ಗುರುವಾರ , ಜೂನ್ 24, 2021
27 °C

ಭಿನ್ನಮತ ಈಗ ಮುಗಿದ ಅಧ್ಯಾಯ: ಸಚಿವ ರಮೇಶ ಜಾರಕಿಹೊಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಕಾಂಗ್ರೆಸ್‌–ಜೆಡಿಎಸ್‌ ಸರ್ಕಾರ ಸುಭದ್ರವಾಗಿದೆ. ಐದು ವರ್ಷ ಅಧಿಕಾರದ ಅವಧಿ ಪೂರೈಸುತ್ತದೆ. ಅತೃಪ್ತ ಶಾಸಕರು ಎನ್ನುವವರು ಯಾರೂ ಇಲ್ಲ. ಭಿನ್ನಮತ ಈಗ ಮುಗಿದ ಅಧ್ಯಾಯ’ ಎಂದು ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಇಲ್ಲಿ ಭಾನುವಾರ ಹೇಳಿದರು.

‘ನಮ್ಮ ಶಾಸಕರೆಲ್ಲರೂ ಪಕ್ಷದೊಂದಿಗೆ ಇದ್ದಾರೆ’ ಎಂದು ಪತ್ರಕರ್ತರಿಗೆ ತಿಳಿಸಿದರು.

‘ಸಹೋದರರಾದ ಬಾಲಚಂದ್ರ ಜಾರಕಿಹೊಳಿ ಹಾಗೂ ಸತೀಶ ಜಾರಕಿಹೊಳಿ ಸಚಿವರಾಗಿದ್ದಾಗ ಸರ್ಕಾರಿ ವಾಹನಗಳನ್ನು ಹೆಚ್ಚಾಗಿ ಬಳಸುತ್ತಿರಲಿಲ್ಲ. ನಾನೂ ಹಾಗೆಯೇ ಮಾಡುತ್ತಿದ್ದೇನೆ. ಎಸ್ಕಾರ್ಟ್ ಬಳಸುತ್ತಿಲ್ಲ. ಅದಕ್ಕೆಂದು ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ’ ಎಂದರು.

‘ವಾಲ್ಮೀಕಿ ಸಮುದಾಯದ ಮತ್ತೊಬ್ಬರಿಗೆ ಸಚಿವ ಸ್ಥಾನ ನೀಡಬೇಕು ಎನ್ನುವುದು ನಮ್ಮ ಬೇಡಿಕೆ. ಕೊಡುವುದು, ಬಿಡುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ’ ಎಂದು ಪ್ರತಿಕ್ರಿಯಿಸಿದರು.

ಸರ್ಕಾರ ಬೀಳುವುದಿಲ್ಲ

ಪ್ರತ್ಯೇಕವಾಗಿ ಮಾತನಾಡಿದ ಶಾಸಕ ಸತೀಶ ಜಾರಕಿಹೊಳಿ, ‘ಮೂರು, ನಾಲ್ಕು ಶಾಸಕರು ಚೆನ್ನೈ–ಮುಂಬೈಗೆ ಹೋಗುವುದರಿಂದ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ. ಅವರವರ ವೈಯಕ್ತಿಕ ಕೆಲಸಗಳಿಗೆ ಹೋಗಿರಬಹುದು. ಅವರೆಲ್ಲರೂ ನಮ್ಮೊಂದಿಗೇ ಇದ್ದಾರೆ. ಬೇರೆ ಕಾರಣಗಳಿಂದ ಹೋಗಿದ್ದರೆ ಅದನ್ನು ಪಕ್ಷ ವಿರೋಧಿ ಚಟುವಟಿಕೆ ಎಂದು ಪರಿಗಣಿಸಲಾಗುವುದಿಲ್ಲ’ ಎಂದು ಹೇಳಿದರು.

‘ಎಲ್ಲರಿಗೂ ಸಚಿವ ಸ್ಥಾನ ನೀಡಬೇಕು ಎನ್ನುವ ಆಸೆ ಇಲ್ಲ. ಅಕ್ಟೋಬರ್‌ ಮೊದಲ ತಿಂಗಳು ಸಂಪುಟ ವಿಸ್ತರಣೆ ನಡೆಯಲಿದೆ. ಕೆಲವು ಸಮರ್ಥರಿಗೆ ಕೊಟ್ಟೇ ಕೊಡುತ್ತಾರೆ. ಸಂಪುಟ ವಿಸ್ತರಣೆಗೂ, ಬಿಜೆಪಿಯ ಆಪರೇಷನ್‌ ಕಮಲಕ್ಕೂ ಸಂಬಂಧವಿಲ್ಲ’ ಎಂದರು.

‘ಸಚಿವ ರಮೇಶ ಜಾರಕಿಹೊಳಿ ಎಸ್ಕಾರ್ಟ್‌ ಬಳಸುತ್ತಿಲ್ಲ, ಖಾಸಗಿ ವಾಹನದಲ್ಲಿ ಓಡಾಡುತ್ತಿದ್ದಾರೆ ಎಂದರೆ ಸರ್ಕಾರ ಬೀಳುತ್ತದೆ ಎಂದು ಕಲ್ಪನೆ ಮಾಡಿಕೊಳ್ಳುವುದಕ್ಕೆ ಬರುವುದಿಲ್ಲ. ಅವರು ಪಕ್ಷದ ಪರವಾಗಿ ಇರುತ್ತಾರೆ. ಸಮಸ್ಯೆಗಳಿರಬಹುದು; ಅದನ್ನು ಸರಿಪಡಿಸುವುದಾಗಿ ವರಿಷ್ಠರು ಭರವಸೆ ನೀಡಿದ್ದಾರೆ. ಸೆ. 25ರಂದು ಪಕ್ಷದ ಶಾಸಕಾಂಗ ಸಭೆ ನಡೆಯಲಿದೆ. ವಿಧಾನಪರಿಷತ್ ಚುನಾವಣೆ ಬಗ್ಗೆ ಚರ್ಚಿಸಲು ಕರೆದಿದ್ದಾರೆ. ಸಮಸ್ಯೆಗಳಿರುವ ಬಗ್ಗೆ ಯಾರಾದರೂ ಶಾಸಕರು ಪ್ರಸ್ತಾಪಿಸಿದರೆ ವರಿಷ್ಠರು ಚರ್ಚಿಸಬಹುದು’ ಎಂದು ಪ್ರತಿಕ್ರಿಯಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು