ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯಾವ ಭಾಷೆ ವಿರೋಧವೂ ಬೇಡ’

ಸಾಹಿತಿ ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ ಅಭಿಮತ
Last Updated 13 ಫೆಬ್ರುವರಿ 2022, 13:14 IST
ಅಕ್ಷರ ಗಾತ್ರ

ಬೆಳಗಾವಿ: ‘ನಾವು ಯಾವ ಭಾಷೆಯನ್ನೂ ವಿರೋಧಿಸಬಾರದು. ಭಾಷೆ, ಜಾತಿ ಹಾಗೂ ವ್ಯಕ್ತಿಗಳ ಬಗ್ಗೆ ಮಕ್ಕಳ ಮನದಲ್ಲಿ ದ್ವೇಷ ಬೆಳೆಸಬಾರದು’ ಎಂದು ಸಾಹಿತಿ ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ ಅಭಿಪ್ರಾಯಪಟ್ಟರು.

ಇಲ್ಲಿನ ಶ್ರೀಕೃಷ್ಣದೇವರಾಯ ವೃತ್ತದ ಬಳಿ ಇರುವ ಸಪ್ನ ಬುಕ್‌ಹೌಸ್‌ನಲ್ಲಿ ಹರಟೆ ಕಟ್ಟೆ ತಂಡ ಭಾನುವಾರ ಹಮ್ಮಿಕೊಂಡಿದ್ದ ‘ಮಾತುಕತೆ ಗಣ್ಯರ ಜೊತೆ’ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೇಶದಲ್ಲಿ ತ್ರಿಭಾಷಾ ಸೂತ್ರ ಇರಲಿ. ಹಿಂದಿ ಹೇರಿಕೆ ವಿರೋಧಿಸಿ ಹೋರಾಟ ಮಾಡುವುದು ತಪ್ಪು. ಮಕ್ಕಳಿಗೆ ಕಲಿಸಿದರೆ ಪಂಚಭಾಷೆಗಳನ್ನೂ ಕಲಿಯುತ್ತಾರೆ. ಹಾಗಾಗಿ ಮಾತೃಭಾಷೆ ಪ್ರೀತಿಸುವ ಜೊತೆಗೆ ಇತರ ಭಾಷೆಗಳನ್ನೂ ಕಲಿಯಬೇಕು. ದಕ್ಷಿಣ ಭಾರತದವರಂತೆ ಉತ್ತರ ಭಾರತದವರೂ ತಮ್ಮ ಭಾಷೆ ಜೊತೆಗೆ, ಉಳಿದ ಭಾಷೆ ಕಲಿಯುವಂತಾಗಬೇಕು. ಪ್ರತಿ ಭಾಷೆಯಿಂದ ಅಪಾರ ಸಂಪತ್ತು ಲಭಿಸುತ್ತದೆ’ ಎಂದರು.

‘ನನಗೆ ಎಲ್ಲ ಭಾಷೆಗಳ ಬಗ್ಗೆ ಕುತೂಹಲವಿದೆ. ಹಾಗಾಗಿ ಕನ್ನಡ, ಇಂಗ್ಲಿಷ್‌ ಹಾಗೂ ಹಿಂದಿಯಲ್ಲಿ ಸಾಹಿತ್ಯ ರಚಿಸುತ್ತಿದ್ದೇನೆ. ನಾಲ್ಕು ಕವಿತೆ ರಚಿಸಿದ ನಂತರ ಪ್ರಚಾರ ಸಿಗುತ್ತಿದ್ದಂತೆ, ನಾವು ದೊಡ್ಡವರಾದೆವು ಎಂದು ಯುವಪೀಳಿಗೆ ಬೀಗಬಾರದು. ಬದಲಿಗೆ ಸತತ ಪ್ರಯತ್ನಶೀಲವಾಗಿರಬೇಕು. ಬರವಣಿಗೆಯ ಶ್ರೇಷ್ಠತೆ ಉಳಿಸಿಕೊಳ್ಳಬೇಕು. ಅನುಭವಗಳಿಗೆ ಮುಕ್ತ ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ತಮ್ಮ ಬಾಲ್ಯದ ದಿನಗಳು, ಸಾಹಿತ್ಯ ರಚನೆಗೆ ಪ್ರೇರಣೆಯಾದ ಸಂಗತಿಗಳು, ಗ್ರಾಮೀಣ ಭಾಗದ ಧಾರ್ಮಿಕ ಆಚರಣೆಗಳು, ಹಿರಿಯ ಸಾಹಿತಿಗಳೊಂದಿಗಿನ ಒಡನಾಟ ಸ್ಮರಿಸಿಕೊಂಡರು.

ಸಾಹಿತಿ ಹೇಮಾ ಪಟ್ಟಣಶೆಟ್ಟಿ ಮಾತನಾಡಿ, ‘ನಾವು ರಚಿಸುವ ಸಾಹಿತ್ಯ ಓದುಗರಿಗೆ ಆಪ್ತವಾಗಿರಬೇಕು. ಯಾವುದೇ ಕೃತಿ ರಚಿಸಿದ ತಕ್ಷಣ ತರಾತುರಿಯಲ್ಲಿ ಪ್ರಕಟಣೆಗೆ ನೀಡಬಾರದು. ನಾವು ಬರೆದಿದ್ದನ್ನು ಮತ್ತೆ ಓದಬೇಕು, ತಿದ್ದಬೇಕು. ಯುವ ಬರಹಗಾರರ ಕೃತಿಗಳನ್ನು ಹಿರಿಯ ಸಾಹಿತಿಗಳು ನಿಷ್ಠುರವಾಗಿ ವಿಮರ್ಶೆಗೆ ಒಳಪಡಿಸಬೇಕು. ಆಗ ಉತ್ತಮ ಕೃತಿ ಹೊರಬರಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

ಸಭಿಕರ ಪ್ರಶ್ನೆಗಳಿಗೆ ಪಟ್ಟಣಶೆಟ್ಟಿ ದಂಪತಿ ಉತ್ತರಿಸಿದರು. ಹಾಸ್ಯಚಟಾಕಿಗಳನ್ನೂ ಹಾರಿಸಿ, ಸಭಿಕರನ್ನು ನಗೆಡಲಲಲ್ಲಿ ತೇಲಿಸಿದರು. ಸಾಹಿತಿ ನದೀಮ್‌ ಸನದಿ ಕಾರ್ಯಕ್ರಮ ನಡೆಸಿಕೊಟ್ಟರು. ಅಭಿಷೇಕ ಬೆಂಢಿಗೇರಿ ಉಪಸ್ಥಿತರಿದ್ದರು. ‌ಸ‍‍ಪ್ನ ಬುಕ್‌ಹೌಸ್‌ನ ಬೆಳಗಾವಿ ಶಾಖೆ ಮುಖ್ಯಸ್ಥ ಎಂ.ವಿ.ರಘು ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT