ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿಗೆ ವಿವಿಧ ಕೈಗಾರಿಕೆ ತರಲು ಪ್ರಯತ್ನ: ಅಭಯ ಪಾಟೀಲ

ಕಲ್ಪನೆಗೆ ಬಣ್ಣ ತುಂಬಿದ ಚಿಣ್ಣರು
Last Updated 15 ಡಿಸೆಂಬರ್ 2019, 13:14 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ದಕ್ಷಿಣ ಮತಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ಮಂಡೋಳ್ಳಿ ರಸ್ತೆಯ ವ್ಯಾಕ್ಸಿನ್‌ ಡಿಪೊ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಸಾವಿರಾರು ಮಕ್ಕಳು ಭಾಗವಹಿಸಿ, ತಮ್ಮ ಕಲ್ಪನೆಗಳಿಗೆ ಬಣ್ಣ ತುಂಬಿದರು.

ಚಿಕ್ಕವರು ಹಾಗೂ ದೊಡ್ಡ ಮಕ್ಕಳ ಗುಂಪಿನಲ್ಲಿ ಸ್ಪರ್ಧೆಗಳು ನಡೆದವು. 1ನೇ ತರಗತಿಯವರು ‘ಬಾತುಕೋಳಿ’, 2ನೇ ತರಗತಿಯವರಿಗೆ ‘ಯಾವುದಾದರೊಂದು ಬಣ್ಣದ ಚಿತ್ರ’, 3ನೇ ತರಗತಿಯವರಿಗೆ ‘ನದಿಯ ದಡದಲ್ಲಿ ಉದಯಿಸುತ್ತಿರುವ ಸೂರ್ಯ’, 4ನೇ ತರಗತಿಯವರಿಗೆ ‘ಉದ್ಯಾನ’ದ ಚಿತ್ರ ಬಿಡಿಸಲು ಆಯೋಜಕರು ವಿಷಯ ನೀಡಿದ್ದರು.

ದೊಡ್ಡವರ ಗುಂಪಿನಲ್ಲಿ 5ನೇ ತರಗತಿಯವರಿಗೆ ‘ಮಳೆಯಲ್ಲಿ ಫುಟ್‌ಬಾಲ್‌ ಆಡುತ್ತಿರುವ ಮಕ್ಕಳು’, 6ನೇ ತರಗತಿಯವರಿಗೆ ‘ಅರಣ್ಯದಲ್ಲಿ ಚಿಗರೆಯ ಗುಂಪು’, 7ನೇ ತರಗತಿಯವರಿಗೆ ‘ಗ್ರಾಮಸಭೆಯ ಚಿತ್ರ’, 8ನೇ ತರಗತಿಯವರಿಗೆ ‘ಬಂದರಿನಲ್ಲಿ ನಿಂತಿರುವ ಹಡಗುಗಳು’, 9ನೇ ತರಗತಿ ಮಕ್ಕಳಿಗೆ ‘ಕಾಯಿಪಲ್ಯೆ ಸಂತೆ’, ‘ಮನೆಯಲ್ಲಿ ದೀಪಾವಳಿ ಆಚರಿಸುವ ಚಿತ್ರ’ ಹಾಗೂ 10ನೇ ತರಗತಿಯವರಿಗೆ ‘ವಿಮಾನನಿಲ್ದಾಣ’ ಹಾಗೂ ‘ಜ. 26ರಂದು ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ’ ಚಿತ್ರ ಬಿಡಿಸಲು ವಿಷಯ ನೀಡಲಾಗಿತ್ತು. ಮಕ್ಕಳು ತಮಗೆ ತೋಚಿದಂತೆ ಚಿತ್ರಗಳಲ್ಲಿ ‘ವಿಷಯ’ಗಳನ್ನು ಕಟ್ಟಿಕೊಡಲು ಪ್ರಯತ್ನಿಸಿದರು.

ವಿಜೇತರಿಗೆ ಬಹುಮಾನಗಳನ್ನು ಗಾಳಿಪಟ ಉತ್ಸವದಲ್ಲಿ ನೀಡಲಾಗುವುದು ಎಂದು ಆಯೋಜಕರು ತಿಳಿಸಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅಭಯ ಪಾಟೀಲ ಮಾತನಾಡಿ, ‘ಬೆಳಗಾವಿಗೆ ವಿವಿಧ ಕೈಗಾರಿಕೆಗಳನ್ನು ತರುವ ಮೂಲಕ ಇಲ್ಲಿನ ಯುವ ಜನರಿಗೆ ಉದ್ಯೋಗ ಕೊಡಿಸುವುದೇ ನನ್ನ ಗುರಿಯಾಗಿದೆ’ ಎಂದು ತಿಳಿಸಿದರು.

‘ಮಕ್ಕಳ ಪ್ರತಿಭೆಗಳನ್ನು ಗುರುತಿಸಲು ಹಾಗೂ ಪ್ರೋತ್ಸಾಹಿಸಲು 11 ವರ್ಷಗಳಿಂದ ಚಿತ್ರಕಲಾ ಸ್ಪರ್ಧೆ ನಡೆಸುತ್ತಿದ್ದೇನೆ. ಪ್ರತಿ ವರ್ಷವೂ ಅದ್ಭುತ ಪ್ರತಿಕ್ರಿಯೆ ದೊರೆಯುತ್ತಿದೆ. ಸಾವಿರಾರು ಮಕ್ಕಳು ಭಾಗವಹಿಸುತ್ತಿದ್ದಾರೆ. ನಾನು ಮೊದಲ ಬಾರಿಗೆ ಸ್ಪರ್ಧೆ ನಡೆಸಿದಾಗ ಮತಗಳನ್ನು ಸೆಳೆಯುವ ತಂತ್ರಗಾರಿಕೆ ಎಂದು ಕೆಲವರು ಆರೋಪಿಸಿದ್ದರು. ಆದರೆ, ಅದು ನನ್ನ ಉದ್ದೇಶವಾಗಿರಲಿಲ್ಲ’ ಎಂದರು.

‘ಚುನಾವಣೆಯಲ್ಲಿ ಸೋಲು ಕಂಡರೂ ಇಂತಹ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದೆ. ಇದಕ್ಕೆ ನಗರದಲ್ಲಿರುವ ಕನ್ನಡ, ಮರಾಠಿ, ಉರ್ದು ಶಾಲೆಯ ಶಿಕ್ಷಕರು ಹಾಗೂ ಜನರ ಸಹಕಾರ ಕಾರಣ. ಚಿತ್ರಕಲಾ ಸ್ಪರ್ಧೆಗೆ ಕಾರ್ಯಕರ್ತರು ಸಹಕಾರ ನೀಡಿದ್ದಾರೆ. ಆದ್ದರಿಂದಲೇ ಪ್ರತಿ ವರ್ಷವೂ ಕಾರ್ಯಕ್ರಮ ವ್ಯವಸ್ಥಿತವಾಗಿ ನಡೆಯುತ್ತಿದೆ’ ಎಂದು ಹೇಳಿದರು.

ಸ್ಮಾರ್ಟ್‌ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಶಿಧರ ಕುರೇರ, ಸ್ಥಳೀಯರಾದ ಕೀರ್ತಿ ದೊಡ್ಡಣ್ಣವರ, ಶೈಲಜಾ ಶೆಟ್ಟಿ,ಕೀರ್ತಿ ತೆಂಬೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT