ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಕೆಶಿ ಬಳಿ 110ಕ್ಕೂ ಹೆಚ್ಚು ಸಿಡಿ: ಪ್ರಕರಣ ಸಿಬಿಐಗೆ ಕೊಡಬೇಕು ಎಂದ ರಮೇಶ

ಸಿ.ಡಿ ಪ್ರಕರಣ ಸಿಬಿಐಗೆ ಒಪ್ಪಿಸಬೇಕು
Last Updated 25 ಜನವರಿ 2023, 18:20 IST
ಅಕ್ಷರ ಗಾತ್ರ

ಬೆಳಗಾವಿ: ‘ನನ್ನ ಖಾಸಗಿತನದ ವಿಡಿಯೊಗಳೂ ಸೇರಿದಂತೆ ಇನ್ನೂ ಹತ್ತಾರು ಜನರ 110ಕ್ಕೂ ಹೆಚ್ಚು ಸಿ.ಡಿ ಗಳನ್ನು ಡಿ.ಕೆ.ಶಿವಕುಮಾರ ಇಟ್ಟುಕೊಂಡಿದ್ದಾನೆ. ಹಾಗಾಗಿ, ಈ ಸಿ.ಡಿ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡುತ್ತೇನೆ’ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ನನ್ನ ವೈಯಕ್ತಿಕ ಬದುಕಿಗೆ ಸಂಬಂಧಿಸಿದ ಸಿ.ಡಿ ಪ್ರಕರಣದಲ್ಲಿ ಈ ‘ಮಹಾನ್‌ ನಾಯಕ’ ಇರುವುದು ಖಚಿತ. ಇದರಲ್ಲಿ ಭಾಗಿಯಾದ ಆರೋಪಿಯೊಬ್ಬನ ದೇವನಹಳ್ಳಿಯ ಮನೆಯಲ್ಲಿ ತನಿಖೆ ನಡೆದಾಗ ಇತರರ ಹಲವು ಸಿ.ಡಿ ಗಳು ಸಿಕ್ಕಿವೆ. ನನ್ನ ಪ್ರಕರಣ ತನಿಖೆ ನಡೆಸಿದ ಅಧಿಕಾರಿಯ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಸಿ.ಡಿ ಕೂಡ ಸಿಕ್ಕಿದೆ. ಇದೆಲ್ಲವನ್ನೂ ಮುಚ್ಚಿಡಲಾಗಿದೆ. ನನ್ನ ವೈಯಕ್ತಿಕ ಜೀವನ ಹಾಳಾದಂತೆ ಬೇರೊಬ್ಬರಿಗೆ ಆಗಬಾರದು ಎಂಬ ಕಾರಣಕ್ಕೆ ಇದನ್ನು ಸಿಬಿಐಗೆ ಒಪ್ಪಿಸಲು ಆಗ್ರಹಿಸುತ್ತೇನೆ’ ಎಂದರು.

ಮತದಾರರಿಗೆ ಆಮಿಷ ಒಡ್ಡಿಲ್ಲ: ‘ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ನಾನು ₹ 10 ಕೋಟಿ ಖರ್ಚು ಮಾಡುತ್ತೇನೆ, ಮತದಾರರಿಗೆ ತಲಾ ₹ 6,000 ಕೊಡುತ್ತೇನೆ ಎಂದು ಆಮಿಷ ಒಡ್ಡಿದ್ದಾಗಿ ಕಾಂಗ್ರೆಸ್ಸಿಗರು ಆರೋಪಿಸಿದ್ದಾರೆ. ನಾನು ಯಾವುದೇ ಆಮಿಷ ಒಡ್ಡಿಲ್ಲ. ನಮ್ಮ ಯಾವ ಅಭ್ಯರ್ಥಿಯ ಹೆಸರೂ ಹೇಳಿಲ್ಲ. ಈಗ ನೀತಿ ಸಂಹಿತೆ ಕೂಡ ಇಲ್ಲ. ಮಾತಿನ ಆವೇಶದಲ್ಲಿ ಖರ್ಚು ಮಾಡುತ್ತೇನೆ ಎಂದಿರಬಹುದು. ಈ ಕ್ಷೇತ್ರದ ಶಾಲೆ ಸುಧಾರಣೆ, ರೈತರು, ಬಡವರಿಗೆ ಆರೋಗ್ಯ ಸೌಕರ್ಯ ನೀಡುವ ಉದ್ದೇಶದಿಂದ ಹೇಳಿದ್ದೇನೆ’ ಎಂದು ಸಮರ್ಥಿಸಿಕೊಂಡರು.

ಪ್ಯಾಂಟ್ ಬಿಚ್ಚು ಎಂದು ನಾವು ಹೇಳಿದ್ದೆವಾ: ಡಿಕೆಶಿ ಪ್ರಶ್ನೆ

ಬೆಂಗಳೂರು: ‘ರಮೇಶ ಜಾರಕಿಹೊಳಿಗೆ ಪ್ಯಾಂಟ್ ಬಿಚ್ಚು ಎಂದು ನಾವು ಹೇಳಿದ್ದೆವಾ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು.

‘ನನ್ನ ಜೀವನ ಹಾಳು ಮಾಡಿದ್ದು ಡಿ.ಕೆ. ಶಿವಕುಮಾರ್‌’ ಎಂಬ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ಲಂಚ ಹೊಡಿ ಎಂದು ನಾವು ಹೇಳಿದ್ದೆವಾ? ದುಡ್ಡು ಹಂಚು ಎಂದಿದ್ದೆವಾ’ ಎಂದೂ ಅವರು ಕೇಳಿದರು.

‘ಕಾಂಗ್ರೆಸ್‌ ಅನ್ನು ಹಾಳು‌ ಮಾಡಿದ್ದು ಅವನು‌. ‘ಆಪರೇಷನ್ ಕಮಲ‌’ ಮಾಡಿದ್ದು ಅವನು. ಸರ್ಕಾರ ಬೀಳಿಸಿದ್ದು ಅವನು’ ಎಂದು ರಮೇಶ ಜಾರಕಿಹೊಳಿ ವಿರುದ್ಧ ವಾಗ್ದಾಳಿ ನಡೆಸಿದರು.

ಮೀರ್‌ಸಾಧಿಕ್‌ ಮತ್ತು ನಂಬಿಕೆದ್ರೋಹಿಗಳಿಂದ ರಕ್ಷಣೆಗೆ ಸಿ.ಡಿ ತಡೆಯಾಜ್ಞೆ: ಬಿ.ಸಿ ಪಾಟೀಲ್‌

ಹಾವೇರಿ: ‘ನಾವ್ಯಾರು ವ್ಯಭಿಚಾರ ಮಾಡಿಲ್ಲ. ಆದರೆ, ನಮಗೆ ಕೆಟ್ಟ ಹೆಸರು ತರಲು ಸಿ.ಡಿ ಬಿಡುಗಡೆ ಮಾಡಿದರೆ, ಒಮ್ಮೆ ಹೋದ ಮಾನ ಮತ್ತೆ ಬರುವುದಿಲ್ಲ. ಮೀರ್‌ಸಾಧಿಕ್‌ ಮತ್ತು ನಂಬಿಕೆದ್ರೋಹಿಗಳಿಂದ ರಕ್ಷಣೆ ಅಗತ್ಯವಾದ್ದರಿಂದ ಸಿ.ಡಿ ಬಿಡುಗಡೆಗೆ ತಡೆಯಾಜ್ಞೆ ತರಲಾಗಿತ್ತು’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಸಮರ್ಥಿಸಿಕೊಂಡರು.

‘ಸಿ.ಡಿ ಬಿಡುಗಡೆ ವಿರುದ್ಧ ಕೋರ್ಟ್‌ನಿಂದ ಏಕೆ ತಡೆಯಾಜ್ಞೆ ತಂದರು?’ ಎಂಬ ಮಾಜಿ ಶಾಸಕ ಯು.ಬಿ.ಬಣಕಾರ್‌ ಹೇಳಿಕೆಗೆ
ಹಿರೇಕೆರೂರಿನಲ್ಲಿ ಬುಧವಾರ ಮಾಧ್ಯಮದವ ರೊಂದಿಗೆ ಮಾತನಾಡಿದ ಅವರು, ‘ಮೀರ್ ಸಾಧಿಕ್‌ರಂಥ ಜನ ನಮ್ಮ ಸುತ್ತಮುತ್ತಲೇ ಇರುತ್ತಾರೆ. ಇದೇ ಬಣಕಾರ್ ನಮ್ಮ ಜೊತೆಗೆ ಇದ್ದು, ಈಗ ಕಾಂಗ್ರೆಸ್ ಸೇರಿದ್ದಾರೆ’ ಎಂದು ಕುಟುಕಿದರು.

‘ರಮೇಶ್ ಜಾರಕಿಹೊಳಿ ಬಗ್ಗೆ ಅನವಶ್ಯಕವಾಗಿ ಸಿ.ಡಿ ಬಿಡುಗಡೆ ಮಾಡಿದರು. ಆದರೆ ಏನಾಯ್ತು? ‘ಬಿ’ ರಿಪೋರ್ಟ್ ಆಯ್ತು. ನಾವು ನಮ್ಮ ಗೌರವ ರಕ್ಷಿಸಿಕೊಳ್ಳುವ ಕೆಲಸ ಮಾಡಲೇಬೇಕು. ತಡೆಯಾಜ್ಞೆ ಅವಧಿ ಹಿಂದೆಯೇ ಮುಗಿದಿದೆ. ನಂತರವಾದರೂ ಸಿ.ಡಿ ಬಿಡುಗಡೆ ಮಾಡಬಹುದಿತ್ತಲ್ಲ?’ ಎಂದರು.

‘ನಾವು 17 ಮಂದಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ, ಬಿಜೆಪಿ ಸರ್ಕಾರ ರಚನೆಯಾಗಿದ್ದಕ್ಕೆ ಸಿದ್ದರಾಮಯ್ಯ ಅವರಿಗೆ ವಿರೋಧ ಪಕ್ಷದ ನಾಯಕನ ಸ್ಥಾನ ಸಿಕ್ಕಿತು. ಇದಕ್ಕಾಗಿ ಅವರು ನಮಗೆ ಅಭಿನಂದನೆ ತಿಳಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT