ಮಂಗಳವಾರ, ಅಕ್ಟೋಬರ್ 15, 2019
25 °C
ಕಲ್ಯಾಣ ಕ್ರಾಂತಿ ಸಂಸ್ಮರಣೋತ್ಸವ ಸಮಾರೋಪ

ಲಿಂಗಾಯತ ಧರ್ಮದ ಹೋರಾಟ ಮರೆಯಬಾರದು

Published:
Updated:
Prajavani

ಬೆಳಗಾವಿ: ‘ವಿಶ್ವಗುರು ಬಸವಣ್ಣಗೆ ನಿಜವಾದ ನಮನ ಸಲ್ಲಿಸಬೇಕಾದರೆ, ಅವರು ರೂಪಿಸಿದ ಸ್ವತಂತ್ರ ಚಿಂತನೆಯ ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ಸಿಗುವವರೆಗೆ ಹೋರಾಡುವುದನ್ನು ಮರೆಯಬಾರದು’ ಎಂದು ರಾಷ್ಟ್ರೀಯ ಬಸವ ದಳದ ಜಿಲ್ಲಾ ಘಟಕದ ಅಧ್ಯಕ್ಷ ಕೆ. ಬಸವರಾಜ ಹೇಳಿದರು.

ಲಿಂಗಾಯತ ಧರ್ಮ ಮಹಾಸಭಾ, ರಾಷ್ಟ್ರೀಯ ಬಸವ ದಳ, ಕ್ರಾಂತಿ ಗಂಗೋತ್ರಿ ಅಕ್ಕ ನಾಗಲಾಂಬಿಕಾ ಮಹಿಳಾ ಗಣ, ಗಣಾಚಾರ ದಳ, ವಚನ ಚಿಂತನಾ ವೇದಿಕೆ ಮತ್ತು ಚಿಣ್ಣರ ಬಸವಾಂಕುರ ಸಹಯೋಗದಲ್ಲಿ ನವರಾತ್ರಿ ಉತ್ಸವ ಸಂದರ್ಭದಲ್ಲಿ ಇಲ್ಲಿ ನಡೆದ ಕಲ್ಯಾಣ ಕ್ರಾಂತಿ ಸಂಸ್ಮರಣೋತ್ಸವ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರ ನೇತೃತ್ವದಲ್ಲಿ, 770 ಅಮರಗಣಂಗಳು ಮತ್ತು 1.96 ಲಕ್ಷ ಅನುಯಾಯಿಗಳಿಂದ ರೂಪಿತವಾದ ವಿಶಿಷ್ಟ ಲಿಂಗಾಯತ ಧರ್ಮವು ಸಂಸ್ಕಾರ, ಸಮಾನತೆ, ಸಹೋದರತ್ವ ಮತ್ತು ಸ್ವಾತಂತ್ರ್ಯ ಎಂಬ ಅಡಿಪಾಯದ ಮೇಲೆ ಮೂಡಿಬಂದಿದೆ. ಅನೇಕ ಶರಣರ ಚಿಂತನೆ, ತ್ಯಾಗ, ಬಲಿದಾನದಿಂದ ಒಂದು ವಿಶಿಷ್ಟ ಜೀವನ ವಿಧಾನವನ್ನು ವಚನ ಸಾಹಿತ್ಯದ ಸಿರಿಯಲ್ಲಿ ಕಾಣುತ್ತೇವೆ. ಇದು ವಿಶ್ವ ಸಂವಿಧಾನವೂ ಹೌದು’ ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಜಾಗತಿಕ ಲಿಂಗಾಯತ ಧರ್ಮ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಅರವಿಂದ ಪರುಶೆಟ್ಟಿ ಮಾತನಾಡಿದರು.

ಮುಖಂಡ ಶಂಕರ ಗುಡಸ್ ಬಸವ-ಧ್ವಜಾರೋಹಣ ನೆರವೇರಿಸಿದರು. ಬಸವರಾಜ ಹಂಪಣ್ಣನವರ ದಂಪತಿ ಶರಣರ ಫೋಟೊಗಳಿಗೆ ಪೂಜೆ ಸಲ್ಲಿಸಿದರು. ಪ್ರಜ್ಞಾ ಗುಡಸ್, ಸುವರ್ಣಾ ಗುಡಸ್ ವಚನ ಗಾಯನ ಪ್ರಸ್ತುತಪಡಿಸಿದರು.

ಲಿಂಗಾಯತ ಧರ್ಮ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಮಹಾಂತೇಶ ಗುಡಸ್ ಸ್ವಾಗತಿಸಿದರು. ಶರಣೆ ನೀಲಗಂಗಾ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ರಾಷ್ಟ್ರೀಯ ಬಸವ ದಳ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಆನಂದ ಗುಡಸ್ ನಿರೂಪಿಸಿದರು. ರಾಷ್ಟ್ರೀಯ ಬಸವದಳ ಜಿಲ್ಲಾ ಘಟಕದ ಉಪಾಧ್ಯಕ್ಷ ಅಶೋಕ ಬೆಂಡಿಗೇರಿ ವಂದಿಸಿದರು.

Post Comments (+)