ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ನಗರದಲ್ಲಿ ಕುಡಿಯುವ ನೀರಿಗಾಗಿ ತಪ್ಪದ ಬವಣೆ

24x7 ನಿರಂತರ ಪೂರೈಕೆ ಸಂಪೂರ್ಣ ಅನುಷ್ಠಾನ ಯಾವಾಗ?
Last Updated 27 ಆಗಸ್ಟ್ 2021, 19:30 IST
ಅಕ್ಷರ ಗಾತ್ರ

ಬೆಳಗಾವಿ: ನಗರದ ಹಲವು ಬಡಾವಣೆಗಳಲ್ಲಿ ಶುದ್ಧ ನೀರಿಗಾಗಿ ಜನರು ಪರದಾಡುವುದು ತಪ್ಪಿಲ್ಲ.

ಇಲ್ಲಿಗೆ ತಾಲ್ಲೂಕಿನ ರಾಕಸಕೊಪ್ಪ ಜಲಾಶಯ ಮತ್ತು ಹುಕ್ಕೇರಿ ತಾಲ್ಲೂಕಿನ ಹಿಡಕಲ್‌ ಜಲಾಶಯ ಕುಡಿಯುವ ನೀರಿನ ಮೂಲಗಳಾಗಿವೆ. ಸಾಕಷ್ಟು ‍ಪ್ರಮಾಣದಲ್ಲಿ ನೀರು ಲಭ್ಯವಿದ್ದರೂ ವಿತರಣೆಯಲ್ಲಿ ಆಗುತ್ತಿರುವ ಲೋಪದಿಂದಾಗಿ ಜನರು ತೊಂದರೆ ಅನುಭವಿಸುವುದು ತಪ್ಪಿಲ್ಲ. ಎಲ್ಲ ವಾರ್ಡ್‌ಗಳಲ್ಲೂ ಕುಡಿಯುವ ನೀರು ನಿರಂತರ ಪೂರೈಕೆ ಪ್ರಕ್ರಿಯೆ ಇನ್ನೂ ಕನಸಾಗಿಯೇ ಉಳಿದಿದೆ. ಬಡವನಕುಡಚಿ, ಮಜಗಾವಿ ಸೇರಿದಂತೆ ಕೆಲವು ಕಡೆಗಳಲ್ಲಿ ಮಳೆಗಾಲದಲ್ಲೂ ಕುಡಿಯುವ ನೀರಿಗೆ ತತ್ವಾರ ಉಂಟಾಗುತ್ತಿದೆ.

ನಗರಪಾಲಿಕೆ ವ್ಯಾಪ್ತಿಯಲ್ಲಿ ಇಲ್ಲಿ 58 ವಾರ್ಡ್‌ಗಳಿವೆ. ಈ ಪೈಕಿ 10 ವಾರ್ಡ್‌ಗಳಲ್ಲಿ ಕುಡಿಯುವ ನೀರನ್ನು ಪ್ರಾಯೋಗಿಕವಾಗಿ ದಿನದ 24 ಗಂಟೆಯೂ ಪೂರೈಸುವ ಯೋಜನೆ ಜಾರಿಗೊಳಿಸಲಾಗಿದೆ. ಇದನ್ನು ಪ್ರಾತ್ಯಕ್ಷಿಕೆ ವಲಯವೆಂದು ಪರಿಗಣಿಸಲಾಗಿದೆ. ಅಲ್ಲೂ ಒಮ್ಮೊಮ್ಮೆ 2–3 ದಿನಗಳವರೆಗೆ ನೀರು ಬಾರದಿರುವ ಉದಾಹರಣೆ ಇದೆ. ಉಳಿದ 48 ವಾರ್ಡ್‌ಗಳಲ್ಲೂ 24x7 ನೀರು ಪೂರೈಕೆ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದು ಹಲವು ವರ್ಷಗಳಿಂದಲೂ ನಗರಪಾಲಿಕೆಯವರು ಹಾಗೂ ಶಾಸಕರು ಹೇಳುತ್ತಲೇ ಬರುತ್ತಿದ್ದಾರೆ.

ಸಾಮರ್ಥ್ಯ ಹೆಚ್ಚಿಸಲಾಗಿದೆ

ಹಿಡಕಲ್ ಜಲಾಶಯದಿಂದ ನಗರಕ್ಕೆ ನೀರು ಪೂರೈಸಲು ಅಳವಡಿಸಲಾಗಿರುವ ಪಂಪ್‌ಸೆಟ್‌ ಬಹಳಷ್ಟು ಹಳೆಯದಾಗಿತ್ತು. ಅದರ ಸಾಮರ್ಥ್ಯವನ್ನು 12 ಎಂಜಿಡಿಯಿಂದ 18 ಎಂಜಿಡಿಗೆ ಏರಿಸಲಾಗಿದೆ. ಸಾಮರ್ಥ್ಯ ಹೆಚ್ಚಿಸಿದ್ದರಿಂದಾಗಿ ನಿತ್ಯವೂ ಹೆಚ್ಚುವರಿಯಾಗಿ 6 ಎಂಜಿಡಿ (ಮಿಲಿಯನ್‌ ಗ್ಯಾಲನ್‌ ಪರ್‌ ಡೇ) ನೀರನ್ನು ನಗರಕ್ಕೆ ಪೂರೈಸಬಹುದಾಗಿದೆ. 2031ರ ವೇಳೆಗೆ ನಗರದ ಜನಸಂಖ್ಯೆ 7 ಲಕ್ಷ ಮೀರುತ್ತದೆ ಎಂದು ಅಂದಾಜಿಸಲಾಗಿದೆ. ಇದಕ್ಕೆ ತಕ್ಕಂತೆ ಪಂಪಿಂಗ್‌ ಯಂತ್ರಗಳನ್ನು ಮೇಲ್ದರ್ಜೆಗೇರಿಸಲಾಗಿದೆ. ಇದಕ್ಕೆ ₹ 32 ಕೋಟಿ ವೆಚ್ಚ ಮಾಡಲಾಗಿದೆ. ಇಷ್ಟಾದರೂ ಅಲ್ಲಲ್ಲಿ ನೀರಿಗಾಗಿ ಜನರು ಪರದಾಡುವುದು ಆಗಾಗ ಕಂಡುಬರುತ್ತಲೇ ಇದೆ.

24X7 ನೀರು ಪೂರೈಕೆಗಾಗಿ ಹಲವು ಬಡಾವಣೆಗಳಲ್ಲಿ ಪ್ರತಿ ಮನೆಗಳಿಗೂ ನಲ್ಲಿ ನೀರಿನ ಸಂಪರ್ಕ ಕಲ್ಪಿಸಿ, ಮೀಟರ್‌ಗಳನ್ನೂ ಅಳವಡಿಸಲಾಗಿದೆ. ಆದರೆ, ಅಲ್ಲಿ ನಿರಂತರವಾಗಿ ನೀರು ದೊರೆಯುತ್ತಿಲ್ಲ. ಅದರಲ್ಲೂ ಬೇಸಿಗೆ ಸಂದರ್ಭದಲ್ಲಿ ನೀರಿಗಾಗಿ ಬವಣೆ ಹೆಚ್ಚಾಗುತ್ತದೆ. ಕೊಳವೆಬಾವಿಗಳನ್ನು ಕೊರೆದು ಅಂತರ್ಜಲದ ಮೇಲೆ ಅವಲಂಬನೆ ಆಗುವುದು ತಪ್ಪಿಲ್ಲ. ಬೇಸಿಗೆ ಆರಂಭ ಆಗುತ್ತಿದ್ದಂತೆಯೇ, ಪ್ರತಿ ಐದು ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುವುದು, ಸಾರ್ವಜನಿಕರು ಸಹಕರಿಸಬೇಕು ಎಂದು ಪ್ರಕಟಣೆ ಕೊಡುವುದು ನಿಂತಿಲ್ಲ.

ಈಗ ಮಂಡಳಿ ನಿರ್ವಹಿಸುತ್ತಿಲ್ಲ

ಈ ನಡುವೆ, ನಗರದಲ್ಲಿ ನೀರು ಸರಬರಾಜು ಮತ್ತು ನಿರ್ವಹಣೆ ಜವಾಬ್ದಾರಿಯನ್ನು ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಬದಲಿಗೆ ಎಲ್‌ ಅಂಡ್ ಟಿ ಕಂಪನಿಗೆ ವಹಿಸಲಾಗಿದೆ. ಇತ್ತೀಚೆಗೆ ಉಂಟಾಗಿದ್ದ ಅತಿವೃಷ್ಟಿ ಸಂದರ್ಭದಲ್ಲಿ ಪಂಪ್‌ಸೆಟ್‌ ಕೆಟ್ಟಿತ್ತು. ಅದನ್ನು ದುರಸ್ತಿ ಮಾಡಲು ವಾರಕ್ಕೂ ಹೆಚ್ಚು ಸಮಯ ತೆಗೆದುಕೊಳ್ಳಲಾಯಿತು! ಆಗ ಜನರು ನೀರಿಗಾಗಿ ತೀವ್ರ ತೊಂದರೆ ಅನುಭವಿಸಿದ್ದರು. ತಾಂತ್ರಿಕ ಕಾರಣಗಳನ್ನು ಒಡ್ಡಿ ಆಗಾಗ ನೀರು ಪೂರೈಕೆಯಲ್ಲಿ ವ್ಯತ್ಯಯ ಮಾಡಲಾಗುತ್ತಲೇ ಇರುತ್ತದೆ.

ರಾಮತೀರ್ಥ ನಗರ, ಎಚ್‌.ಡಿ. ಕುಮಾರಸ್ವಾಮಿ ಬಡಾವಣೆ, ಗಾಂಧಿನಗರ, ದೇವರಾಜ ಅರಸು ಬಡಾವಣೆ, ಮಜಗಾವಿ, ಕಣಬರ್ಗಿ, ಆಟೊನಗರ, ದೇವರಾಜ ಅಸರು ಕಾಲೊನಿ, ಬಸವನಕುಡಚಿ ಹಾಗೂ ಹೊರವಲಯದ ಬಡಾವಣೆಗಳಲ್ಲಿ ಸರಾಸರಿ 8-10 ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ಸದಾಶಿವ ನಗರ, ಶಾಹೂನಗರ, ನೆಹರೂನಗರ, ಅಶೋಕ ನಗರ, ಅಜಂ ನಗರ, ಅಮನ್ ನಗರ ಮೊದಲಾದ ಕಡೆಗಳಲ್ಲಿ ಆಗಾಗ ಕಲುಷಿತ ನೀರು ಪೂರೈಸಲಾಗುತ್ತಿದೆ.

ಬಹುತೇಕ ಬಡಾವಣೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅಳವಡಿಸುವ ಕಾರ್ಯವೂ ನಡೆದಿಲ್ಲ! ಡಾ.ಬಿ.ಆರ್. ಅಂಬೇಡ್ಕರ್‌ ರಸ್ತೆಯಲ್ಲಿ ಹಿಂದೆ ಅಳವಡಿಸಿರುವ ಘಟಕ ನಿರ್ವಹಣೆ ಇಲ್ಲದೇ, ಪ್ರಯೋಜನಕ್ಕೆ ಬಾರದಂತಾಗಿದೆ.

ಪರದಾಟ ಸಾಮಾನ್ಯ

ಬಡಾವಣೆಯಲ್ಲಿ ಕುಡಿಯುವ ನೀರಿಗೆ ಪರದಾಟ ಸಾಮಾನ್ಯ ಎನ್ನುವಂತಾಗಿ ಹೋಗಿದೆ. 8–10 ದಿನಗಳಿಗೊಮ್ಮೆ ನೀರು ಪೂರೈಸಲಾಗುತ್ತದೆ. 1990ರಲ್ಲಿ ಅಲಾರವಾಡ ಬಳಿ ಅಂದಿನ ಜನಸಂಖ್ಯೆಗೆ ಅನುಗುಣವಾಗಿ ಟ್ಯಾಂಕ್‌ ನಿರ್ಮಿಸಲಾಗಿದೆ. ಅಲ್ಲಿಂದ ಬಸವನಕುಡಚಿ, ದೇವರಾಜ ಅರಸು ಕಾಲೊನಿ, ಅಲಾರವಾಡ ಬಡಾವಣೆಗಳಿಗೆ ನೀರು ಕೊಡಬೇಕು. ಈಗ ಜನಸಂಖ್ಯೆ ದುಪ್ಪಟ್ಟಾಗಿದೆ. ಇದರಿಂದಾಗಿ, ನೀರು ಸಾಕಾಗುತ್ತಿಲ್ಲ ಎನ್ನುತ್ತಾರೆ ಬಸವನಕುಡಚಿ ನಿವಾಸಿಗಳು.

24x7 ಕುಡಿಯುವ ನೀರು ಪೂರೈಕೆ ಯೋಜನೆ 3 ವರ್ಷದ ಹಿಂದೆ ರದ್ದಾಗಿತ್ತು. ಶಾಸಕ ಅಭಯ ಪಾಟೀಲ ಪ್ರಯತ್ನದಿಂದಾಗಿ, ₹ 804 ಕೋಟಿ ವೆಚ್ಚದ ಕಾಮಗಾರಿಗೆ ಮಂಜೂರಾತಿ ದೊರೆತಿದೆ.

‘ನಗರದ 1.02 ಲಕ್ಷ ಮನೆಗಳಿಗೆ ನಿರಂತರವಾಗಿ ನೀರು ಪೂರೈಸುವ ಮಹತ್ವದ ಯೋಜನೆ ಇದಾಗಿದೆ. 61.22 ಕಿ.ಮೀ. ಹೊಸ ಪೈಪ್‌ಲೈನ್ (ಒಟ್ಟು 1,162 ಕಿ.ಮೀ. ಪೈಪ್‌ಲೈನ್) ಮಾಡಲಾಗುವುದು. 2ನೇ ಅಂತಸ್ತಿನ ಮನೆಗಳಿಗೂ ನಿರಂತರವಾಗಿ ನೀರು ಪೂರೈಕೆಯಾಗಲಿದೆ. ಎಲ್‌ ಅಂಡ್ ಟಿ ಕಂಪನಿಯವರು ಯೋಜನೆಯ ಗುತ್ತಿಗೆ ಪಡೆದು ಕಾಮಗಾರಿ ಶುರು ಮಾಡಿದ್ದಾರೆ. ಯೋಜನೆಯಿಂದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹೊತ್ತು ತರಬೇಕು

ನಮ್ಮ ಬಡಾವಣೆಯಲ್ಲಿ ನೀರಿಗಾಗಿ ವರ್ಷಪೂರ್ತಿ ಸಮಸ್ಯೆ ಇದೆ. ಹೊರವಲಯದಲ್ಲಿರುವ ಬಾವಿಗಳಿಂದ ಬಿಂದಿಗೆಗಳಲ್ಲಿ ನೀರು ಹೊತ್ತು ತರಬೇಕಾದ ಅನಿವಾರ್ಯತೆ ಇದೆ. ಇಲ್ಲಿ ಅಳವಡಿಸಿರುವ ಶುದ್ಧ ನೀರಿನ ಘಟಕದಿಂದ ಪ್ರಯೋಜನ ಆಗುತ್ತಿಲ್ಲ.

–ಮಹಾವೀರ ಪಾಟೀಲ, ನಿವಾಸಿ, ಬಸವನಕುಡಚಿ

ನೀರು ಪೂರೈಕೆಗೆ ಕ್ರಮ

ನಾಲ್ಕು ದಿನಕ್ಕೊಮ್ಮೆ, ಕೆಲವು ಪ್ರದೇಶಗಳಲ್ಲಿ ವಾರಕ್ಕೊಮ್ಮೆ ಕುಡಿಯುವ ನೀರು ಪೂರೈಕೆ ಆಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ರದ್ದಾಗಿದ್ದ ಯೋಜನೆಯನ್ನು ಪುನರ್ ಮಂಜೂರು ಮಾಡಿಸಲಾಗಿದೆ. ಪ್ರತಿ ಮನೆಗೂ ದಿನದ 24 ಗಂಟೆಯೂ ನಿರಂತರವಾಗಿ ನೀರು ಪೂರೈಸಲಾಗುವುದು.

–ಅಭಯ ಪಾಟೀಲ, ಶಾಸಕ, ದಕ್ಷಿಣ ಮತಕ್ಷೇತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT