ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರು ಪೂರೈಸಿ, ಗುಳೆ ತಡೆಯಿರಿ: ಆರ್‌.ವಿ. ದೇಶಪಾಂಡೆ ತಾಕೀತು

Last Updated 29 ಜನವರಿ 2019, 11:16 IST
ಅಕ್ಷರ ಗಾತ್ರ

ಬೆಳಗಾವಿ: ‘ದುಡಿಯುವ ಕೈಗಳಿಗೆ ಕೆಲಸ ಕೊಡಬೇಕು. ಜನರು ಉದ್ಯೋಗಕ್ಕಾಗಿ ಗುಳೆ ಹೋಗದಂತೆ ಹಾಗೂ ಕುಡಿಯುವ ನೀರು ಪೂರೈಕೆಯಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಬೇಕು’ ಎಂದು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಸೂಚಿಸಿದರು.

ಇಲ್ಲಿ ಮಂಗಳವಾರ ನಡೆದ ಬರ ಪರಿಹಾರ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ 41 ಪ್ರದೇಶಗಳನ್ನು ಗುರುತಿಸಲಾಗಿದ್ದು, ಅಲ್ಲಿ ಫೆ. 3ರ ಒಳಗೆ ಮೇವು ಬ್ಯಾಂಕ್‌ಗಳನ್ನು ಆರಂಭಿಸಬೇಕು. ಪಶುಪಾಲನಾ ಇಲಾಖೆಗೆ ₹ 25 ಕೋಟಿ ಅನುದಾನ ನೀಡಲಾಗಿದೆ. ಜಾನುವಾರುಗಳಿಗೆ ಮೇವಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು’ ಎಂದು ತಿಳಿಸಿದರು.

‌ನಿರ್ಲಕ್ಷ್ಯ ವಹಿಸಬಾರದು:

‘ಉದ್ಯೋಗ ಖಾತ್ರಿ ಯೋಜನೆಯಡಿ ಒಬ್ಬರಿಗೆ ವಾರ್ಷಿಕ ನೀಡುವ ಕೆಲಸದ ದಿನಗಳನ್ನು ಬರಗಾಲದಿಂದಾಗಿ 100ರಿಂದ 150ಕ್ಕೆ ಹೆಚ್ಚಿಸಲಾಗಿದೆ. ಬರಗಾಲಪೀಡಿತ ತಾಲ್ಲೂಕುಗಳಿಗೆ ತಲಾ ₹ 50 ಲಕ್ಷ ನೀಡಲಾಗಿದೆ. ನೀರು ಪೂರೈಕೆಗೆ ಹಣಕಾಸಿನ ತೊಂದರೆ ಇಲ್ಲ. ಅಧಿಕಾರಿಗಳು ನಿರ್ಲಕ್ಷ್ಯ ವಹಿಸಬಾರದು’ ಎಂದು ಸೂಚಿಸಿದರು.

ತ್ವರಿತವಾಗಿ ಅನುಷ್ಠಾನಗೊಳಿಸಿ:

‘ಅಗತ್ಯಬಿದ್ದರೆ ಕೊಳವೆಬಾವಿಗಳನ್ನು ಆಳಗೊಳಿಸಬೇಕು. ನೀರು ಲಭ್ಯವಿರುವ ಬೋರ್‌ವೆಲ್‌ ಉಳ್ಳವರೊಂದಿಗೆ ಒಪ್ಪಂದ ಮಾಡಿಕೊಂಡು, ಬಾಡಿಗೆಗೆ ಪಡೆಯಬೇಕು. ₹ 5 ಲಕ್ಷದ ಒಳಗಿನ ಕೆಲಸಗಳಿಗೆ ಟೆಂಡರ್ ಪ್ರಕ್ರಿಯೆ ಅಗತ್ಯವಿಲ್ಲ. ತ್ವರಿತವಾಗಿ ಅನುಷ್ಠಾನಗೊಳಿಸಬೇಕು. ತಹಶೀಲ್ದಾರರು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಹಳ್ಳಿಗಳಲ್ಲಿ ಪ್ರವಾಸ ಮಾಡಿ, ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕು’ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಎಸ್.ಬಿ. ಬೊಮ್ಮನಹಳ್ಳಿ ಮಾತನಾಡಿ, ‘ಹಿಡಕಲ್‌ ಜಲಾಶಯದಲ್ಲಿ ಪ್ರಸ್ತುತ 24 ಟಿಎಂಸಿ ಅಡಿ ನೀರು ಲಭ್ಯವಿದ್ದು, 22.17 ಟಿಎಂಸಿ ಅಡಿ ನೀರು ಬಳಸಬಹುದು. ನವಿಲುತೀರ್ಥ ಜಲಾಶಯದಲ್ಲಿ 9.82 ಟಿಎಂಸಿ ಅಡಿ ನೀರು ಸಂಗ್ರಹವಿದ್ದು, ಇದರಲ್ಲಿ 6.11 ಟಿಎಂಟಿ ಅಡಿ ಬಳಸಬಹುದಾಗಿದೆ. ಸದ್ಯಕ್ಕೆ ಕುಡಿಯುವ ನೀರಿಗೆ ತೊಂದರೆ ಇಲ್ಲ’ ಎಂದು ಮಾಹಿತಿ ನೀಡಿದರು.

‘ಮುಂಗಾರು ಹಂಗಾಮಿನಲ್ಲಿ ರಾಮದುರ್ಗ, ಸವದತ್ತಿ ಹಾಗೂ ಅಥಣಿ ತಾಲ್ಲೂಕುಗಳು ಬರಗಾಲಪೀಡಿತ ಎಂದು ಘೋಷಿಸಲಾಗಿತ್ತು. ₹ 58 ಕೋಟಿ ಇನ್‌ಪುಟ್ ಸಬ್ಸಿಡಿ (ಪರಿಕರ ಸಹಾಯಧನ) ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಹಿಂಗಾರು ಹಂಗಾಮಿನಲ್ಲಿ ಎಲ್ಲ ತಾಲ್ಲೂಕುಗಳನ್ನೂ ಬರಗಾಲಪೀಡಿತ ಪ್ರದೇಶಗಳೆಂದು ಘೋಷಿಸಲಾಗಿದೆ. 1.49 ಲಕ್ಷ ಹೆಕ್ಟೇರ್‌ ಬೆಳೆ ಹಾನಿ ಸಂಭವಿಸಿದ್ದು, ₹ 84.56 ಕೋಟಿಗೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ತಿಳಿಸಿದರು.

ಟ್ಯಾಂಕರ್ ಖರೀದಿಸಿ:

‘ಪಂಚಾಯ್ತಿಗೊಂದು ಟ್ಯಾಂಕರ್ ಖರೀದಿಸುವಂತೆ ಹಿಂದಿನಿಂದಲೂ ಹೇಳುತ್ತಿದ್ದೇವೆ. ಇನ್ನೊಂದು ತಿಂಗಳಲ್ಲಿ ಖರೀದಿಸಬೇಕು. ಇಲ್ಲವಾದಲ್ಲಿ ಪಿಡಿಒಗಳ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಅರಣ್ಯ ಸಚಿವ ಸತೀಶ ಜಾರಕಿಹೊಳಿ ಸೂಚಿಸಿದರು.

‘314 ಎಕರೆ ಗಾಯರಾಣ ಜಮೀನನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ಪಡೆದಿವೆ. ಆದರೆ, ಬಡವರಿಗೆ ಮನೆ ಕಟ್ಟಿಕೊಳ್ಳಲು ಕೊಡಲು ಹಲವು ನಿಯಮಗಳನ್ನು ಹೇಳುವುದು ಸರಿಯೇ?’ ಎಂದು ಚಿಕ್ಕೋಡಿ ಸಂಸದ ಪ್ರಕಾಶ ಹುಕ್ಕೇರಿ ಕೇಳಿದರು.

ಸಚಿವ ಆರ್.ಬಿ. ತಿಮ್ಮಾಪುರ, ಸಂಸದ ಸುರೇಶ ಅಂಗಡಿ, ಮುಖ್ಯಸಚೇತಕ ಗಣೇಶ ಹುಕ್ಕೇರಿ, ವಿಧಾನಪರಿಷತ್‌ ವಿರೋಧಪಕ್ಷದ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ಸಂಸದೀಯ ಕಾರ್ಯದರ್ಶಿಗಳಾದ ಡಾ.ಅಂಜಲಿ ನಿಂಬಾಳ್ಕರ್, ಮಹಾಂತೇಶ ಕೌಜಲಗಿ, ಶಾಸಕರಾದ ಉಮೇಶ ಕತ್ತಿ, ಮಹಾಂತೇಶ ದೊಡ್ಡಗೌಡರ, ಆನಂದ ಮಾಮನಿ, ಅಭಯ ಪಾಟೀಲ, ಅನಿಲ ಬೆನಕೆ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಆಶಾ ಐಹೊಳೆ, ಉಪಾಧ್ಯಕ್ಷ ಅರುಣ ಕಟಾಂಬಳೆ, ಮೇಯರ್‌ ಬಸಪ್ಪ ಚಿಕ್ಕಲದಿನ್ನಿ, ಉಪಮೇಯರ್ ಮಧುಶ್ರೀ ಪೂಜಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT