ಬೆಂಗಳೂರಿನ ಗುಜರಿ ಬಸ್‌ಗಳನ್ನು ಖರೀದಿಸಬೇಡಿ
ಬೆಳಗಾವಿ: ‘ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಗುಜರಿ ಎಂದು ಪರಿಗಣಿಸಿದ ಬಸ್‌ಗಳನ್ನು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಡಬ್ಲ್ಯುಕೆಆರ್‌ಟಿಸಿ) ಖರೀದಿಸಬಾರದು’ ಎಂದು ಆಗ್ರಹಿಸಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ನೇತೃತ್ವದಲ್ಲಿ ಪದಾಧಿಕಾರಿಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಾರಿಗೆ ಸಚಿವ ಶ್ರೀರಾಮಲು ಅವರಿಗೆ ಶುಕ್ರವಾರ ಪತ್ರ ಬರೆದಿದ್ದಾರೆ.
‘ಬಿಎಂಟಿಸಿ 25 ಸಾವಿರ ಬಸ್‌ಗಳನ್ನು ಗುಜರಿಗೆ ಹಾಕಲು ತೀರ್ಮಾನಿಸಿದೆ. ಸುಮಾರು 9 ಲಕ್ಷ ಕಿ.ಮೀ. ಓಡಿರುವ ಈ ಬಸ್‌ಗಳು ಸಂಚಾರಕ್ಕೆ ಯೋಗ್ಯವಲ್ಲ. ಪ್ರಯಾಣಿಕರ ಹಿತದೃಷ್ಟಿಯಿಂದ ಗುಜರಿಗೆ ಹಾಕಲಾಗುತ್ತಿದೆ ಎಂದು ಮಾಧ್ಯಮದಲ್ಲಿ ವರದಿಯಾಗಿದೆ. ಆದರೆ, ₹50 ಸಾವಿರದಿಂದ ₹ 1 ಲಕ್ಷ ಪಾವತಿಸಿ ಇದೇ ಬಸ್‌ಗಳನ್ನು ಖರೀದಿಸಲು ಎನ್‌ಡಬ್ಲ್ಯುಕೆಆರ್‌ಟಿಸಿಯವರು ಬಿಎಂಟಿಸಿ ಜೊತೆಗೆ ಮಾತುಕತೆ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಸಂಚಾರಕ್ಕೆ ಯೋಗ್ಯವಲ್ಲದ ಇಂತಹ ವಾಹನಗಳು ಕಿತ್ತೂರು ಕರ್ನಾಟಕದ ಜಿಲ್ಲೆಗಳಲ್ಲಿ ಸಂಚಾರಕ್ಕೆ ಹೇಗೆ ಯೋಗ್ಯವಾಗುತ್ತವೆ? ಅಲ್ಲಿನ ಪ್ರಯಾಣಿಕರಿಗೆ ಬೇಡವಾದ ಬಸ್‌ಗಳನ್ನು ಬಳಸಲು ನಾವು 2ನೇ ದರ್ಜೆ ನಾಗರಿಕರೇ? ರಾಜ್ಯ ಸರಕಾರದ ಪಾಲಿಗೆ ಮಲತಾಯಿ ಮಕ್ಕಳೇ?’ ಎಂದು ಚಂದರಗಿ ಪ್ರಶ್ನಿಸಿದ್ದಾರೆ.
‘ಗುಜರಿ ಬಸ್‌ಗಳನ್ನು ದುರಸ್ತಿ ಮಾಡಿ, ರಸ್ತೆಗಳಿಗೆ ಬಿಡುವ ಮೂಲಕ ನಮ್ಮ ಪ್ರಯಾಣಿಕರ ಜೀವವನ್ನು ಅಪಾಯಕ್ಕೆ ಒಡ್ಡಲು ಮುಂದಾಗಿರುವ ಎನ್‌ಡಬ್ಲ್ಯುಕೆಆರ್‌ಟಿಸಿ ಅಧಿಕಾರಿಗಳ ಕ್ರಮ ಖಂಡನೀಯ. ಇದು ಕಿತ್ತೂರು ಕರ್ನಾಟಕದ ಜನತೆಗೆ ಮಾಡಿದ ಅವಮಾನ. ಹಾಗಾಗಿ ಬೆಂಗಳೂರಿನ ಗುಜರಿ ಬಸ್‌ಗಳನ್ನು ಎನ್‌ಡಬ್ಲ್ಯುಕೆಆರ್‌ಟಿಸಿ ಖರೀದಿಸದಂತೆ ಕ್ರಮ ಕೈಕೊಳ್ಳಬೇಕು’ ಎಂದು ಸದಸ್ಯರಾದ ಶಿವಪ್ಪ ಶಮರಂತ, ಎಂ.ಜಿ.ಮಕಾನದಾರ, ಶಂಕರ ಬಾಗೇವಾಡಿ, ಸಲೀಮ್ ಖತೀಬ್, ಸಾಗರ ಬೋರಗಲ್ಲ, ರಾಜು ಕುಸೊಜಿ, ವೀರೇಂದ್ರ ಗೋಬರಿ, ಜಿನೇಶ ಅಪ್ಪನ್ನವರ, ರಜತ ಅಂಕಲೆ ಒತ್ತಾಯಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.