ಬುಧವಾರ, ಜುಲೈ 6, 2022
21 °C

ರಿಂಗ್‌ ರೋಡ್‌ ನಿರ್ಮಾಣಕ್ಕೆ ಅಡ್ಡಿ ಸಲ್ಲದು: ಸಂಸದ ಸುರೇಶ ಅಂಗಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ನಗರದಲ್ಲಿ ರಿಂಗ್‌ ರಸ್ತೆ ನಿರ್ಮಾಣಕ್ಕೆ ಒಂದು ಪಕ್ಷ ಅಡ್ಡಿಯಾಗಿದೆ. ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಸರಿಯಲ್ಲ’ ಎಂದು ಸಂಸದ ಸುರೇಶ ಅಂಗಡಿ ಹೇಳಿದರು.

ರಫ್ತು ನಿರ್ದೇಶನಾಲಯ ಉಪನಿರ್ದೇಶಕರ ಕಚೇರಿಯಿಂದ ಉದ್ಯಮಬಾಗ್‌ನ ಸಣ್ಣ ಕೈಗಾರಿಕೆಗಳ ಸಂಘದ ಸಭಾಂಗಣದಲ್ಲಿ ‘ನಿರ್ಯಾತ್‌ (ರಫ್ತು) ಬಂಧು’ ಯೋಜನೆ ಕುರಿತು ಗುರುವಾರ ಆಯೋಜಿಸಿದ್ದ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.

‘ರಸ್ತೆಗಳ ಅಭಿವೃದ್ಧಿಪಡಿಸದೇ ಕೈಗಾರಿಕೆ ಮೊದಲಾದ ಕ್ಷೇತ್ರಗಳಲ್ಲಿ ಪ್ರಗತಿಯಾಗುವುದಿಲ್ಲ. ನಗರವೂ ಬೆಳೆಯುವುದಿಲ್ಲ. ಹೀಗಾಗಿ, ಬಹುತೇಕರ ಬೇಡಿಕೆಯಂತೆ ರಿಂಗ್‌ ರಸ್ತೆ ನಿರ್ಮಾಣಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ. ಆದರೆ, ಒಂದು ರಾಜಕೀಯ ಪಕ್ಷ ರೈತರ ದಾರಿ ತಪ್ಪಿಸುತ್ತಿದೆ. ಇದನ್ನು ನಿಲ್ಲಿಸಬೇಕು. ರೈತರು ಸಹಕರಿಸಬೇಕು’ ಎಂದರು.

ಸದ್ಬಳಕೆ ಮಾಡಿಕೊಳ್ಳಿ:

‘ಇಲ್ಲಿ ರಫ್ತು ಮಾಡುವ ಉದ್ಯಮಿಗಳಿಗೆ ನೆರವಾಗಲೆಂದೇ ರಫ್ತು ನಿರ್ದೇಶನಾಲಯದ ಕಚೇರಿ (ಡಿಜಿಎಫ್‌ಟಿ) ಸ್ಥಾಪನೆಗೆ ಒತ್ತಾಯಿಸಿದೆ. ರಫ್ತು ಚಟುವಟಿಕೆಗಳಿಗೆ ಸಂಬಂಧಿಸಿದ ಕೆಲಸಗಳಿಗಾಗಿ ಬೆಂಗಳೂರಿಗೆ ಹೋಗುವುದನ್ನು ತಪ್ಪಿಸಲಾಗಿದೆ. ಪ್ರಸ್ತುತ ಆಟೊನಗರದ ಶಾಶ್ವತ ವಸ್ತುಪ್ರದರ್ಶನ ಕೇಂದ್ರದಲ್ಲಿರುವ ನಿರ್ದೇಶನಲಾಯದ ಕಚೇರಿಯನ್ನು ಉದ್ಯಮಬಾಗಕ್ಕೆ ಸ್ಥಳಾಂತರಿಸುವಂತೆ ಸಂಬಂಧಿಸಿದ ಸಚಿವರೊಂದಿಗೆ ಸಮಾಲೋಚನೆ ನಡೆಸಿದ್ದೇನೆ. ಕಚೇರಿಯು ಉದ್ಯಮಬಾಗಕ್ಕೆ ಬರುವುದರಿಂದ ಬಹಳಷ್ಟು ಮಂದಿಗೆ ಅನುಕೂಲವಾಗುತ್ತದೆ. ಇಲ್ಲಿ ದೊರೆಯುವ ಸೌಲಭ್ಯಗಳನ್ನು ಕೈಗಾರಿಕೋದ್ಯಮಿಗಳು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಬೆಂಗಳೂರಿಗೆ ಸರಿಸಮನಾಗಿ ಬೆಳಗಾವಿಯೂ ಬೆಳೆಯಬೇಕು ಎನ್ನುವುದು ನನ್ನ ಕನಸಾಗಿದೆ. ಇದಕ್ಕಾಗಿ ಹಲವು ಯೋಜನೆಗಳನ್ನು ತಂದಿದ್ದೇನೆ. ಅಭಿವೃದ್ಧಿಯಲ್ಲಿ ಮಹಾರಾಷ್ಟ್ರದ ಬಾರಾಮತಿ ನಗರವನ್ನೂ ಬೆಳಗಾವಿ ಮೀರಿಸಿದೆ. ಚುನಾವಣಾ ಪೂರ್ವದಲ್ಲಿ ನೀಡಿದ್ದ ಬಹುತೇಕ ಭರವಸೆಗಳನ್ನು ಈಡೇರಿಸಿದ, ಎಲ್ಲ ವರ್ಗದ ಜನರಿಗೂ ಸ್ಪಂದಿಸಿದ ತೃಪ್ತಿ ಇದೆ’ ಎಂದು ತಿಳಿಸಿದರು.

ಸಭೆ ಕರೆಯಿರಿ:

‘ಉದ್ಯಮ ಬೆಳವಣಿಗೆಗೆ ಪೂರಕವಾಗಿ ಬ್ಯಾಂಕ್‌ಗಳು ಸಹಕರಿಸುತ್ತಿಲ್ಲ ಎನ್ನುವ ದೂರುಗಳಿವೆ. ಈ ಬಗ್ಗೆ ಚರ್ಚಿಸುವುದಕ್ಕಾಗಿ ಉದ್ಯಮಿಗಳು, ಬ್ಯಾಂಕ್‌ಗಳು, ಜಿಎಸ್‌ಟಿ ಮತ್ತು ಆದಾಯ ತೆರಿಗೆ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯನ್ನು ಫೆಬ್ರುವರಿಯಲ್ಲಿ ಕರೆಯುವಂತೆ ಡಿಜಿಎಫ್‌ಟಿ ಅಧಿಕಾರಿಗಳಿಗೆ ಸೂಚಿಸಿದರು.

ಡಿಜಿಎಫ್‌ಟಿ ಉಪ ಮಹಾನಿರ್ದೇಶಕ ಬಿ.ಎನ್. ವಿಶ್ವಾಸ್ ಮಾತನಾಡಿ, ‘ಬೆಳಗಾವಿಯಲ್ಲಿ 208 ಮಂದಿ ರಫ್ತುದಾರರಿದ್ದಾರೆ. ಇವರಲ್ಲಿ 38 ಮಂದಿ ನಿಯಮಿತವಾಗಿ ರಫ್ತು ಚಟುವಟಿಕೆಯಲ್ಲಿ ತೊಡಗಿದ್ದಾರೆ. ಕೇಂದ್ರ ಸರ್ಕಾರವು ನಿರ್ದೇಶನಾಲಯದ ಮೂಲಕ ನೀಡುವ ಸಹಾಯಧನ, ರಿಯಾಯಿತಿ ಮೊದಲಾದ ಸೌಲಭ್ಯಗಳನ್ನು ಕೆಲವರಷ್ಟೇ ಪಡೆದುಕೊಳ್ಳುತ್ತಾರೆ. ಇದಕ್ಕೆ ಮಾಹಿತಿ ಕೊರತೆ ಕಾರಣ. ನಿರ್ಯಾತ್ ಬಂಧು ಸೇರಿದಂತೆ ಲಭ್ಯವಿರುವ ವಿವಿಧ ಯೋಜನೆಗಳ ಮಾಹಿತಿ ನೀಡುವುದಕ್ಕಾಗಿಯೇ ವಿಚಾರಸಂಕಿರಣ ಆಯೋಜಿಸಲಾಗಿದೆ. ಉದ್ಯಮಿಗಳು ಯೋಜನೆಗಳ ಲಾಭ ಪಡೆದುಕೊಳ್ಳಬೇಕು. ಕುಂದುಕೊರತೆಗಳಿದ್ದಲ್ಲಿ ಗಮನಕ್ಕೆ ತರಬೇಕು’ ಎಂದು ತಿಳಿಸಿದರು.

ಅಪ್‌ಲೋಡ್‌ ಕಡ್ಡಾಯ:

‘ರಫ್ತು ಚಟುವಟಿಕೆಗಳನ್ನು ಕೈಗೊಳ್ಳುವವರಿಗೆ ಅನುಕೂಲವಾಗುವಂತೆ ಇ–ಬಿಆರ್‌ಸಿಯನ್ನು (ಎಲೆಕ್ಟ್ರಾನಿಕ್‌ ಬ್ಯಾಂಕ್ ರಿಯಲೈಜೇಸನ್ ಸರ್ಟಿಫಿಕೆಟ್) ಡಿಜಿಎಫ್‌ಟಿ ಸರ್ವರ್‌ನಲ್ಲಿ ಅಪ್‌ಲೋಡ್‌ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಎಂಇಐಎಸ್ (ಮರ್ಚೆಂಡೈಸ್ ಎಕ್ಸ್‌ಪೋರ್ಟ್‌ ಸ್ಕೀಂ ಫ್ರಂ ಇಂಡಿಯಾ) ಯೋಜನೆಯಲ್ಲಿ ಪ್ರೋತ್ಸಾಹಧನ ದೊರೆಯಲಿದೆ. ಸಾಲ ಯೋಜನೆಯೂ ಲಭ್ಯವಿದೆ’ ಎಂದು ಮಾಹಿತಿ ನೀಡಿದರು.

‌ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ರೋಹನ್ ಜವಳಿ ಮಾತನಾಡಿ, ‘ಉದ್ಯಮಕ್ಕೆ ಪೂರಕವಾಗಿ ಯೋಜನೆಗಳನ್ನು ಸಂಸದರು ತಂದಿದ್ದಾರೆ. ಹೀಗಾಗಿ, ಮುಂದಿನ ಚುನಾವಣೆಯಲ್ಲೂ ಅವರನ್ನು ಬೆಂಬಲಿಸುತ್ತೇವೆ’ ಎಂದರು.

ಬಿಜೆಪಿ ನಗರ ಘಟಕದ ಅಧ್ಯಕ್ಷ ರಾಜೇಂದ್ರ ಹರಕುಣಿ, ಬೆಳಗಾವಿ ವಾಣಿಜ್ಯ ಹಾಗೂ ಕೈಗಾರಿಕೆಗಳ ಸಂಘದ ಅಧ್ಯಕ್ಷ ಮಹೇಶ್ ಬಾಗಿ ಇದ್ದರು. ಭಾಗ್ಯಲಕ್ಷ್ಮಿ ನಿರೂಪಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು