ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾಳ ದಿನಕ್ಕೆ ಅನುಮತಿ ನೀಡಿದರೆ ನ್ಯಾಯಾಲಯಕ್ಕೆ ಮೊರೆ

ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಹೇಳಿಕೆ;
Last Updated 22 ಅಕ್ಟೋಬರ್ 2018, 10:42 IST
ಅಕ್ಷರ ಗಾತ್ರ

ಬೆಳಗಾವಿ: ಕನ್ನಡ ರಾಜ್ಯೋತ್ಸವ ದಿನದಂದು ಕರಾಳ ದಿನ ಆಚರಿಸಲು ಹೊರಟಿರುವ ಎಂಇಎಸ್‌ನವರಿಗೆ ಅನುಮತಿ ನೀಡಿದರೆ, ಸರ್ಕಾರದ ವಿರುದ್ಧ ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವುದಾಗಿ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಹೇಳಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ವಿರೋಧಿ, ಭಾಷಾ ವಿರೋಧಿ ಮತ್ತು ನಾಡ ದ್ರೋಹಿ ಚಟುವಟಿಕೆಗಳನ್ನು ಎಂಇಎಸ್‌ನವರು ನಡೆಸುತ್ತಿದ್ದಾರೆ. ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುತ್ತ, ಶಾಂತಿ ಸುವ್ಯವಸ್ಥೆಗೆ ಭಂಗ ತರುತ್ತಿದ್ದಾರೆ. ಇವರ ವಿರುದ್ಧ ಕ್ರಮಕೈಗೊಳ್ಳಬೇಕು ಹೊರತು, ಕರಾಳ ದಿನಕ್ಕೆ ಅನುಮತಿ ನೀಡಬಾರದು ಎಂದು ಒತ್ತಾಯಿಸಿದರು.

ಎರಡು ವರ್ಷಗಳ ಹಿಂದೆ ಕರಾಳ ದಿನ ಆಚರಣೆಯಲ್ಲಿ ಭಾಗವಹಿಸಿದ್ದವರ ವಿರುದ್ಧ ಕಾನೂನು ರೀತಿ ಕ್ರಮಕೈಗೊಳ್ಳಬೇಕು ಹಾಗೂ ಬೆಳಗಾವಿ ಮಹಾನಗರ ಪಾಲಿಕೆಯನ್ನು ಸೂಪರ್‌ಸೀಡ್‌ ಮಾಡಬೇಕೆಂದು ಅಂದಿನ ಜಿಲ್ಲಾಧಿಕಾರಿ ಎನ್‌.ಜಯರಾಮ್‌ ನೀಡಿದ್ದ ವರದಿಯು ನಗರಾಭಿವೃದ್ಧಿ ಇಲಾಖೆಯಲ್ಲಿ ಕೊಳೆಯುತ್ತ ಬಿದ್ದಿದೆ. ಇದರ ಬಗ್ಗೆ ಏಕೆ ಇದುವರೆಗೆ ಕ್ರಮಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.

ಸ್ಥಳೀಯ ಜನಪ್ರತಿನಿಧಿಗಳು ವೋಟ್‌ ಬ್ಯಾಂಕ್‌ ರಾಜಕಾರಣಗೋಸ್ಕರ ಎಂಇಎಸ್‌ ವಿರುದ್ಧ ಏನೂ ಮಾತನಾಡುತ್ತಿಲ್ಲ. ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ. ಕನ್ನಡ ನಾಡು, ನುಡಿ ಹಾಗೂ ನೆಲ–ಜಲದ ಬಗ್ಗೆ ಅದೆಷ್ಟು ಗೌರವ ಹೊಂದಿದ್ದಾರೆ ಎನ್ನುವುದನ್ನು ಇದು ತೋರಿಸುತ್ತದೆ ಎಂದು ಆರೋಪಿಸಿದರು.

ರಾಜ್ಯ ಸರ್ಕಾರದ ವಿರುದ್ಧ ಅಲ್ಲ, ಕೇಂದ್ರ ಸರ್ಕಾರದ ವಿರುದ್ಧ ಕರಾಳ ದಿನ ಆಚರಿಸುತ್ತೇವೆ ಎಂದು ಎಂಇಎಸ್‌ನವರು ಹೇಳುತ್ತಿದ್ದರೆ, ಅವರಿಗೆ ರಾಜ್ಯೋತ್ಸವ ದಿನದಂದು ಅನುಮತಿ ನೀಡಬೇಡಿ, ಬೇರೆ ದಿನ ಅನುಮತಿ ನೀಡಬಹುದು. ರಾಜ್ಯೋತ್ಸವ ದಿನದಂದು ಕರಾಳ ದಿನ ಆಚರಿಸಲು ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಎಂದು ಆಗ್ರಹಿಸಿದರು.

ನಾಡ ಧ್ವಜ– ಮಾಹಿತಿ ನೀಡದ ಸರ್ಕಾರ:ಸಿದ್ದರಾಮಯ್ಯ ನೇತೃತ್ವದ ಹಿಂದಿನ ಸರ್ಕಾರವು ನಾಡಧ್ವಜ ತಯಾರಿಸಿ, ಅನುಮೋದಿಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿಕೊಟ್ಟಿತ್ತು. ಎಂಟು ತಿಂಗಳು ಕಳೆದಿದ್ದರೂ ಯಾವುದೇ ಬೆಳವಣಿಗೆಯಾಗಿಲ್ಲ. ಇದರ ಬಗ್ಗೆ ಮಾಹಿತಿ ನೀಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ನಿರಾಕರಿಸುತ್ತಿದ್ದಾರೆ. ಪ್ರತ್ಯೇಕ ನಾಡಧ್ವಜ ಬರುವುದೋ, ಇಲ್ಲವೋ ಎನ್ನುವ ಅನುಮಾನ ಕಾಡುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT