ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಲಕನ ಪುತ್ರ ಎ.ಸಿ. ಹುದ್ದೆಗೆ ಆಯ್ಕೆ

ಐಎಎಸ್‌ ಅಧಿಕಾರಿಗಳ ಮಾತೇ ನನಗೆ ಸ್ಫೂರ್ತಿ
Last Updated 25 ಡಿಸೆಂಬರ್ 2019, 15:59 IST
ಅಕ್ಷರ ಗಾತ್ರ

ಬೆಳಗಾವಿ: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸಿದ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದಿರುವ ಅಥಣಿ ತಾಲ್ಲೂಕಿನ ಮೋಳೆಯ ಜಗದೀಶ ಅಡಹಳ್ಳಿ ಉಪ ವಿಭಾಗಾಧಿಕಾರಿ ಹುದ್ದೆಗೆ ಆಯ್ಕೆಯಾಗಿದ್ದಾರೆ.

ಮಧ್ಯಮ ವರ್ಗದ ಶ್ರೀಕಾಂತ ಹಾಗೂ ಸುಮಿತ್ರಾಅಡಹಳ್ಳಿ ದಂಪತಿಯ ನಾಲ್ವರು ಮಕ್ಕಳಲ್ಲಿ ಜಗದೀಶ ಕಿರಿಯ ಪುತ್ರ. 28 ವರ್ಷದಲ್ಲಿ ದೊಡ್ಡ ಹುದ್ದೆ ಪಡೆಯುವ ಮೂಲಕ ಗ್ರಾಮ ಹಾಗೂ ಜಿಲ್ಲೆಯ ಕೀರ್ತಿ ಹೆಚ್ಚಿಸಿದ ಹೆಮ್ಮೆ ತಮ್ಮದಾಗಿಸಿಕೊಂಡಿದ್ದಾರೆ.

ಮೋಳೆಯ ಸಿದ್ದೇಶ್ವರ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಮುಗಿಸಿದ ಅವರು, ಶೇ. 80.06 ಅಂಕ ಗಳಿಸಿದ್ದರು. ಪಿಯುಸಿ ಅಥಣಿ ತಾಲ್ಲೂಕಿನ ಜಾಧವಜಿ ಆನಂದಜಿ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಶೇ 89 ಅಂಕ ಪಡೆದಿದ್ದರು. ಪದವಿಯನ್ನು ಇಲ್ಲಿನ ಕೆ.ಎಲ್.ಎಸ್. ಗೋಗಟೆ ತಾಂತ್ರಿಕ ಕಾಲೇಜಿನಲ್ಲಿ ಶೇ 87 ಅಂಕಗಳೊಂದಿಗೆ ಪಡೆದಿದ್ದಾರೆ. 2014ರಿಂದ ನವದೆಹಲಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಕೋಚಿಂಗ್ ಪಡೆಯುತ್ತಿದ್ದರು.

ಐಎಎಸ್‌ ಅಧಿಕಾರಿಗಳು ಸ್ಪೂರ್ತಿ: ‘ಉನ್ನತ ಅಧಿಕಾರಿ ಆಗಬೇಕು ಎಂಬ ಕನಸು ನನ್ನದು. ಆದರೆ ಯಾವ ಹುದ್ದೆ ಆಯ್ಕೆ ಮಾಡಿಕೊಳ್ಳಬೇಕು ಎಂಬ ಗೊಂಗಲದವಿತ್ತು. ಅಥಣಿ ಶುಗರ್ಸ್‌ ಕಂಪನಿಯಲ್ಲಿ ಚಾಲಕರಾಗಿ ಕಾರ್ಯನಿರ್ವಹಿಸುತ್ತಿರುವ ತಂದೆಯನ್ನು, 2013ರಲ್ಲಿ ವಿಧಾನಸಭೆ ಚುನಾವಣಾ ಕೆಲಸಕ್ಕೆ ನಿಯೋಜನೆಗೊಂಡಿದ್ದರು. ನಾನು ಸಹ ಅಲ್ಲಿಗೆ ಹೋಗಿದ್ದೆ. ಆಗ ಐಎಎಸ್‌ ಅಧಿಕಾರಿಗಳು ಆಡುತ್ತಿದ್ದ ಮಾತುಗಳ ನನಗೆ ಸ್ಫೂರ್ತಿ ನೀಡಿದವು. ಹೀಗಾಗಿ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಂಡು ಪ್ರಯತ್ನ ಮಾಡಿದೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ನಿರಂತರ ಪರಿಶ್ರಮ: 2014ರಲ್ಲಿ ನವದೆಹಲಿಯಲ್ಲಿ ಐಎಎಸ್‌ ಕೋಚಿಂಗ್‌ ಸೇರ್ಪಡೆಗೊಂಡು ಅಧ್ಯಯನ ಪ್ರಾರಂಭಿಸಿದೆ. 5 ಬಾರಿ ಯುಪಿಎಸ್‌ಸಿ ಪರೀಕ್ಷೆಯನ್ನೂ ಬರೆದಿದ್ದೇನೆ. ಕೆಎಎಸ್‌ 2ನೇ ಬಾರಿಯ ಪರೀಕ್ಷೆಯಲ್ಲಿ ಪಾಸಾಗಿದ್ದೇನೆ. ಐಎಎಸ್‌ ಪರೀಕ್ಷೆ ಎದುರಿಸಿದ ಅನುಭವವೂ ಇದಕ್ಕೆ ಸಹಾಯವಾಗಿದೆ’ ಎಂದು ಹೇಳಿದರು.

‘ತಂದೆ–ತಾಯಿ ಕಷ್ಟ ಪಟ್ಟು ಓದಿಸಿದ್ದಾರೆ. ಅವರ ಕಷ್ಟಕ್ಕೆ ಹಾಗೂ ನಿಷ್ಠೆಯಿಂದ ಓದಿರುವುದಕ್ಕೆ ಪ್ರತಿಫಲ ದೊರೆತಿದೆ. ಕನ್ನಡವನ್ನು ಐಚ್ಛಿಕ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡಿದ್ದೆ. ದೆಹಲಿಯಲ್ಲಿ ವಿದ್ಯಾರ್ಥಿಗಳಿಗೆ ಪಾಠವನ್ನೂ ಮಾಡುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT