ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕೋಡಿ ರಸ್ತೆ–ರಾಯಬಾಗ: 13.94 ಕಿ.ಮೀ. ಜೋಡಿ ಮಾರ್ಗ ಸಿದ್ಧ

ಚಿಕ್ಕೋಡಿ ರಸ್ತೆ–ರಾಯಬಾಗ ರೈಲು ನಿಲ್ದಾಣದವರೆಗೆ
Last Updated 18 ಡಿಸೆಂಬರ್ 2020, 14:37 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯ ಚಿಕ್ಕೋಡಿ ರಸ್ತೆ ಸಮೀಪದಿಂದ ರಾಯಬಾಗ ರೈಲು ನಿಲ್ದಾಣದವರೆಗೆ (13.94 ಕಿ.ಮೀ.) ಹೊಸದಾಗಿ ನಿರ್ಮಿಸಿದ ಜೋಡಿ ರೈಲು ಮಾರ್ಗ ಸಿದ್ಧವಾಗಿದೆ.

ರೈಲ್ವೆ ಇಲಾಖೆ ದಕ್ಷಿಣ ವೃತ್ತದ ರೈಲ್ವೆ ಸುರಕ್ಷತಾ ಆಯುಕ್ತ (ಸಿಆರ್‌ಎಸ್‌) ಎ.ಕೆ. ರಾಯ್‌ ಹೋದ ತಿಂಗಳು ಕೊನೆಯ ವಾರದಲ್ಲಿ ಪರಿಶೀಲನೆ ನಡೆಸಿ, ಅಲ್ಲಿ ರೈಲು ಸಂಚಾರದ ವೇಗದ ಪರೀಕ್ಷೆಯನ್ನೂ ಕೂಡ ನಡೆಸಿದ್ದಾರೆ.

2015–16ನೇ ಸಾಲಿನಲ್ಲಿ ಮಂಜೂರಾಗಿರುವ ₹ 1,191 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ಲೋಂಡಾ–ಮೀರಜ್‌ ನಡುವಣ ಜೋಡಿ ರೈಲು ಮಾರ್ಗದ (186 ಕಿ.ಮೀ.) ಕಾಮಗಾರಿ ಭಾಗವಾಗಿ ಚಿಕ್ಕೋಡಿ ರಸ್ತೆ–ರಾಯಬಾಗದವರೆಗೆ ಮಾರ್ಗ ನಿರ್ಮಿಸಲಾಗಿದೆ. ಅಧಿಕಾರಿಗಳು ಮೊದಲು ಮೋಟಾರ್‌ ಟ್ರಾಲಿ ಮೂಲಕ ಪರಿಶೀಲಿಸಿದ್ದರು. ಬಳಿಕ ಗಂಟೆಗೆ 130 ಕಿ.ಮೀ. ವೇಗದಲ್ಲಿ ಸ್ಪೀಡ್ ಟ್ರಯಲ್‌ ನಡೆಸಿದರು. ಈ ಪ್ರಕ್ರಿಯೆ ಸುಗಮ ಹಾಗೂ ಯಶಸ್ವಿಯಾಗಿ ನಡೆದಿತ್ತು ಎಂದು ಇಲಾಖೆ ತಿಳಿಸಿದೆ.

ಯೋಜನೆಯಲ್ಲಿ ಪೂರ್ಣಗೊಂಡಿರುವ 2ನೇ ಭಾಗದ ಕಾಮಗಾರಿ ಇದಾಗಿದೆ. ಘಟಪ್ರಭಾ ರೈಲು ನಿಲ್ದಾಣದಿಂದ ಚಿಕ್ಕೋಡಿ ರಸ್ತೆವರೆಗಿನ 16 ಕಿ.ಮೀ. ಮಾರ್ಗ ಹೋದ ವರ್ಷ ಪೂರ್ಣಗೊಂಡಿತ್ತು. ರಾಯಬಾಗ–ಕುಡಚಿವರೆಗಿನ ಮಾರ್ಗವನ್ನು 2021ರಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಬೆಂಗಳೂರು–ಮುಂಬೈ ನಡುವಣ ಮಾರ್ಗದ ಸಂಪರ್ಕ ಸುಧಾರಣೆಗಾಗಿ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ದಿ.ಸುರೇಶ ಅಂಗಡಿ ಅವರು ಹೆಚ್ಚಿನ ಮುತುವರ್ಜಿ ವಹಿಸಿದ್ದರು.

ಈ ಜೋಡಿ ಮಾರ್ಗವನ್ನು ಚಿಕ್ಕೋಡಿ ರಸ್ತೆ ಹಾಗೂ ರಾಯಬಾಗ ನಿಲ್ದಾಣದವರೆಗೆ ಸರಕು ಹಾಗೂ ಪ್ರಯಾಣಿಕ ಸಾಗಣೆ ರೈಲುಗಳಿಗೆ ಮುಕ್ತಗೊಳಿಸಲಾಗಿದೆ. 21 ಸಣ್ಣ, 2 ಆರ್‌ಒಬಿ ಈ ಭಾಗದಲ್ಲಿ ಬರುತ್ತದೆ. ಲೆವಲ್‌ ಕ್ರಾಸಿಂಗ್ ವ್ಯವಸ್ಥೆ ಮಾಡಲಾಗಿದೆ. ರಾಯಬಾಗ ನಿಲ್ದಾಣದಲ್ಲಿ ಪುರುಷರ ಹಾಗೂ ಮಹಿಳೆಯರ ವಿಶ್ರಾಂತಿ ಸಭಾಂಗಣ, ಹವಾನಿಯಂತ್ರಿತ ವಿಶ್ರಾಂತಿ ಕೊಠಡಿ, 2 ಹೊಸ ಪ್ಲಾಟ್‌ಫಾರಂಗಳು, ಒಂದು ಮೇಲ್ಸೇತುವೆ ಮೊದಲಾದ ಸೌಲಭ್ಯಗಳನ್ನು ಒದಗಿಸಲಾಗಿದೆ. ನಿಲ್ದಾಣದಲ್ಲಿ ಗೂಡ್ಸ್‌ ಅಂಕಣಕ್ಕೆ ಹೋಗುವುದಕ್ಕೆಂದೇ ಪ್ರತ್ಯೇಕ ಹಳಿ ಜೋಡಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.

‘ವಲಯದಲ್ಲಿ ಸಂಪರ್ಕ ವ್ಯವಸ್ಥೆ ಸುಧಾರಣೆಗೆ ಜೋಡಿ ಮಾರ್ಗ ಅಭಿವೃದ್ಧಿಪಡಿಸುವುದು ಇಲಾಖೆಯ ಆದ್ಯತೆಯಾಗಿದೆ. ಲೋಂಡಾ–ಮೀರಜ್‌ ಜೋಡಿ ಮಾರ್ಗದಲ್ಲಿ ಇತರ ಕಡೆಗಳಲ್ಲಿಯೂ ಕಾಮಗಾರಿ ಪ್ರಗತಿಯಲ್ಲಿದೆ. ಇದು ಸಂಪೂರ್ಣವಾಗಿ ಪೂರ್ಣಗೊಂಡಲ್ಲಿ ಬೆಂಗಳೂರು–ಮುಂಬೈ ನಡುವಿನ ಸಂಪರ್ಕಕ್ಕೆ ಮತ್ತಷ್ಟು ಬಲ ಬರಲಿದೆ’ ಎಂದು ನೈರುತ್ಯ ರೈಲ್ವೆ ಪ್ರಧಾನ ವ್ಯವಸಸ್ಥಾಪಕ ಅಜಯ್‌ಕುಮಾರ್ ಸಿಂಗ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT