ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲುಷಿತಗೊಂಡಿರುವ ದೂಧ್‍ಗಂಗಾ; ಸಾವಿರಾರು ಮೀನುಗಳ ಮಾರಣಹೋಮ

Last Updated 11 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಚಿಕ್ಕೋಡಿ: ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲ್ಲೂಕುಗಳ ಹತ್ತಾರು ಗ್ರಾಮಗಳ ಜೀವನಾಡಿಯಾಗಿರುವ ದೂಧ್‌ಗಂಗಾ ನದಿ, ಕಲುಷಿತಗೊಂಡಿದ್ದು, ಸಾವಿರಾರು ಮೀನುಗಳು ಸತ್ತಿವೆ. ಪರಿಣಾಮ, ನದಿಯ ದಡದಲ್ಲಿ ದುರ್ನಾತ ಬೀರುತ್ತಿದೆ.

ತಾಲ್ಲೂಕಿನ ಮಲಿಕವಾಡ, ಸದಲಗಾ, ಶಮನೇವಾಡಿ, ಜನವಾಡ, ನಿಪ್ಪಾಣಿ ತಾಲ್ಲೂಕಿನ ಕಾರದಗಾ, ಬಾರವಾಡ, ಬೇಡಕಿಹಾಳ, ಬೋರಗಾಂವ, ಹುನ್ನರಗಿ, ಭೋಜ ಮೊದಲಾದ ಗ್ರಾಮಗಳು ಈ ನದಿ ನೀರು ಅವಲಂಬಿಸಿವೆ. ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳು ಸೇರಿದಂತೆ ಉದ್ಯಮಗಳಿಂದ ಬಿಡುಗಡೆ ಆಗುವ ತ್ಯಾಜ್ಯಯುಕ್ತ ಕಲುಷಿತ ನೀರು ಹರಿದು ಬಂದು ನದಿ ಸೇರುತ್ತಿದೆ ದಂಡೆಯ ಗ್ರಾಮಸ್ಥರು ಆರೋಪಿಸುತ್ತಾರೆ. ಕಲುಷಿತ ನೀರಿನಿಂದಾಗಿ ಬಹಳಷ್ಟು ಮೀನುಗಳು ಹಾಗೂ ವಿವಿಧ ಜಲಚರಗಳು ಸಾವಿಗೀಡಾಗುತ್ತಿವೆ.

‘ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲ್ಲೂಕುಗಳ ಹತ್ತಾರು ಗ್ರಾಮಗಳು ದೂಧ್‍ಗಂಗಾ ನದಿ ನೀರನ್ನೇ ಅವಲಂಬಿಸಿವೆ. ಆದರೆ, ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳು ಆಗಾಗ ನದಿಗೆ ತ್ಯಾಜ್ಯಯುಕ್ತ ನೀರು ಬಿಡುಗಡೆ ಮಾಡುವುದರಿಂದ ನದಿ ನೀರು ಕಲುಷಿತಗೊಳ್ಳುತ್ತಿದೆ. ಜಲಚರಗಳು ಸಾವಿಗೀಡಾಗುತ್ತಿವೆ, ದುರ್ವಾಸನೆ ಹರಡಿದೆ. ನದಿ ನೀರು ಸಂಪೂರ್ಣ ಕಲುಷಿತಗೊಂಡಿದೆ’ ಎಂದು ಕಾರದಗಾ ಗ್ರಾಮ ಪಂಚಾಯ್ತಿ ಸದಸ್ಯ ರಾಜು ಖಿಚಡೆ ತಿಳಿಸಿದರು.

‘ನೀರು ಕಲುಷಿತ ಆಗಿರುವುದರಿಂದ ದಂಡೆಯ ಜನ ಮತ್ತು ಜಾನುವಾರುಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಕಳೆದ ತಿಂಗಳು ಕೂಡ ನದಿಗೆ ತ್ಯಾಜ್ಯ ನೀರು ಬಿಡುಗಡೆ ಮಾಡಲಾಗಿತ್ತು. ಕೋವಿಡ್‌ನಿಂದ ಬಸವಳಿದ ಜನರು ಕಲುಷಿತ ನದಿ ನೀರಿನಿಂದ ಅನಾರೋಗ್ಯದ ಆತಂಕ ಎದುರಿಸುತ್ತಿದ್ದಾರೆ. ಕಲುಷಿತ ನೀರು ಬಿಡುಗಡೆ ಮಾಡುವ ಕಾರ್ಖಾನೆಗಳ ವಿರುದ್ಧ ಸಂಬಂಧಿಸಿದ ಅಧಿಕಾರಿಗಳು ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.

‘ಈಗ ಆ ನೀರು ಬಳಕೆಗೆ ಯೋಗ್ಯವಾಗಿಲ್ಲ. ಇದನ್ನು ನೀರಾವರಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ನದಿ ನೀರು ಕಲುಷಿತಗೊಳಿಸುತ್ತಿರುವ ಕಾರ್ಖಾನೆಗಳ ವಿರುದ್ಧ ಅಧಿಕಾರಿಗಳು ಕಠಿಣ ಕ್ರಮ ಜರುಗಿಸಬೇಕು’ ಎಂದು ಮಾಂಗೂರ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಸ್ವಪ್ನಿಲ್ ಮಾನೆ (ಸರಕಾರ) ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT