ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2 ವರ್ಷದಲ್ಲಿ ಪ್ರತಿ ಮನೆಗೂ ನೀರಿನ ಸಂಪರ್ಕ: ಕೆ.ಎಸ್. ಈಶ್ವರಪ್ಪ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆ
Last Updated 30 ಆಗಸ್ಟ್ 2021, 13:47 IST
ಅಕ್ಷರ ಗಾತ್ರ

ಬೆಳಗಾವಿ: ‘ಎರಡು ವರ್ಷದಲ್ಲಿ ರಾಜ್ಯದ ಪ್ರತಿ ಮನೆಗೂ ನಲ್ಲಿಗಳ ಮೂಲಕ ಕುಡಿಯುವ ನೀರು ಪೂರೈಸುವ ಗುರಿ ಹೊಂದಲಾಗಿದೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ, ಮೈಸೂರಿನ ಅಬ್ದುಲ್ ನಜೀರ್‌ಸಾಬ್‌ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಂಸ್ಥೆ ಹಾಗೂ ಜಿಲ್ಲಾ ಪಂಚಾಯ್ತಿ ಸಹಯೋಗದಲ್ಲಿ ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಪಂಚಾಯ್ತಿಗಳ ಸಿಇಒಗಳ ಕಾರ್ಯಾಗಾರವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಕೋವಿಡ್–19 ಸೋಂಕು ಇಡೀ ಪ್ರಪಂಚವನ್ನೆ ಗಾಬರಿಗೊಳಿಸಿತ್ತು. ಅದರ ನಿರ್ವಹಣೆಯಲ್ಲಿ ಜಗತ್ತಿನಲ್ಲಿ ದೇಶ ಹಾಗೂ ದೇಶದಲ್ಲಿ ರಾಜ್ಯ ಪ್ರಥಮ‌ ಸ್ಥಾನದಲ್ಲಿದೆ. ಇದು ಹೆಮ್ಮೆಯ ವಿಷಯ. ಜನರ ರಕ್ಷಣೆಗಾಗಿ ಜಿಲ್ಲಾ ಪಂಚಾಯ್ತಿ ಅಧಿಕಾರಿಗಳ ಸ್ಫೂರ್ತಿಯಿಂದ ಗ್ರಾಮ ಪಂಚಾಯ್ತಿಗಳ ಕಾರ್ಯಪಡೆಗಳು ಮಾಡಿರುವ ಕಾರ್ಯವನ್ನು ಮರೆಯಲಾಗುವುದಿಲ್ಲ’ ಎಂದರು.

ಕೋವಿಡ್ ಹೋಗಿಲ್ಲ:

‘ಇನ್ನೂ ಕೋವಿಡ್ ಪೂರ್ಣ ಹೋಗಿಲ್ಲ. ಯಾವಾಗ ಏನಾಗುತ್ತದೆಯೋ ಎಂಬ ಆತಂಕ ಜನರಲ್ಲಿದೆ. ಸರ್ಕಾರವೂ ಇದೇ ನಿಟ್ಟಿನಲ್ಲಿ ಚಿಂತಿಸಿ ಹೆಚ್ಚಿನ ಪರಿಶ್ರಮ ಹಾಕುತ್ತಿದೆ. ಕೋವಿಡ್ ಲಸಿಕೆ ಬಗ್ಗೆಯೂ ಆರಂಭದಲ್ಲಿ ಸಾಕಷ್ಟು ಗೊಂದಲಗಳು ಆಗಿದ್ದವು. ಭಯವೂ ಉಂಟಾಗಿತ್ತು. ಈಗ ಲಸಿಕೆಗಾಗಿ ಸಾಲು ನಿಲ್ಲುತ್ತಿದ್ದಾರೆ. ಲಸಿಕೆಯನ್ನು ನವೆಂಬರ್‌ವರೆಗೆ ಉಚಿತವಾಗಿ ಕೊಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಇದರಿಂದ ಎಷ್ಟೋ ಸಮಾಧಾನ ಆಗಿದೆ’ ಎಂದು ತಿಳಿಸಿದರು.

‘ಕೋವಿಡ್ ನಿಯಂತ್ರಣಕ್ಕೆ ಬೇಕಾದ ಎಲ್ಲ ಪ್ರಯತ್ನಗಳನ್ನೂ ಅಧಿಕಾರಿಗಳು ಮಾಡಬೇಕು’ ಎಂದರು.

‘ನರೇಗಾದಲ್ಲಿ ಹೆಚ್ಚು ಉದ್ಯೋಗ ನೀಡುವುದರಲ್ಲಿ ರಾಜ್ಯವು ಇಡೀ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಯಾರೊಬ್ಬರೂ ಹಸಿವಿನಿಂದ ಇರಬಾರದು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಜನರಿಗೆ ಕೆಲಸ ಕೊಡುತ್ತಿದ್ದೇವೆ’ ಎಂದು ಹೇಳಿದರು.

‘ಇಂದಿಗೂ ಅನೇಕ ಹಳ್ಳಿಗಳಲ್ಲಿ ‌ಬಯಲು ಶೌಚ ಸಮಸ್ಯೆ ನಿವಾರಣೆ ಆಗಿಲ್ಲ. ಶೌಚಾಲಯಗಳು ಪೂರ್ಣವಾಗಿ ಆಗಿಲ್ಲ. ಆಗಿದ್ದರೂ ಬಳಕೆ ಮಾಡಿಕೊಳ್ಳುತ್ತಿಲ್ಲ. ಇಂದಿಗೂ ಮಹಿಳೆಯರು ಮುಜುಗರ ಅನುಭವಿಸುವಂತಹ ಸ್ಥಿತಿ ಇದೆ. ಹೀಗಾಗಿ, ಪ್ರತಿ ಮನೆಯಲ್ಲೂ ಶೌಚಾಲಯ ನಿರ್ಮಿಸಲು ಕ್ರಮ ಕೈಗೊಳ್ಳಬೇಕಾಗಿದೆ’ ಎಂದರು.

ಕೋವಿಡ್ ತಡೆಗೆ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಕ್‌, ‘ಕುಡಿಯುವ ನೀರು, ಆರೋಗ್ಯ, ಶಿಕ್ಷಣ, ಆಹಾರ ಮಾನವನ ಮೂಲ ಅವಶ್ಯಕತೆಗಳಾಗಿವೆ. ಅವುಗಳನ್ನು ಪೂರೈಸುವುದು ಪಂಚಾಯ್ತಿಯ ಮುಖ್ಯ ಕಾರ್ಯವಾಗಿದೆ. ಕೋವಿಡ್ ತಡೆಗಟ್ಟುವಲ್ಲಿ ಪಂಚಾಯ್ತಿ ಮಟ್ಟದ ಕಾರ್ಯಪಡೆಯ ಪಾತ್ರ ಬಹಳ ಪ್ರಮುಖವಾಗಿದೆ. ಇದಕ್ಕಾಗಿ ‘ಗ್ರಾಮ ಪಂಚಾಯ್ತಿ ಆರೋಗ್ಯ ಅಮೃತ ಯೋಜನೆ’ ಜಾರಿಗೆ ತರಲಾಗಿದೆ. ಇದು ಕೋವಿಡ್ ತಡೆಗಟ್ಟುವಲ್ಲಿ ಇದು ಪ್ರಯೋಜನಕಾರಿ ಆಗಲಿದೆ’ ಎಂದು ತಿಳಿಸಿದರು.

‘ಮಧುಮೇಹ, ಅಧಿಕ ರಕ್ತದೊತ್ತಡ, ಕ್ಷಯ ಮೊದಲಾದ ಸಮಸ್ಯೆಗಳನ್ನು ತಡೆಗಟ್ಟುವುದಕ್ಕೂ ಆದ್ಯತೆ ನೀಡಲಾಗುವುದು’ ಎಂದರು.

ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್ (ಕೆ.ಎಚ್.ಟಿ.ಪಿ.) ವ್ಯವಸ್ಥಾಪಕ ನಿರ್ದೇಶಕ ಎಚ್‌.ಎಂ. ಮೋಹನ್, ‘ಆಪ್ತ ಸಮಾಲೋಚನೆಗೆ ‘ಸಹಿತ’ ಸಹಾಯವಾಣಿಯು ಬೆಂಗಳೂರು, ಮೈಸೂರು, ಧಾರವಾಡದಲ್ಲಿ ಕೇಂದ್ರಗಳನ್ನು ತೆರೆಯಲಾಗಿದೆ’ ಎಂದು ತಿಳಿಸಿದರು.

ನರೇಗಾ ಸಮಸ್ಯೆಗಳ ನಿವಾರಣೆಗೆ ಸಹಾಯವಾಣಿ (ಸಂಖ್ಯೆ 1800-425-2822) ಸೇವೆಗೆ ಚಾಲನೆ ನೀಡಲಾಯಿತು. ಹೊಸ ಕೆರೆಗಳ ನಿರ್ಮಾಣದ ಪುಸ್ತಕ ಬಿಡುಗಡೆ ಮಾಡಲಾಯಿತು. ನರೇಗಾ ಕೂಲಿ ಕಾರ್ಮಿಕರಿಗೆ ಕ್ಯಾಪ್ ಮತ್ತು ಶರ್ಟ್ ನೀಡುವ ಅಭಿಯಾನಕ್ಕೂ ಚಾಲನೆ ನೀಡಲಾಯಿತು.

ಎಸ್.ಆರ್. ಬೊಮ್ಮಾಯಿ ಅವರಿಗೆ ಅಭಿನಂದನೆ!

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎನ್ನುವ ಬದಲಿಗೆ ಸಚಿವರು ಒಮ್ಮೆ ಬಾಯಿ ತಪ್ಪಿ ಎಸ್.ಆರ್. ಬೊಮ್ಮಾಯಿ ಎಂದು ಬಳಸಿದರು. ‘ಅಮೃತ ಗ್ರಾಮ ಪಂಚಾಯ್ತಿ ಯೋಜನೆ ಘೋಷಿಸಿದ್ದಕ್ಕೆ ಎಸ್.ಆರ್. ಬೊಮ್ಮಾಯಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT