ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿಗೆ ‘ಅತಿಥಿ’ಯಂತಾದ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ

ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನೆಗೆ ‘ಗ್ರಹಣ‘
Last Updated 22 ಜನವರಿ 2022, 3:36 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲಾ ಉಸ್ತುವಾರಿಯ ಹೊಣೆ ಹೊತ್ತಿರುವ ಜಲಸಂಪನ್ಮೂಲ ಸಚಿವರೂ ಆಗಿರುವ ಗೋವಿಂದ ಕಾರಜೋಳ ಅವರು ಇಲ್ಲಿಗೆ ‘ಅತಿಥಿ’ಯಂತೆ ಆಗಿದ್ದಾರೆ.

ನಿಯಮಿತವಾಗಿ ಅವರು ಜಿಲ್ಲೆಗೆ ಭೇಟಿ ಕೊಡುತ್ತಿಲ್ಲದಿರುವುದು ಮತ್ತು ಸರ್ಕಾರಿ ಅಧಿಕಾರಿಗಳ ಸಭೆ ನಡೆಸದಿರುವುದು ಅಭಿವೃದ್ಧಿ ಕಾಮಗಾರಿಗಳು ಚುರುಕು ಪಡೆಯದಿರುವುದಕ್ಕೆ ಕಾರಣವಾಗಿದೆ ಎಂಬ ಅಸಮಾಧಾನದ ಮಾತುಗಳು ಸಾರ್ವಜನಿಕ ವಲಯದಲ್ಲಿ ಹಾಗೂ ಆಡಳಿತಾರೂಢ ಬಿಜೆಪಿ ವಲಯದಲ್ಲೂ ಕೇಳಿಬರುತ್ತಿದೆ.

ಜಿಲ್ಲೆಯಾದ್ಯಂತ ಕೋವಿಡ್ ಪರಿಸ್ಥಿತಿ ಉಲ್ಬಣಿಸುತ್ತಿದ್ದರೂ, ಮೂರನೇ ಅಲೆಯು ತೀವ್ರ ಸ್ವರೂಪ ಪಡೆಯುತ್ತಿದ್ದರೂ ನಿರ್ವಹಣೆ ಮತ್ತು ಪೂರ್ವ ಸಿದ್ಧತೆ ಕುರಿತು ಮೇಲ್ವಿಚಾರಣೆ ಕೈಗೊಳ್ಳುವುದಕ್ಕಾಗಿ ಸಚಿವರು ಇಲ್ಲಿಗೆ ಬಂದು ಸಭೆ ನಡೆಸಿಲ್ಲ.

ಕುಂದುಕೊರತೆ ಕೇಳೋರಿಲ್ಲ:

ಜಿಲ್ಲಾಡಳಿತದಿಂದ, ಜ.3ರಂದು ಶಿವಬಸವ ನಗರದ ಎಸ್‌ಜಿಬಿಐಟಿಯಲ್ಲಿ ಹಮ್ಮಿಕೊಂಡಿದ್ದ 15ರಿಂದ 18 ವರ್ಷದವರಿಗೆ ಕೋವಿಡ್ ಲಸಿಕೆ ಹಾಕುವ ಅಭಿಯಾನ ಉದ್ಘಾಟನೆಯಲ್ಲಿ ಅವರು ಭಾಗವಹಿಸಿದ್ದರು. ನಂತರ, ಇತ್ತ ಸುಳಿದಿಲ್ಲ. ಅದಕ್ಕೂ ಹಿಂದಯೂ ಅವರು ಆಗೊಮ್ಮೆ–ಈಗೊಮ್ಮೆಯಷ್ಟೆ ಭೇಟಿ ಕೊಡುತ್ತಿದ್ದಾರೆ. ಬಂದರೂ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತೆರಳುತ್ತಿದ್ದಾರೆ. ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸುವ ಕೆಲಸಕ್ಕೆ ಅವರು ಆದ್ಯತೆ ಕೊಡುತ್ತಿಲ್ಲ.

ಜನಸಾಮಾನ್ಯರ ಮನವಿಗಳನ್ನು ಸ್ವೀಕರಿಸಿ, ಸಂಬಂಧಿಸಿದ ಇಲಾಖೆಗಳ ಗಮನಕ್ಕೆ ತಂದು ವಿಲೇವಾರಿ ಮಾಡುವ ನಿಟ್ಟಿನಲ್ಲಿ ಸಂಪರ್ಕ ಸೇತುವೆಯಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ಉಸ್ತುವಾರಿ ಸಚಿವರ ಅಧಿಕೃತ ಕಚೇರಿಯನ್ನು ಕೂಡ ಜಿಲ್ಲಾ ಕೇಂದ್ರದಲ್ಲಿ ಆರಂಭಿಸಲಾಗಿಲ್ಲ. ರಾಷ್ಟ್ರೀಯ ಹಬ್ಬಗಳು ಮೊದಲಾದ ಸಂದರ್ಭದಲ್ಲಿ ಮಾತ್ರವೇ ಅವರು ಭೇಟಿ ಕೊಡುತ್ತಿರುವುದು ಕಂಡುಬಂದಿದೆ.

ಅವಕಾಶವೇ ಸಿಕ್ಕಿಲ್ಲ:

ಕೋವಿಡ್ 1ನೇ ಅಲೆಯಲ್ಲಿ ನೆರೆಯ ಧಾರವಾಡದ ಸಚಿವ ಜಗದೀಶ ಶೆಟ್ಟರ್ ಅವರಿಗೆ ಜಿಲ್ಲಾ ಉಸ್ತುವಾರಿ ನೀಡಲಾಗಿತ್ತು. ಅವರು ವಾರಕ್ಕೊಮ್ಮೆ ಕೋವಿಡ್ ಪರಿಸ್ಥಿತಿ ಕುರಿತು ಸಭೆ ಮಾಡುತ್ತಿದ್ದರು. ಇತರ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆಯನ್ನೂ ನಡೆಸುತ್ತಿದ್ದರು. ಅವರ ಬಳಿಕ ಉಸ್ತುವಾರಿ ಸಚಿವರಾಗಿದ್ದ ಜಿಲ್ಲೆಯವರೇ ಆಗಿದ್ದ ರಮೇಶ ಜಾರಕಿಹೊಳಿ ಅವರೂ ನಿಯಮಿತವಾಗಿ ಸಭೆ ನಡೆಸಿ, ಅಧಿಕಾರಿಗಳಿಗೆ ಚುರುಕು ಮುಟ್ಟಿಸುತ್ತಿದ್ದರು. ಕ್ಷೇತ್ರದ ಸಮಸ್ಯೆಗಳನ್ನು ಹೇಳಿಕೊಳ್ಳಲು ಜನಪ್ರತಿನಿಧಿಗಳಾದ ಶಾಸಕರಿಗೆ ಅವಕಾಶ ಸಿಗುತ್ತಿತ್ತು.

ಜಿಲ್ಲೆಯವರೇ ಆಗಿರುವ ಸಚಿವರಾದ ಉಮೇಶ ಮತ್ತು ಶಶಿಕಲಾ ಜೊಲ್ಲೆ, ತಮ್ಮ ಕ್ಷೇತ್ರದ ಪ್ರಗತಿ ಪರಿಶೀಲನೆಗೆ ಆದ್ಯತೆ ನೀಡಿದ್ದಾರೆ.

2021ರ ಜುಲೈ 8ರಂದು ಸುವರ್ಣ ವಿಧಾನಸೌಧದಲ್ಲಿ ಕರ್ನಾಟಕ ಅಭಿವೃದ್ಧಿ ಕಾ‌ರ್ಯಕ್ರಮಗಳ (ಕೆಡಿಪಿ) ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯನ್ನು ಸಚಿವ ಕಾರಜೋಳ ನಡೆಸಿದ್ದರು. ಬಳಿಕ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಕರೆದಿಲ್ಲ. ಜಿಲ್ಲೆಯ ಮಟ್ಟಕ್ಕೆ ಅತ್ಯಂತ ಮಹತ್ವದ ಸಭೆ ಇದಾಗಿದೆ. ಶಾಸಕರು ಕೂಡ ಬಂದು ಕ್ಷೇತ್ರದ ಸಮಸ್ಯೆಗಳನ್ನು ಹೇಳಿಕೊಳ್ಳುವುದಕ್ಕೆ ಹಾಗೂ ಚರ್ಚಿಸಿ ಪರಿಹಾರ ಕಂಡುಕೊಳ್ಳುವುದಕ್ಕೆ ಮತ್ತು ಅಧಿಕಾರಿಗಳಿ ಬಿಸಿ ಮುಟ್ಟಿಸುವುದಕ್ಕೆ ಮುಖ್ಯವಾಗಿದೆ. ಆದರೆ, ಆ ಅವಕಾಶವೇ ಶಾಸಕರಿಗೆ ಬಹಳ ತಿಂಗಳುಗಳಿಂದ ಸಿಕ್ಕಿಲ್ಲ. ಕೋವಿಡ್, ಚಳಿಗಾಲದ ಅಧಿವೇಶನ, ಚುನಾವಣೆ ಮೊದಲಾದ ನೆಪಗಳನ್ನು ಹೇಳಿ ಸಭೆಯನ್ನೇ ನಡೆಸಿಲ್ಲ. ಮಹದಾಯಿ ಸೇರಿದಂತೆ ಪ್ರಮುಖ ನೀರಾವರಿ ಯೋಜನೆಗಳ ಪ್ರಗತಿ ಪರಿಶೀಲನೆಗೂ ಮುಂದಾಗಿಲ್ಲ.

ಈ ಬಗ್ಗೆ ಪ್ರತಿಕ್ರಿಯೆಗೆ ಸಚಿವರು ಲಭ್ಯವಾಗಲಿಲ್ಲ.

***

ಕೇಳುವವರೆ ಇಲ್ಲ

ಇಲಾಖಾವಾರು ಪ್ರತ್ಯೇಕವಾಗಿ ಸಭೆ ನಡೆಸಿದರೆ ಮಾತ್ರ ಸಮಸ್ಯೆಗಳು ಬಗೆಹರಿಯುತ್ತವೆ. ನಾನು ಉಸ್ತುವಾರಿ ಸಚಿವ ಆಗಿದ್ದಾಗ ಆ ರೀತಿ ಮಾಡುತ್ತಿದ್ದೆ. ಆದರೆ, ಈಗ ಸಮಸ್ಯೆಗಳನ್ನು ಕೇಳುವವರೇ ಇಲ್ಲವಾಗಿದ್ದಾರೆ.

–ಸತೀಶ ಜಾರಕಿಹೊಳಿ, ಶಾಸಕ, ಯಮಕನಮರಡಿ ಕ್ಷೇತ್ರ

***

ಸಚಿವರ ಗಮನಕ್ಕೆ ತರುವೆ

ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ಕಾರ್ಯ ನಿಯಮಿತವಾಗಿ ನಡೆಯಬೇಕಾಗುತ್ತದೆ. ಈ ನಿಟ್ಟಿನಲ್ಲಿ ಶೀಘ್ರವೇ ಕೆಡಿಪಿ ಸಭೆ ಕರೆಯುವಂತೆ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರುವೆ.

–ಆನಂದ ಮಾಮನಿ, ವಿಧಾನಸಭೆ ಉಪಸಭಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT