ಸೋಮವಾರ, ಆಗಸ್ಟ್ 26, 2019
20 °C
ಸಂತ್ರಸ್ತರಿಗೆ ಸಿದ್ದೇಶ್ವರ ಶ್ರೀ ಸಲಹೆ

ಕಷ್ಟವನ್ನು ವಿಶಾಲ ಹೃದಯದಿಂದ ಸ್ವೀಕರಿಸಿ

Published:
Updated:
Prajavani

ಅಥಣಿ: ‘ಕಷ್ಟ-ಸುಖವನ್ನು ವಿಶಾಲ ಹೃದಯದಿಂದ ಸ್ವೀಕರಿಸಬೇಕು. ಯಾವುದಕ್ಕೂ ಧೈರ್ಯ ಕಳೆದುಕೊಳ್ಳಬಾರದು’ ಎಂದು ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ಸಮೀಪದ ಝೀರೋ ಪಾಯಿಂಟ್‌ ಬಳಿ ಪರಿಹಾರ ಕೇಂದ್ರದಲ್ಲಿ ಸಂತ್ರಸ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ಮುಂದಿನ ವರ್ಷವಿಡೀ ರೈತ ತನ್ನ ಹೊಲದಲ್ಲಿ ಶ್ರಮಪಟ್ಟು ದುಡಿಯಲೆಂದು ಭಗವಂತ ಹೀಗೆ ಮಾಡಿರಬಹುದು. ಜೀವನದಲ್ಲಿ ಕಷ್ಟ ಬರಬೇಕು. ಅದನ್ನು ಸ್ವೀಕರಿಸಿ ಮುನ್ನುಗ್ಗಬೇಕು. ಈಗ, ರೈತ ಹೊಸ ದೃಷ್ಟಿಕೋನದಿಂದ ಕೃಷಿ ಮಾಡಬೇಕು. ವಿವಿಧ ಬೆಳೆಗಳನ್ನು ಬೆಳೆದು ಸರ್ವರಿಗೂ ಅನುಕೂಲ ಮಾಡಿಕೊಡಬೇಕು. ಪ್ರವಾಹವನ್ನು ಪಾಪವಲ್ಲ; ಪುಣ್ಯವೆಂದು ಭಾವಿಸಬೇಕು’ ಎಂದರು.

‘ಪ್ರವಾಹಕ್ಕೀಡಾದವರ ಸೇವೆ ಮಾಡುವುದು ಪುಣ್ಯದ ಕೆಲಸ. ಅದನ್ನು ಪ್ರತಿಯೊಬ್ಬರೂ ನಿರ್ವಹಿಸಬೇಕು. ಆಗ ಮಾತ್ರ ಜೀವನದಲ್ಲಿ ಮುಕ್ತಿ ಸಾಧಿಸಲು ಸಾಧ್ಯವಾಗುತ್ತದೆ. ಈ ಪ್ರವಾಹ ಹೊಸ ಜೀವನ ಕಟ್ಟಿಕೊಳ್ಳಲು ಪಾಠ ಕಲಿಸಿದೆ. ಹೊಸ ಚಿಂತನೆ-ಯೋಚನೆಗಳನ್ನು ರೂಪಿಸಿಕೊಂಡು ಜೀವನ ಕಟ್ಟುವ ಕಾರ್ಯದಲ್ಲಿ ಸಾಗಬೇಕು’ ಎಂದು ಸಲಹೆ ನೀಡಿದರು.

ಘೋಡಗೇರಿ ಶಿವಾನಂದ ಮಠದ ಮಲ್ಲಯ್ಯ ಸ್ವಾಮೀಜಿ ಮಾತನಾಡಿದರು. ಹಿಪ್ಪರಗಿ ಗಿರಮಲ್ಲೇಶ್ವರ ಮಹಾರಾಜ, ಹುಲ್ಯಾಳ ಹರ್ಷಾನಂದ ಸ್ವಾಮೀಜಿ, ಮೈಗೂರಿನ ಗುರುಪ್ರಸಾದ ಸ್ವಾಮೀಜಿ ಇದ್ದರು.

Post Comments (+)