ಮೂಡಲಗಿ: ತಾಲ್ಲೂಕಿನ ವಿವಿಧ ಗ್ರಾಮಗಳ ಬೆಳೆಗಳಿಗೆ ರೋಗ ಬಾಧಿಸಿರುವ ತೋಟಗಳಿಗೆ ಪೀಡೆ ಸರ್ವೇಕ್ಷಣಾ ತಂಡವು ಸೋಮವಾರ ಭೇಟಿ ನೀಡಿತು.
ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕ ಎಂ.ಎಂ. ನದಾಫ, ಬೆಳಗಾವಿಯ ಜಂಟಿ ಕೃಷಿ ನಿರ್ದೇಶಕರ ಕಾರ್ಯಾಲಯದ ಸಹಾಯಕ ಕೃಷಿ ನಿರ್ದೇಶಕ ಸಿ.ಐ. ಹೂಗಾರ ಹಾಗೂ ತುಕ್ಕಾನಟ್ಟಿಯ ಕೆವಿಕೆ ಕೇಂದ್ರದ ಕೃಷಿ ವಿಜ್ಞಾನಿ ಡಾ. ಧನಂಜಯ ಚೌಗಲಾ ಹಾಗೂ ಕೃಷಿ ಸಂಜೀವಿನಿ ಸಿಬ್ಬಂದಿ ರೈತರ ಜಮೀನಿನಲ್ಲಿ ಕಬ್ಬಿನ ಬೆಳೆಗೆ ಗೊಣ್ಣೆಹುಳು ಇತರೆ ಬೆಳೆಗಳಿಗೆ ಬಾಧಿಸಿರುವ ರೋಗಗಳ ಬಗ್ಗೆ ಪರಿಶೀಲಿಸಿ ರೈತರಿಗೆ ಸಲಹೆ ನೀಡಿದ್ದಾರು.
‘ಕಲ್ಲೋಳಿ, ಲಕ್ಷ್ಮೇಶ್ವರ, ಕೌಜಲಗಿ, ಬಿಲಕುಂದಿ, ಮೆಳವಂಕಿ, ಕೊಳವಿ, ಹೂಲಿಕಟ್ಟಿ ಗ್ರಾಮಗಳ ಬೆಳೆ ವೀಕ್ಷಣೆ ಮಾಡಲಾಯಿತು. ಕಳೆದ ವರ್ಷ ಮಳೆ ಕೊರತೆಯಿಂದಾಗಿ ಈ ವರ್ಷದ ಬೆಳೆಗೆ ಗೊಣ್ಣೆಹುಳು ಬಾಧಿಸಿದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಎಂ.ಎಂ. ನದಾಫ ಹೇಳಿದರು.
ಮೆಟರೈಸಿಯಂ 5ರಿಂದ 10 ಕೆಜಿ 500 ಕೆಜಿ ಸೆಗಣಿ ಗೊಬ್ಬರದಲ್ಲಿ ಬೆರೆಸಿ ಹಾಕುವುದು. ಪ್ರತಿ ವರ್ಷ ಫೆಬ್ರುವರಿ, ಮಾರ್ಚ್, ಏಪ್ರಿಲ್ ತಿಂಗಳಿನಲ್ಲಿ ಲೈಟ್ ಟ್ರ್ಯಾಪ್ ಮೂಲಕ ಗೊಣ್ಣೆ ಹುಳುವಿನ ತಾಯಿ ಕೀಟವನ್ನು ನಾಶಪಡಿಸುವಲ್ಲಿ ಮುಂಜಾಗ್ರತೆ ವಹಿಸಬೇಕು. ಪಿಪ್ರೋನಿಲ್ ಹರಳು 5ರಿಂದ 6 ಕೆಜಿ ಪ್ರತಿ ಎಕರೆಗೆ ಹಾಕುವುದು. ಕೊನೆಗೆ ಕ್ಲೋರೋಫೈರಿಪಾಸ್ 10 ಮಿಲಿಯನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಕಬ್ಬಿನ ಬೆಳೆಗೆ ಸಿಂಪಡಿಸಬೇಕು ಎಂದು ಸಲಹೆ ನೀಡಿದರು.
ಸೋಯಾಬಿನ್ ಬೆಳೆಯಲ್ಲಿ ಕಾಯಿ ಹಂತದಲ್ಲಿ ನೀರಿನಲ್ಲಿ ಕರಗುವ 13:0:45 ರಸಗೊಬ್ಬರವನ್ನು 100 ಗ್ರಾಂ ಪ್ರತಿ ಪಂಪಿಗೆ ಹಾಕಿ ಸಿಂಪಡಿಸಲು ಸೂಚಿಸಿದರು.