ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಗಿದ ಉಪಸಮರ; ಶುರು ಲೆಕ್ಕಾಚಾರ

ಎಲ್ಲೆಲ್ಲಿ ಯಾರಿಗೆ ಬೆಂಬಲ ಎಂಬ ಚರ್ಚೆಗಳು ಆರಂಭ
Last Updated 18 ಏಪ್ರಿಲ್ 2021, 10:52 IST
ಅಕ್ಷರ ಗಾತ್ರ

ಬೆಳಗಾವಿ: ತೀವ್ರ ಕುತೂಹಲ ಮೂಡಿಸಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಮತದಾನ ಶಾಂತಿಯುತವಾಗಿ ಮುಕ್ತಾಯವಾಗಿದ್ದು, ಮತದಾರ ಪ್ರಭುಗಳು ಯಾರಿಗೆ ಬೆಂಬಲ ನೀಡಿರಬಹುದು ಎನ್ನುವ ಲೆಕ್ಕಾಚಾರಗಳು, ಊಹೆಗಳು, ವಿಶ್ಲೇಷಣೆ ಮತ್ತು ಚರ್ಚೆಗಳು ಆರಂಭಗೊಂಡಿವೆ.

ಕಣದಲ್ಲಿದ್ದ 10 ಅಭ್ಯರ್ಥಿಗಳ ಭವಿಷ್ಯ ವಿದ್ಯುನ್ಮಾನ ಮತಯಂತ್ರಗಳಲ್ಲಿ ಭದ್ರವಾಗಿದೆ. ಅವು ‘ಸ್ಟ್ರಾಂಗ್ ರೂಂ’ ಸೇರಿದ್ದು, ಮೇ 2ರಂದು ಇಲ್ಲಿನ ಆರ್‌ಪಿಡಿ ಕಾಲೇಜಿನಲ್ಲಿ ನಡೆಯುವ ಮತ ಎಣಿಕೆಯತ್ತ ಎಲ್ಲರ ಚಿತ್ತ ನೆಟ್ಟಿದೆ.

ಬಿಜೆಪಿಯ ಮಂಗಲಾ ಅಂಗಡಿ ಹಾಗೂ ಕಾಂಗ್ರೆಸ್‌ನ ಸತೀಶ ಜಾರಕಿಹೊಳಿ ನಡುವೆ ತೀವ್ರ ಜಿದ್ದಾಜಿದ್ದಿ ಕಂಡುಬಂದಿತ್ತು. ಇವರೂ ಸೇರಿದಂತೆ ಹತ್ತು ಮಂದಿಯಲ್ಲಿ ಗೆಲ್ಲುವವರು ಯಾರು ಎನ್ನುವ ಚರ್ಚೆ ನಡೆಯುತ್ತಿದೆ.

‘ಪ್ರಮುಖ ಪಕ್ಷಗಳ ಇಬ್ಬರಲ್ಲಿ ಒಬ್ಬರು ಗೆಲ್ಲಬಹುದು. ಆದರೆ, ಅಂತರ ದೊಡ್ಡ ಪ್ರಮಾಣದಲ್ಲಿ ಇರುವುದಿಲ್ಲ’ ಎನ್ನುವ ಮಾತು ಕ್ಷೇತ್ರದ ವಿವಿಧೆಡೆ ಸಂಚರಿಸಿದಾಗ ಕೇಳಿಬಂದಿತು. ಮತದಾರರ ಮನದಾಳವೇನು ಎನ್ನುವುದನ್ನು ತಿಳಿದುಕೊಳ್ಳುವುದಕ್ಕೆ ಎಲ್ಲರೂ ಕಾತರರಾಗಿದ್ದಾರೆ.

ಘಟಾನುಘಟಿಗಳು:

ಎರಡೂ ಪ್ರಮುಖ ‍ಪಕ್ಷಗಳ ರಾಜ್ಯ ನಾಯಕರಲ್ಲದೇ, ರಾಜ್ಯ ಉಸ್ತುವಾರಿಗಳೂ ಬಂದು ಪ್ರಚಾರ ನಡೆಸಿದ್ದಾರೆ. ಬಿಜೆಪಿ ಪರವಾಗಿ ಕೇಂದ್ರ ಸಚಿವರೂ ಫೀಲ್ಡಿಗಿಳಿದಿದ್ದರು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಜ್ವರದ ನಡುವೆಯೂ ಇಲ್ಲಿ ಪ್ರಚಾರ ಕೈಗೊಂಡಿದ್ದರು.

ಉಭಯ ಪಕ್ಷದವರೂ ಜಾತಿಗಳ ಓಲೈಕೆಯಲ್ಲಿ ತೊಡಗಿದ್ದರು. ಯಾವ ಸಮಾಜ ಹೆಚ್ಚಿದೆಯೋ ಆ ಸಮಾಜದ ನಾಯಕರನ್ನು ಮತಬೇಟೆಗೆ ಇಳಿಸಿದ್ದವು. ಆಡಳಿತಾರೂಢ ಬಿಜೆಪಿಯು ಶಾಸಕರು, ಸಚಿವರು, ವಿಧಾನಪರಿಷತ್‌ ಸದಸ್ಯರು, ಸಂಸದರು, ನಿಗಮ–ಮಂಡಳಿಗಳ ಅಧ್ಯಕ್ಷರಿಗೆ ಹೊಣೆಗಾರಿಕೆ ವಹಿಸಿತ್ತು. ಮರಾಠಿ ಭಾಷಿಗರನ್ನು ಒಲಿಸಿಕೊಳ್ಳುವ ಪ್ರಯತ್ನವೂ ಅಭ್ಯರ್ಥಿಗಳಿಂದ ನಡೆದಿದೆ. ಅದೆಲ್ಲವೂ ಎಷ್ಟರ ಮಟ್ಟಿವಾಗಿ ‘ಮತವಾಗಿ’ ಪರಿವರ್ತನೆ ಆಗಿದೆ ಎನ್ನುವುದು ಕುತೂಹಲ ಮೂಡಿಸಿದೆ.

ಪರಿಣಾಮ ಬೀರಿದೆಯೇ?:

ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಹಾಗೂ ಶಿವಸೇನಾ ಬೆಂಬಲಿತ ಅಭ್ಯರ್ಥಿ ಶುಭಂ ಶೆಳಕೆ ಪರವಾಗಿ ಮಹಾರಾಷ್ಟ್ರದ ಶಿವಸೇನಾ ನಾಯಕ ಸಂಜಯ ರಾವುತ್ ಬಂದು ‍ಪ್ರಚಾರ ನಡೆಸಿದ ನಂತರದ ಪರಿಣಾಮಗಳೇನು? ಮಹಾರಾಷ್ಟ್ರದ ವಿಧಾನಸಭೆ ವಿರೋಧಪಕ್ಷದ ನಾಯಕ ದೇವೇಂದ್ರ ಫಡಣವಿಸ್ ಬಿಜೆಪಿ ಪರವಾಗಿ ‍ಮತಯಾಚಿಸಿದ್ದಕ್ಕೆ ಮರಾಠಿ ಭಾಷಿಗರ ಸ್ಪಂದನೆ ಹೇಗಿರಲಿದೆ ಎನ್ನುವ ಚರ್ಚೆ ಮತ್ತು ಮತಗಳ ವಿಭಜನೆ ಆಗಿದ್ದರೆ ಯಾರಿಗೆ ಲಾಭ ಆಗಲಿದೆ ಎನ್ನುವ ವಿಶ್ಲೇಷಣೆಯೂ ನಡೆದಿದೆ.

ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ, ಈ ಬಾರಿ ಬಹಳ ಕಡಿಮೆ ಮತದಾನವಾಗಿದೆ. ಬೆಳಗಾವಿ ಉತ್ತರದಲ್ಲಿ ಬಹಳ ಕಡಿಮೆ ಮಂದಿ ಹಕ್ಕು ಚಲಾಯಿಸಿದ್ದಾರೆ. ಗೋಕಾಕದಲ್ಲಿ ಅತಿ ಹೆಚ್ಚು ಮಂದಿ ಮತಗಟ್ಟೆಗೆ ಬಂದಿದ್ದಾರೆ. ಇದೆಲ್ಲದರ ಪರಿಣಾಮ ಏನಾಗಿರಬಹುದು, ಯಾವ ಮತಗಟ್ಟೆಯಲ್ಲಿ ಯಾವ ಪಕ್ಷಕ್ಕೆ ಬೆಂಬಲ ಸಿಕ್ಕಿರಬಹುದು, ಗೋಕಾಕದ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಪ್ರಚಾರದಲ್ಲಿ ಕಾಣಿಸಿಕೊಳ್ಳಲಿಲ್ಲವಾದ್ದರಿಂದ ಯಾರಿಗೆ ಲಾಭ ಆಗಬಹುದು, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಕೊನೆ ಕ್ಷಣದಲ್ಲಿ ಪ್ರಚಾರಕ್ಕೆ ಇಳಿದಿದ್ದರಿಂದ ಆಗಿರುವ ಅನುಕೂಲವೇನು, ಸತೀಶ ಜಾರಕಿಹೊಳಿ ವರ್ಚಸ್ಸಿಗೆ ಸಿಕ್ಕಿರುವ ಮನ್ನಣೆ ಎಷ್ಟು ಎಂಬಿತ್ಯಾದಿ ಪ್ರಮುಖ ಚರ್ಚೆಗಳು ರಾಜಕೀಯ ವಲಯದಲ್ಲಿ ನಡೆಯುತ್ತಿವೆ. ಈ ಎಲ್ಲ ಪ್ರಶ್ನೆಗಳಿಗೂ ಮತದಾರರು ನೀಡಿರುವ ಉತ್ತರ ಮೇ 2ರಂದು ಬಹಿರಂಗವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT