ಜಾತಿ, ಧರ್ಮ ಆಧಾರದ ಮೇಲೆ ಮತ ಯಾಚಿಸಬೇಡಿ

ಶುಕ್ರವಾರ, ಏಪ್ರಿಲ್ 26, 2019
33 °C
ನೀತಿಸಂಹಿತೆ ಉಲ್ಲಂಘಿಸಿದರೆ ಪ್ರಕರಣ ದಾಖಲು: ಡಾ.ಆರ್. ವಿಶಾಲ್ ಎಚ್ಚರಿಕೆ

ಜಾತಿ, ಧರ್ಮ ಆಧಾರದ ಮೇಲೆ ಮತ ಯಾಚಿಸಬೇಡಿ

Published:
Updated:

ಬೆಳಗಾವಿ: ‘ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಯಾವುದೇ ಅಭ್ಯರ್ಥಿಗಳು ಜಾತಿ, ಧರ್ಮದ ಆಧಾರದ ಮೇಲೆ ಮತಯಾಚನೆ ಮಾಡುವುದನ್ನು ನಿರ್ಬಂಧಿಸಲಾಗಿದೆ. ಹಣ ಮತ್ತಿತರ ಆಮಿಷ ಒಡ್ಡಿದರೆ ಅಂಥವರ ವಿರುದ್ದ ಪ್ರಕರಣ ದಾಖಲಿಸಲಾಗುವುದು’ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಆರ್. ವಿಶಾಲ್ ಎಚ್ಚರಿಕೆ ನೀಡಿದರು.

ಬುಧವಾರ ಚುನಾವಣಾ ಏಜೆಂಟರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಪ್ರಚಾರಕ್ಕೆ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಪ್ರಚಾರಕ್ಕೆ ಅವಕಾಶವಿರುತ್ತದೆ. ಪ್ರಚಾರಕ್ಕೆ ಲಭ್ಯವಿರುವ ಸಾರ್ವಜನಿಕ ಮೈದಾನ ಅಥವಾ ಸ್ಥಳಗಳನ್ನು ಎಲ್ಲ ಪಕ್ಷಗಳಿಗೆ ಸಮಾನವಾಗಿ ಒದಗಿಸುವ ಪ್ರಯತ್ನ ಮಾಡಲಾಗುತ್ತದೆ. ಆದರೆ ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು. ಪ್ರಚಾರಕ್ಕೆ ಅನುಮತಿ ಪಡೆದ ಅಭ್ಯರ್ಥಿಗಳು ತಮ್ಮ ಬಗ್ಗೆ ಮಾತ್ರ ಪ್ರಚಾರ ಮಾಡಲು ಅವಕಾಶವಿದೆ. ಇನ್ನೊಬ್ಬರ ಕುರಿತು ಅವಹೇಳನ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

‘ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 57 ಅಭ್ಯರ್ಥಿಗಳು ಕಣದಲ್ಲಿರುವುದರಿಂದ ಇನ್ನೂ 7,152 ಬ್ಯಾಲೆಟ್ ಯೂನಿಟ್‌ಗಳನ್ನು ಪೂರೈಸುವಂತೆ ಕೋರಿ ಚುನಾವಣಾ ಆಯೋಗಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಪೂರೈಕೆಯಾದ ತಕ್ಷಣವೇ ಮಾನ್ಯತೆ ಪಡೆದಿರುವ ನೋಂದಾಯಿತ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ನಿಯಮಾವಳಿ ಪ್ರಕಾರ ಮೊದಲ ಮತ್ತು ದ್ವಿತೀಯ ಹಂತದ ರ‍್ಯಾಂಡಮೈಜೇಷನ್ ಪ್ರಕ್ರಿಯೆ ನಡೆಸಲಾಗುವುದು. ಮತಗಟ್ಟೆಗಳಿಗೆ ಹಂಚಿಕೆ ಮಾಡಲಾಗುವುದು’ ಎಂದು ಮಾಹಿತಿ ನೀಡಿದರು.

‘ಚುನಾವಣಾ ಖರ್ಚು–ವೆಚ್ಚಗಳ ಲೆಕ್ಕಪತ್ರಗಳನ್ನು ನಿಯಮಿತವಾಗಿ ವೆಚ್ಚ ವೀಕ್ಷಕರ ಪರಿಶೀಲನೆಗೆ ಸಲ್ಲಿಸಬೇಕು’ ಎಂದು ಸೂಚಿಸಿದರು.

ಚುನಾವಣಾ ವೀಕ್ಷಕ ರಾಜೀವಚಂದ್ರ ದುಬೆ ಮಾತನಾಡಿ, ‘ಚುನಾವಣಾ ಪ್ರಕ್ರಿಯೆಯ ಪ್ರತಿ ಹಂತವನ್ನೂ ಗಮನಿಸುತ್ತಿದ್ದೇವೆ. ಯಾವುದೇ ದೂರುಗಳಿದ್ದರೆ ಅಥವಾ ಲೋಪದೋಷ ಕಂಡುಬಂದರೆ ನೇರವಾಗಿ ತಮ್ಮ ಗಮನಕ್ಕೂ ತರಬಹುದು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !