ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಯೂಟದಲ್ಲಿ ತಾಳೆ ಎಣ್ಣೆ ನಿಷೇಧಿಸಿ

ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸೂಚನೆ
Last Updated 16 ಜನವರಿ 2019, 13:16 IST
ಅಕ್ಷರ ಗಾತ್ರ

ಬೆಳಗಾವಿ: ‘ಶಾಲೆಗಳಲ್ಲಿ ತಯಾರಿಸುವ ಬಿಸಿಯೂಟಕ್ಕೆ ತಾಳೆ ಎಣ್ಣೆ (ಪಾಮ್ ಆಯಿಲ್) ಬಳಸುವುದನ್ನು ನಿಷೇಧಿಸುವಂತೆ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕು’ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಆಶಾ ಐಹೊಳೆ ಅಧಿಕಾರಿಗಳಿಗೆ ಸೂಚಿಸಿದರು.

ಬುಧವಾರ ನಡೆದ ಕೆಡಿ‍‍ಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಈ ವಿಷಯವಾಗಿ ನಾನು ಕೂಡ ಪತ್ರ ಬರೆಯುತ್ತೇನೆ’ ಎಂದು ತಿಳಿಸಿದರು.

‘ಪಾಮ್ ಆಯಿಲ್ ಬಳಸುವುದರಿಂದ ಆರೋಗ್ಯಕ್ಕೆ ತೊಂದರೆಯಾಗುತ್ತದೆ. ಕ್ಯಾನ್ಸರ್ ಮೊದಲಾದ ಕಾಯಿಲೆಗಳು ಬರುತ್ತವೆ. ಬಹಳ ದೇಶಗಳಲ್ಲಿ ಈ ಎಣ್ಣೆ ನಿಷೇಧಿಸಲಾಗಿದೆ. ಹೀಗಾಗಿ, ನಮ್ಮಲ್ಲೂ ಮಕ್ಕಳ ಆರೋಗ್ಯ ಕಾಪಾಡುವುದಕ್ಕಾಗಿ ಪಾಮ್ ಆಯಿಲ್‌ ಬಳಸಬಾರದು. ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಪರ್ಯಾಯ ವ್ಯವಸ್ಥೆ ಮಾಡುವಂತೆ ಸರ್ಕಾರವನ್ನು ಕೋರಬೇಕು’ ಎಂದರು.

‘ಸಭೆಯಲ್ಲಿ ಸರಿಯಾಗಿ ಮಾಹಿತಿ ಕೊಡದಿದ್ದರೆ ಶಿಸ್ತು ಕ್ರಮ ಜರುಗಿಸಲಾಗುವುದು. ಫೆಬ್ರುವರಿ ಅಂತ್ಯದೊಳಗೆ ಗುರಿ ತಲುಪಬೇಕು’ ಎಂದು ಸೂಚಿಸಿದರು.

ಶೌಚಲಯ ಸ್ಪರ್ಧೆ:‘ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯವು ಜ. 1ರಿಂದ 31ರವರೆಗೆ ‘ಸ್ವಚ್ಛ, ಸುಂದರ, ಶೌಚಾಲಯ ಸ್ಪರ್ಧೆ’ ಆಯೋಜಿಸಿದೆ. ಈ ಅವಧಿಯಲ್ಲಿ ಅತಿ ಹೆಚ್ಚು ಶೌಚಾಲಯಗಳಿಗೆ ಬಣ್ಣ ಬಳಿಯುವ ಸಂಖ್ಯೆ ಮತ್ತು ಶೇಕಡಾವಾರು ಸಾಧನೆ ಆಧಾರದ ಮೇಲೆ ಜಿಲ್ಲೆ, ಗ್ರಾಮ ಪಂಚಾಯ್ತಿಗಳಿಗೆ ಪುರಸ್ಕಾರ ನೀಡಲಾಗುತ್ತದೆ. ವೈಯಕ್ತಿಕ ಗೃಹ ಶೌಚಾಲಯ (ಸೃಜನಾತ್ಮಕವಾಗಿ ಅಲಂಕರಿಸಿರುವ) ಕುಟುಂಬಕ್ಕೂ ಪುರಸ್ಕಾರ ನೀಡಲಾಗುವುದು’ ಎಂದು ಸಿಇಒ ಆರ್. ರಾಮಚಂದ್ರನ್ ತಿಳಿಸಿದರು.

‘ಕುಟುಂಬದ ಮಾಲೀಕರು ತಮ್ಮ ಶೌಚಾಲಯಗಳಿಗೆ ಬಣ್ಣ ಹಚ್ಚಿಸಬೇಕು. ಗೋಡೆ ಮೇಲೆ ಚಿತ್ರ ಬರೆಸಬೇಕು. ಸ್ವಚ್ಛ ಭಾರತ ಅಭಿಯಾನವನ್ನು (ಗ್ರಾಮೀಣ) ಚಿಹ್ನೆ ಬಿಡಿಸಬೇಕು. ಶೌಚಾಲಯ ಬಳಕೆಯ ಮಹತ್ವದ ಸಂದೇಶ, ಸ್ವಚ್ಛ ಭಾರತ್ ಮಿಷನ್ ಲೋಗೊ, ಘೋಷ ವಾಕ್ಯಗಳನ್ನು ಬರೆಸಿ ಗಮನಸೆಳೆಯಬೇಕು. ಆಕರ್ಷಕ ಶೌಚಾಲಯಗಳನ್ನು ಪರಿಗಣಿಸಿ, ಶೇಕಡಾವಾರು ಫಲಿತಾಂಶದ ಆಧಾರದ ಮೇಲೆ ಪ್ರತಿ ರಾಜ್ಯದಿಂದ ಮೂರು ಜಿಲ್ಲೆಗಳನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಲಾಗುತ್ತದೆ. ಹೀಗಾಗಿ, ವೈಯಕ್ತಿಕ ಗೃಹ ಶೌಚಾಲಯ ಹೊಂದಿದ ಫಲಾನುಭವಿಗಳು ಸ್ಪರ್ಧೆಯಲ್ಲಿ ಭಾಗವಹಿಸಬೇಕು’ ಎಂದು ಕೋರಿದರು.

ಬಯಲು ಶೌಚ ಮುಕ್ತ:

‘ಇನ್ನು ಜಿಲ್ಲೆಯ ಗ್ರಾಮೀಣ ಪ್ರದೇಶವನ್ನು ಬಯಲು ಶೌಚ ಮುಕ್ತ ಎಂದು ಘೋಷಣೆ ಮಾಡಲಾಗಿದೆ. ಇದನ್ನು ಉಳಿಸಿಕೊಂಡು ಹೋಗುವುದು ಮುಖ್ಯವಾಗುತ್ತದೆ. ಸರ್ಕಾರದಿಂದ ಪ್ರೋತ್ಸಾಹಧನ ದೊರೆಯುತ್ತದೆ ಎಂದು ಶೌಚಾಲಯ ನಿರ್ಮಿಸಿ ಸುಮ್ಮನಾದರೆ ಪ್ರಯೋಜನವಿಲ್ಲ. ಅದನ್ನು ಬಳಸುವ ಅಭ್ಯಾಸ ಮಾಡಿಸಬೇಕು. ಇದಕ್ಕಾಗಿ ಜನರಲ್ಲಿ ಜಾಗೃತಿ ಮೂಡಿಸಬೇಕು; ಅವರ ಮನೋಭಾವ ಬದಲಾಯಿಸಬೇಕು. ಬಯಲು ಶೌಚದಿಂದ ಆಗುವ ದುಷ್ಪರಿಣಾಮಗಳನ್ನು ತಿಳಿಸಿಕೊಡಬೇಕು’ ಎಂದು ಸೂಚಿಸಿದರು.

‘ಮಾರ್ಚ್‌ ನಂತರ ಆಂತರಿಕ ತಪಾಸಣೆ ನಡೆಯಲಿದೆ. ಒಂದು ಗ್ರಾಮ ಪಂಚಾಯ್ತಿ ಸಿಬ್ಬಂದಿ ಇನ್ನೊಂದು ಗ್ರಾಮ ಪಂಚಾಯ್ತಿಯಲ್ಲಿ ಪರಿಶೀಲಿಸಬೇಕಾಗುತ್ತದೆ. ತಾಲ್ಲೂಕು ಪಂಚಾಯ್ತಿ ಮತ್ತು ಜಿಲ್ಲಾಮಟ್ಟದಲ್ಲೂ ಆಂತರಿಕ ತಪಾಸಣೆ ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಹೀಗಾಗಿ, ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿ ಉಳಿಸಿಕೊಳ್ಳಲು ಎಲ್ಲರೂ ಸಹಕರಿಸಬೇಕು’ ಎಂದು ಕೋರಿದರು.

ಉಪಾಧ್ಯಕ್ಷ ಅರುಣ ಕಟಾಂಬಳೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT