ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ರಾಜಿ–ಸಂಧಾನದ ಮೂಲಕ ಪ್ರಕರಣಗಳ ಇತ್ಯರ್ಥ: ನ್ಯಾಯಾಧೀಶ ಸಿ.ಎಂ. ಜೋಶಿ

ರಾಷ್ಟ್ರೀಯ ಲೋಕ ಅದಾಲತ್ ಮಾರ್ಚ್‌ 12ರಂದು
Last Updated 21 ಫೆಬ್ರುವರಿ 2022, 8:18 IST
ಅಕ್ಷರ ಗಾತ್ರ

ಬೆಳಗಾವಿ: ‘ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಮಾರ್ಚ್ 12ರಂದು ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲೂ ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಸಿ.ಎಂ. ಜೋಶಿ ತಿಳಿಸಿದರು.

‘ಭೂಸ್ವಾಧೀನ ಪರಿಹಾರ, ಚೆಕ್ ಬೌನ್ಸ್, ಕೌಟುಂಬಿಕ ಸಮಸ್ಯೆ ಮತ್ತಿತರ ಪ್ರಕರಣಗಳನ್ನು ಅದಾಲತ್‍ನಲ್ಲಿ ಇತ್ಯರ್ಥಪಡಿಸಲು ಅವಕಾಶವಿದೆ. ಅಂತಹ 18ಸಾವಿರ ಪ್ರಕರಣಗಳನ್ನು ಗುರುತಿಸಲಾಗಿದೆ. ರಾಜಿ–ಸಂಧಾನದ ಮೂಲಕ ಬಗೆಹರಿಸಲು ಯತ್ನಿಸಲಾಗುವುದು’ ಎಂದು ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಅವರು ಮಾಹಿತಿ ನೀಡಿದರು.

‘ಜಿಲ್ಲೆಯಲ್ಲಿ ಪ್ರತಿ ವರ್ಷ ಇತ್ಯರ್ಥಗೊಳ್ಳುವ ಒಟ್ಟು ಪ್ರಕರಣಗಳ ಪೈಕಿ, ಶೇ.20ರಷ್ಟು ಪ್ರಕರಣಗಳು ಲೋಕ ಅದಾಲತ್‍ನಲ್ಲಿ ಆಗುತ್ತವೆ. ಈ ಬಾರಿಯ ಅದಾಲತ್‌ಗೆ ಪೂರಕವಾಗಿ ನಿತ್ಯ ಸಂಜೆ 4ರಿಂದ 6ರವರೆಗೆ ಕಕ್ಷಿದಾರರೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ಇದರ ಅಂತಿಮ ಘಟ್ಟ ಮಾರ್ಚ್ 12ರಂದು ನಡೆಯಲಿದೆ’ ಎಂದು ಹೇಳಿದರು.

ಸಮಾಜದ ಸ್ವಾಸ್ಥ್ಯ ಕಾಪಾಡಲು:‘ಹಿರಿಯ ನ್ಯಾಯಾಧೀಶರು ಹಾಗೂ ಅನುಭವಿ ವಕೀಲರು ಅದಾಲತ್‌ನಲ್ಲಿ ಪಾಲ್ಗೊಳ್ಳುತ್ತಾರೆ. ಅವರು ಕಕ್ಷಿದಾರರ ಅಭಿಪ್ರಾಯ ಆಲಿಸಿ, ಸಂಧಾನದ ಮೂಲಕ ಪ್ರಕರಣ ಇತ್ಯರ್ಥಕ್ಕೆ ಯತ್ನಿಸುತ್ತಾರೆ. ಅದಾಲತ್‌ನಲ್ಲಿ ಹೆಚ್ಚಿನ ಪ್ರಕರಣ ಇತ್ಯರ್ಥವಾದರೆ, ನ್ಯಾಯಾಲಯಗಳ ಮೇಲಿನ ಹೊರೆ ತಗ್ಗಲಿದೆ. ಕಕ್ಷಿದಾರರಿಗೂ ಅನುಕೂಲವಾಗಲಿದೆ. ಸಮಾಜದ ಸ್ವಾಸ್ಥ್ಯ ಕಾಪಾಡುವುದು ಕೂಡ ಸಾಧ್ಯವಾಗಲಿದೆ’ ಎನ್ನುತ್ತಾರೆ ಅವರು.

‘ಕೋವಿಡ್ ಪರಿಸ್ಥಿತಿಯ ಕಾರಣದಿಂದ ಜನರು ನ್ಯಾಯಾಲಯಗಳಿಗೆ ಬರುವುದು ರಾಜಿ–ಸಂಧಾನ ಪ್ರಕ್ರಿಯೆಯಲ್ಲಿ ಭಾಗವಹಿಸುವುದಕ್ಕೆ ತೊಂದರೆಯಾಗಿತ್ತು. ಹೀಗಾಗಿ ಈ ಬಾರಿ ಬಹಳ ಹೆಚ್ಚಿನ ಪ್ರಮಾಣದಲ್ಲಿ ಪ್ರಕರಣಗಳು ಬರುವ ಸಾಧ್ಯತೆ ಇದೆ. ಚನ್ನಮ್ಮನ ಕಿತ್ತೂರು ಹಾಗೂ ಖಾನಾಪುರದಲ್ಲಿ ಭಾನುವಾರವೂ ಸಂಧಾನಕ್ಕೆ ಮಾತುಕತೆ ನಡೆದಿದೆ. ಇದು ಪ್ರೋತ್ಸಾಹದಾಯಕ ನಡೆಯಾಗಿದೆ. ರಾಜಿ ಮೂಲಕ ಪ್ರಕರಣಗಳನ್ನು ಇತ್ಯರ್ಥ‍ಪಡಿಸಿಕೊಳ್ಳಲು ಜನರಲ್ಲಿ ಒಲವು ಕಂಡುಬರುತ್ತಿದೆ. ಪ್ರಾಧಿಕಾರದಿಂದಲೂ ಅರಿವು ಮೂಡಿಸಲಾಗುತ್ತಿದೆ’ ಎಂದು ತಿಳಿಸಿದರು.

ಸಮಾಧಾನ ಆಗುವಂತಹ ರೀತಿಯಲ್ಲಿ:‘ಎರಡು ಕಡೆಯವರಿಗೂ ಸಮಾಧಾನ ಆಗುವಂತಹ ರೀತಿಯಲ್ಲಿ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗುತ್ತದೆ. ಹೀಗಾಗಿ, ಸಮಾಜದಲ್ಲಿ ನೆಮ್ಮದಿ ನೆಲೆಸುವ ನಿಟ್ಟಿನಲ್ಲಿ ಅದಾಲತ್‌ ಅನ್ನು ಬಳಸಿಕೊಳ್ಳಬೇಕು. ಇಲ್ಲಿ ಭಾಗವಹಿಸಿದರೆ, ಹಣ ಖರ್ಚು ಮಾಡುವುದು ತಪ್ಪುತ್ತದೆ. ನ್ಯಾಯಾಲಯಕ್ಕೆ ಕಟ್ಟಿದ್ದ ಶುಲ್ಕವನ್ನೂ ವಾಪಸ್‌ ಪಡೆದುಕೊಳ್ಳಬಹುದು’ ಎಂದರು.

‘ನಿತ್ಯ ಸಂಜೆ ನಡೆಯುತ್ತಿರುವ ಸಂಧಾನ ಮಾತುಕತೆ ಪ್ರಕ್ರಿಯೆಯಲ್ಲಿ ನ್ಯಾಯಾಧೀಶರೇ ಭಾಗವಹಿಸುತ್ತಿದ್ದಾರೆ. ಪ್ರಕರಣಗಳನ್ನು ಕಾನೂನಿಗೆ ಅನುಗುಣವಾಗಿ ಇತ್ಯರ್ಥಪಡಿಸಲಾಗುವುದು. ಕಾನೂನಿಗೆ ವಿರುದ್ಧವಾದುದನ್ನು ಪರಿಗಣಿಸುವುದೇ ಇಲ್ಲ. ಎರಡೂ ಕಡೆಯವರೂ ಒಪ್ಪಿದರೂ ಕಾನೂನಿಗೆ ಅನುಗುಣವಾಗಿ ಇಲ್ಲದಿದ್ದುದ್ದನ್ನು ವಾಪಸ್ ಕಳುಹಿಸಿದ ಪ್ರಕರಣಗಳೂ ಇವೆ. ಹೀಗಾಗಿ, ಸಾರ್ವಜನಿಕರಲ್ಲಿ ತಪ್ಪು ತಿಳಿವಳಿಕೆ ಬೇಡ’ ಎಂದು ಕೋರಿದರು.

‘ಜನನ ಪ್ರಮಾಣಪತ್ರದ ವಿಷಯದಲ್ಲಿ ಗೊಂದಲವಿರುವ ಪ್ರಕರಣಗಳು ಕೂಡ ಬರುತ್ತಿದೆ. ಇವುಗಳಲ್ಲಿ ಅರ್ಹ ಪ್ರಕರಣಗಳನ್ನು ತೆಗೆದುಕೊಳ್ಳಲಾಗುವುದು. ಪಾಸ್‌ಪೋರ್ಟ್‌ ಮೊದಲಾದ ಸಂದರ್ಭಗಳಲ್ಲಿ ಜನನ ಪ್ರಮಾಣಪತ್ರ ಬೇಕಾಗುತ್ತದೆ. ಹೀಗಾಗಿ, ಶಾಲಾ ದಾಖಲಾತಿಗಳಲ್ಲಿ ನೀಡಲಾದ ದಿನಾಂಕ ಆಧರಿಸಿ ಪ್ರಮಾಣಪತ್ರ ಒದಗಿಸುವಂತೆ ಮಾಡಲು ಶಿಕ್ಷಣ ಇಲಾಖೆ ಸಹಯೋಗ ಪಡೆಯಲಾಗುತ್ತಿದೆ. ಇಂತಹ 2ಸಾವಿರಕ್ಕೂ ಹೆಚ್ಚು ಪ್ರಕರಣಗಳಿವೆ. ಉಳಿದಂತೆ ಚೆಕ್‌ ಬೌನ್ಸ್‌ ಪ್ರಕರಣಗಳು ಜಾಸ್ತಿ ಬರಲಿವೆ’ ಎಂದು ವಿವರ ನೀಡಿದರು.

‘ಪಾಲಿಗೆ ಸಂಬಂಧಿಸಿದಂತೆ ಹಿಂದಿನ ಮೂರು ಲೋಕ ಅದಾಲತ್‌ಗಳಲ್ಲಿ 3ಸಾವಿರಕ್ಕೂ ಹೆಚ್ಚಿನ ಪ್ರಕರಣಗಳನ್ನು ರಾಜಿ–ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ. ಈ ಪ್ರಮಾಣ ರಾಜ್ಯದಲ್ಲೇ ಹೆಚ್ಚಿನದಾಗಿದೆ’ ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿಜಯ ದೇವರಾಜ ಅರಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT