ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೌಜಲಗಿ ಭಾಗದಲ್ಲಿ ನೀರಿನ ಬವಣೆ

ಜಲಕುಂಭಗಳನ್ನು ನಿರ್ಮಿಸಲಾಗಿದೆಯಾದರೂ ನೀರು ಪೂರೈಸುತ್ತಿಲ್ಲ!
Last Updated 10 ಮೇ 2019, 19:45 IST
ಅಕ್ಷರ ಗಾತ್ರ

ಕೌಜಲಗಿ: ಪಟ್ಟಣ ಹಾಗೂ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಬವಣೆ ಆರಂಭವಾಗಿದೆ. ಜನರು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಗೋಕಾಕ ತಾಲ್ಲೂಕಿನ ಪೂರ್ವ ಭಾಗದ ಕೌಜಲಗಿ ಹಾಗೂ ಸುತ್ತಲಿನ ಹಳ್ಳಿಗಳಲ್ಲಿ ಜನರು ನೀರಿಗಾಗಿ ದಿನವನ್ನೇ ಮೀಸಲಿಡಬೇಕಾದ ಸ್ಥಿತಿ ಇದೆ. ಜಲಮೂಲಗಳಾದ ಬಾವಿ, ಕೊಳವೆಬಾವಿ, ಕೆರೆ-ಹಳ್ಳಗಳು ಮಳೆಯಾಗದೇ ಇರುವುದರಿಂದ ಬರಿದಾಗಿವೆ. ಪಟ್ಟಣದಲ್ಲಿ ಕುಡಿಯುವ ನೀರಿಗಾಗಿ ಇರುವ ಏಕೈಕ ಜಲಮೂಲವೆಂದರೆ ಮಾಲಗುಂಡ (ಮಹಲಗುಂಡ) ದೇಸಗತಿ ಬಾವಿ. ಇದರಲ್ಲೂ ಈಗ ನೀರಿನ ಪ್ರಮಾಣ ಇಳಿಕೆಯಾಗಿದೆ. ಬಾವಿಯಿಂದ 3–4 ದಿನಗಳಿಗೊಮ್ಮೆ ಕೆಲವೇ ಓಣಿಗೆಳಿಗೆ ಮಾತ್ರವೇ ಕುಡಿಯುವ ನೀರು ಪೂರೈಸಲಾಗುತ್ತದೆ. ಬೇರೆ ಬೇರೆ ಓಣಿಗಳ ಜನರು ಬಾವಿಗೆ ಬಂದು ನೀರು ಸೇದಿಕೊಂಡು ಹೋಗಬೇಕು. ಮಹಿಳೆಯರು ಮತ್ತು ಮಕ್ಕಳು ಹೆಚ್ಚಾಗಿ ಈ ಕಷ್ಟ ಅನುಭವಿಸುತ್ತಿದ್ದಾರೆ.

ಪ್ರಯೋಜನವೇನು?:

ಕೆಲವು ಕಡೆಗಳಲ್ಲಿ ಹೊಸದಾಗಿ ಜಲಕುಂಭಗಳನ್ನು ನಿರ್ಮಿಸಲಾಗಿದೆ. ಆದರೆ, ಅವುಗಳಲ್ಲಿ ನೀರು ದೊರೆಯದೇ ಇರುವುದರಿಂದಾಗಿ ಇದ್ದರೂ ಇಲ್ಲದಂತಾಗಿವೆ. ಏಕೆಂದರೆ, ಅವುಗಳಿಗೆ ನೀರಿನ ಸಂಪರ್ಕವನ್ನೇ ಕಲ್ಪಿಸಿಲ್ಲ!

ಮರುಳಸಿದ್ದೇಶ್ವರ ಮಠಕ್ಕೆ ಹೋಗುವ ದಾರಿಯಲ್ಲಿ ಜಲಕುಂಭ ನಿರ್ಮಾಣಕ್ಕಾಗಿ ಕಟ್ಟೆ ಕಟ್ಟಲಾಗಿದೆ. ವರ್ಷವಾದರೂ ಅದನ್ನು ಪೂರ್ಣಗೊಳಿಸಿ, ನೀರು ಸರಬರಾಜು ಮಾಡಲಾಗಿಲ್ಲ. ಅದೇ ದಾರಿಯಲ್ಲಿ ಒಂದು ಕೊಳವೆಬಾವಿ ಕೊರೆಸಲಾಗಿದ್ದು, ಅದು ಪಂಪ್‌ ಇಲ್ಲದೇ ಹಾಳಾಗಿದೆ. ಇದೆಲ್ಲದರಿಂದಾಗಿ ಕೆಲವು ಓಣಿಗಳಿಗೆ ನೀರಿನ ವ್ಯವಸ್ಥೆಯೇ ಇಲ್ಲದಂತಾಗಿದೆ. ಪರಿಣಾಮ, ಜನರು ಬೇಸತ್ತಿದ್ದಾರೆ.

ಮನ್ನಾಪುರ, ಢವಳೇಶ್ವರ, ಹುಣಶ್ಯಾಳ ಪಿ.ವೈ, ಬೀಸನಕೊಪ್ಪ, ಹೊಸಟ್ಟಿ ಮೊದಲಾದ ಗ್ರಾಮಗಳಲ್ಲೂ ನೀರಿಗೆ ಹಾಹಾಕಾರ ಉಂಟಾಗಿದೆ. ಹುಣಶ್ಯಾಳ ಪಿ.ವೈ. ಮತ್ತು ಢವಳೇಶ್ವರ ಗ್ರಾಮಗಳಲ್ಲಿ ಪಂಚಾಯ್ತಿಯಿಂದ ಕುಡಿಯುವ ನೀರಿಗಾಗಿ ಜಲಕುಂಭಗಳನ್ನು ನಿರ್ಮಿಸಲಾಗಿದೆ. ಆದರೆ, ಅವುಗಳಿಗೆ ನೀರು ಸರಬರಾಜು ಮಾಡುವ ಪೈಪಗಳನ್ನು ಜೋಡಿಸಿಲ್ಲ. ಕೆಲವು ಕಡೆ ಪೈಪ್‌ಗಳನ್ನು ಜೋಡಿಸಿದ್ದರೆ ನೀರು ಪೂರೈಕೆ ಮಾಡುತ್ತಿಲ್ಲ. ಹೀಗಾಗಿ, ಗ್ರಾಮಸ್ಥರು ಆಡಳಿತ ನಡೆಸುವವರು ಹಾಗೂ ಪಂಚಾಯ್ತಿಯವರಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಕ್ರಮಕ್ಕೆ ಆಗ್ರಹ:

‘ಜನಪ್ರತಿನಿಧಿಗಳು ಬೇಗನೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಜಲಕುಂಭಗಳಲ್ಲಿ ನೀರು ದೊರೆಯುವಂತೆ ಕ್ರಮ ವಹಿಸಬೇಕು’ ಎನ್ನುವುದು ಜನರ ಒತ್ತಾಯವಾಗಿದೆ.

ಘಟಪ್ರಭಾ ನದಿ ದಂಡೆಯ ಗ್ರಾಮಸ್ಥರಿಗೆ ನದಿಯಿಂದ ಕುಡಿಯುವ ನೀರು ಸಿಗುತ್ತಿಲ್ಲ. ವರ್ಷದುದ್ದಕ್ಕೂ ನದಿಯಲ್ಲಿ ನೀರು ಇರುವುದೇ ಕಡಿಮೆ. ವರ್ಷದಲ್ಲಿ 2–3 ಬಾರಿ ಕೇವಲ 4–5 ದಿನಗಳವರೆಗೆ ನದಿ ತುಂಬಿ ಹರಿಯುತ್ತದೆ. ಕಾರ್ಖಾನೆಗಳ ತ್ಯಾಜ್ಯದಿಂದಾಗಿ ಕಲುಷಿತಗೊಂಡು ಹಿರಯುವ ನೀರು, ಕುಡಿಯಲು ಯೋಗ್ಯವಾಗಿರುವುದಿಲ್ಲ. ಟ್ಯಾಂಕರ್‌ ಮೂಲಕವಾದರೂ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎನ್ನುವುದು ಜನರ ಆಗ್ರಹವಾಗಿದೆ.

‘ಕೌಜಲಗಿ ಮತ್ತು ಸುತ್ತಲಿನ ಗ್ರಾಮಗಳ ಕುಡಿಯುವ ನೀರಿಗಾಗಿ ಅಧಿಕಾರಿಗಳು ವ್ಯವಸ್ಥೆಗಳನ್ನು ಮಾಡುತ್ತಿದ್ದಾರೆ. ಯಾದವಾಡ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕೊಳವೆಬಾವಿಗಳನ್ನು ಕೊರೆಸಲಾಗಿದ್ದು, ಅವುಗಳ ಮೂಲಕ ನೀರು ಪೂರೈಸಲಾಗುವುದು’ ಎಂದು ಪಂಚಾಯ್ತಿ ಕಾರ್ಯದರ್ಶಿ ಈರಪ್ಪ ಕುಂದರಗಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಗರನಾಳ-ಗೋಸಬಾಳ-ಬಿಲಕುಂದಿ ಗ್ರಾಮಗಳಲ್ಲಿ ಬಾವಿ ಹಾಗೂ ಕೊಳವೆಬಾವಿಗಳನ್ನು ಕೊರೆಸಲಾಗಿದೆ. ಬೇಸಿಗೆಯಾಗಿರುವುದರಿಂದ ನೀರಿನ ಪ್ರಮಾಣ ಕಡಿಮೆ ಇದೆ’ ಎಂದು ಗೋಸಬಾಳ ಪಂಚಾಯ್ತಿ ಪಿಡಿಒ ಯಲ್ಲಪ್ಪ ಹೊಸಮನಿ ಹೇಳಿದರು.

‘ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕಾರ್ಯನಿರ್ವಹಿಸಲಾಗುತ್ತಿದೆ. ಮಾಲಗೊಂಡ ಬಾವಿಯಿಂದ ಕೆಲವು ಓಣಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಇನ್ನು ಕೆಲವು ಓಣಿಗಳಿಗೆ ಕೊಳವೆಬಾವಿಗಳನ್ನು ಕೊರೆಸಿ ಪೂರೈಸಲಾಗುತ್ತಿದೆ. ಅಗತ್ಯ ಎನಿಸಿದರೆ ಮತ್ತಷ್ಟು ಕೊಳವೆಬಾವಿಗಳನ್ನು ಕೊರೆಸಲು ಪ್ರಯತ್ನಿಸಲಾಗುವುದು. ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು’ ಎಂದು ಕೌಜಲಗಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ನೀಲಪ್ಪ ಕೇವಟಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT