿಕೊಂಡರು.

ಖಡೇಬಜಾರ್‌, ಸಮಾದೇವಿ ಗಲ್ಲಿ, ತಿಲಕವಾಡಿ, ಶಹಾಪುರ ಭಾಗದಲ್ಲಿ ಅತಿ ಹೆಚ್ಚಿನ ಆಭರಣ ಅಂಗಡಿಗಳಿವೆ. ಇದಲ್ಲದೇ, ಮಲಬಾರ್, ತನಿಷ್ಕ್‌, ಜೊಯಾಲುಕ್ಕಾಸ್‌, ಪಿ.ಎನ್‌. ಗಾಡ್ಗೀಳ್‌, ಕಲ್ಯಾಣ್‌, ಲಕ್ಷ್ಮಿ ಗೋಲ್ಡ್‌ ಪ್ಯಾಲೇಸ್‌ ಮೊದಲಾದ ದೊಡ್ಡ ಮಳಿಗೆಗಳಿವೆ. ನಗರದಲ್ಲಿ 250ಕ್ಕೂ ಹೆಚ್ಚು ಚಿನ್ನಾಭರಣ ಅಂಗಡಿಗಳಿವೆ. 

ಸಮಯ ಬೇಕಾಗಬಹುದು:

‘ಹಿಂದೆ ಚಿನ್ನ, ಬೆಳ್ಳಿ, ಪ್ಲಾಟಿನಂ, ಡೈಮಂಡ್‌ಗಳ ಮೇಲೆ ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯ ತೆರಿಗೆ ವಿಧಿಸಲಾಗುತ್ತಿತ್ತು. ಜಿಎಸ್‌ಟಿ ಬಂದ ನಂತರ ಒಂದೇ ತೆರಿಗೆ ನಿಗದಿಯಾಗಿದೆ. ತಯಾರಿಕೆ ಶುಲ್ಕ ಕಡಿಮೆ ಮಾಡಿ, ಮಾರುತ್ತೇವೆ. ಈ ಮೂಲಕ ಗ್ರಾಹಕರನ್ನು ಆಕರ್ಷಿಸಬೇಕಾಗಿದೆ. ಜಿಎಸ್‌ಟಿಯಿಂದ ವ್ಯಾಪಾರ ಕಡಿಮೆಯಾಗಿದೆ. ಸುಧಾರಿಸಿಕೊಳ್ಳಲು ಸಮಯ ಬೇಕಾಗಬಹುದು. ಕೆಲವರು ತೆರಿಗೆ ಕಡಿಮೆ ಇದ್ದ ರಾಜ್ಯಗಳಲ್ಲಿ ಖರೀದಿಸಿ, ತಮ್ಮ ರಾಜ್ಯದಲ್ಲಿ ಮಾರಿ ಲಾಭ ಗಳಿಸುತ್ತಿದ್ದರು. ಈಗ ಅದಕ್ಕೆ ಅವಕಾಶ ಇಲ್ಲದಂತಾಗಿದೆ’ ಎಂಬ ಅಭಿ‍ಪ್ರಾಯಗಳಿವೆ.

‌‌‘ಹಿಂದೆ 22 ಕ್ಯಾರೆಟ್‌ ಚಿನ್ನದ ಬೆಲೆ ಗ್ರಾಂ.ಗೆ ₹ 2600ರಿಂದ ₹ 2700ವರೆಗೆ ಇತ್ತು. ಈಗ, ₹ 2800ರಿಂದ ₹ 2900ರವರೆಗೆ ಇದೆ. ಜಿಎಸ್‌ಟಿ ಸೇರಿದಂತೆ ವಿವಿಧ ಕಾರಣದಿಂದಾಗಿ, ಗ್ರಾಹಕರು ಚಿನ್ನಾಭರಣ ಖರೀದಿಗೆ ಹಿಂದೇಟ ಹಾಕುತ್ತಿದ್ದಾರೆ. ಇದರಿಂದಾಗಿ, ಕೊಂಚ ವ್ಯಾಪಾರ ಕಡಿಮೆಯಾಗಿದೆ. ಇತ್ತೀಚೆಗೆ ಚೇತರಿಕೆ ಕಾಣಿಸುತ್ತಿದೆ. ಚಿನ್ನದ ಬೆಲೆ ಕಡಿಮೆಯಾಗುವ ಸಾಧ್ಯತೆ ಇದ್ದು, ವ್ಯಾಪಾರ ವೃದ್ಧಿಸಬಹುದು’ ಎಂದು ಮಲಬಾರ್‌ ಗೋಲ್ಡ್‌ ಅಂಡ್‌ ಡೈಮಂಡ್ಸ್‌ ಮಾರುಕಟ್ಟೆ ವ್ಯವಸ್ಥಾಪಕ ಶೋಯೆಬ್ ಎಂ. ಸೈಯದ್‌ ತಿಳಿಸಿದರು.

ಸಲ್ಲಿಕೆ ಸುಲಭ:

ಈ ಹಿಂದೆ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಪ್ರತ್ಯೇಕ ತೆರಿಗೆ ಕೊಡಬೇಕಾಗಿತ್ತು. ಈಗ ಒಂದೇ ತೆರಿಗೆ ಇದೆ. ವಹಿವಾಟು ಕಡಿಮೆ ಇರುವವರು ತಿಂಗಳಿಗೆ, ಹೆಚ್ಚಿದ್ದವರು ಮೂರು ತಿಂಗಳಿಗೊಮ್ಮೆ ವಹಿವಾಟಿನ ಲೆಕ್ಕಪತ್ರಗಳನ್ನು ಸಲ್ಲಿಸಬೇಕು. ದಾಖಲೆಗಳನ್ನು ಕಂಪ್ಯೂಟರ್‌ನಲ್ಲಿ ನಿರ್ವಹಿಸುವವವರಿಗೆ ಸುಲಭವಾಗುತ್ತದೆ’ ಎನ್ನುತ್ತಾರೆ ವ್ಯಾಪಾರಿಗಳು.

‘ಬಡವರು, ಮಧ್ಯಮ ವರ್ಗದವರು ಚಿನ್ನಾಭರಣವನ್ನು ಯಾವಾಗಲೋ ಒಮ್ಮೆ ಖರೀದಿಸಬಹುದು. ಶ್ರೀಮಂತರಿಗೆ ಶೇ 3ರಷ್ಟು ತೆರಿಗೆ ಅಂತಹ ಹೊರೆಯೇನೂ ಆಗುವುದಿಲ್ಲ. ಹೀಗಾಗಿ, ಕೇಂದ್ರದ ನಿರ್ಧಾರ ಸ್ವಾಗತಾರ್ಹ’ ಎಂಬ ಅಭಿಪ್ರಾಯವೂ ಗ್ರಾಹಕರಿಂದ ವ್ಯಕ್ತವಾಗುತ್ತಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !