ಶನಿವಾರ, ನವೆಂಬರ್ 23, 2019
18 °C

ಸತ್ತ ದನ, ಕರುಗಳನ್ನು ನದಿಗೆ ಹಾಕಬೇಡಿ: ಬಂಡಿಗಣಿಯ ಚಕ್ರವರ್ತಿ ದಾನೇಶ್ವರ ಸ್ವಾಮೀಜಿ

Published:
Updated:
Prajavani

ಅಥಣಿ: ‘ಸತ್ತ ದನ, ಕರುಗಳನ್ನು ನದಿಯಲ್ಲಿ ಎಸೆದರೆ ಗಂಗಾದೇವಿ ಕೋಪಗೊಳ್ಳುತ್ತಾಳೆ’ ಎಂದು ಬಂಡಿಗಣಿಯ ಚಕ್ರವರ್ತಿ ದಾನೇಶ್ವರ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಸವದಿಯಲ್ಲಿ ಗಂಗಾದೇವಿಗೆ ಉಡಿತುಂಬುವ ಹಾಗೂ ಪಾರಮಾರ್ಥಿಕ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನದಿಯಲ್ಲಿ ಮಲ, ಮೂತ್ರ ವಿಸರ್ಜನೆ ಮಾಡಬಾರದು. ಗೋವು, ಶಿಶು ಹತ್ಯೆಯಿಂದ ಪಾಪ ಹೆಚ್ಚಾಗಿ ಹರಿಹರ ಕೋಪಗೊಂಡಿದ್ದರಿಂದಲೇ ಪ್ರಕೃತಿ ವಿಕೋಪ ಸಂಭವಿಸುತ್ತಿದೆ. ಹೀಗಾಗಿ, ನದಿ ನೀರನ್ನು ಹೊಲಸು ಮಾಡಬಾರದು’ ಎಂದು ಸಲಹೆ ನೀಡಿದರು.

‘ಭವಸಾಗರ ದಾಟಬೇಕಾದರೆ ಸಮರ್ಥ ಸದ್ಗುರುವಿನ ಮಾರ್ಗದರ್ಶನ ಅವಶ್ಯವಾಗಿದೆ’ ಎಂದರು.

ಚಿಕ್ಕಾಲಗುಂಡಿಯ ಮಹಾಂತ ದೇವರು ಮಾತನಾಡಿ, ‘‌ಪ್ರಪಂಚ ಹಾಗೂ ಪಾರಮಾರ್ಥ ಎರಡರಲ್ಲೂ ಸುಖ ಸಿಗಬೇಕಾದರೆ ಬಂಡಿಗಣಿ ಶ್ರೀಗಳಂತಹ ಗುರುಗಳ ಮಾರ್ಗದರ್ಶನ ಅವಶ್ಯವಾಗಿದೆ. ಹೂವಿನಂತಹ ಮನಸ್ಸಿದ್ದವರಿಗೆ ಮಾತ್ರ ದೇವರು ಒಲಿಯುತ್ತಾನೆ’ ಎಂದು ತಿಳಿಸಿದರು.

ಪೂಜಾ ಕಾರ್ಯಕ್ರಮಗಳು ನಡೆದವು. ಮುತ್ತೈದೆಯರಿಗೆ ಉಡಿ ತುಂಬಲಾಯಿತು. ಎಲ್ಲರಿಗೂ ಹುಗ್ಗಿ, ಹೋಳಿಗೆ ಊಟ ಬಡಿಸಲಾಯಿತು.

ದಾನೇಶ್ವರ ಶ್ರೀಗಳನ್ನು ಭಕ್ತರು ಸತ್ಕರಿಸಿದರು. ಭಾವಲತ್ತಿಯ ವಿಜಯ ವೇದಾಂಗ ಶ್ರೀ, ಮುಖಂಡರಾದ ರಾಚಗೌಡ ಪಾಟೀಲ, ಬಸವರಾಜ ಪಾಟೀಲ, ಅನಿಲ ದುಲಾರಿ, ಶ್ರೀಕಾಂತ ವಾಲಿ, ಸಿದ್ರಾಮ ಬಿರಾಜದಾರ, ಅಪ್ಪಣ್ಣ ಬ. ಅವಟಿ, ನಬಿಸಾಬ್‌ ಮುಲ್ಲಾ ಇ‌ದ್ದರು.

ವೈ.ಆರ್. ಯಲ್ಲಟ್ಟಿ ಸ್ವಾಗತಿಸಿದರು. ಎಸ್.ಎಸ್. ಮನ್ನಾಪೂರ ನಿರೂಪಿಸಿದರು. ಮುರಿಗೆಪ್ಪ ಮಾಲಗಾರ ವಂದಿಸಿದರು.

ಪ್ರತಿಕ್ರಿಯಿಸಿ (+)