ಬೆಳಗಾವಿ: ಇಲ್ಲಿನ ವಡಗಾವಿಯ ರೈತ ಗಲ್ಲಿಯ ಮನೆಗಳಲ್ಲಿ ಆಚರಿಸುವ ಚತುರ್ಥಿ ರಾಜ್ಯದಲ್ಲೇ ವಿಶಿಷ್ಟ.
ಇಲ್ಲಿನ ರೈತರು ವರ್ಣರಂಜಿತ ಗೊಂಬೆಗಳನ್ನು ಕೂಡ್ರಿಸಿ, ಚತುರ್ಥಿಗೆ ದಸರೆಯ ಸ್ಪರ್ಶ ನೀಡಿದ್ದಾರೆ. 30 ಕುಟುಂಬಗಳು, 29 ವರ್ಷಗಳಿಂದ ಆಚರಣೆ ಮುಂದುವರಿಸಿಕೊಂಡು ಬಂದಿವೆ. ಕಳೆದ ಐದು ದಿನಗಳಲ್ಲಿ ಈ ಮನೆಗಳಿಗೆ 1 ಲಕ್ಷ ಜನ ಭೇಟಿ ನೀಡಿದ್ದಾರೆ.
ಈ ಪ್ರದೇಶದಲ್ಲಿ ಶೇ 98ರಷ್ಟು ರೈತರೇ ಇರುವ ಕಾರಣ ಇದಕ್ಕೆ 'ರೈತ ಗಲ್ಲಿ’ ಎಂದೇ ಹೆಸರು. ಚತುರ್ಥಿ ಬಂದರೆ ಇಡೀ ಗಲ್ಲಿಯಲ್ಲಿ ಸಂಭ್ರಮ. ಪ್ರತಿ
ಮನೆಯಲ್ಲೂ ವಿಶಿಷ್ಟ ಶೈಲಿಯ, ವಿವಿಧ ಅವತಾರಗಳ ಮೂರ್ತಿಗಳ ಪ್ರತಿಷ್ಠಾಪಿಸುತ್ತಾರೆ.
ಚತುರ್ಥಿಯ ಎಲ್ಲ 11 ದಿನಗಳೂ ಇಲ್ಲಿ ಜನವೋ ಜನ. ಮಧ್ಯಾಹ್ನ 4ಕ್ಕೆ ಮೂರ್ತಿ ವೀಕ್ಷಣೆ ಆರಂಭವಾದರೆ ಮಾರನೇ ದಿನದ ನಸುಕಿನ 4ರವರೆಗೂ ನಿರಂತರ 12 ತಾಸು
ಜನಜಂಗುಳಿ.
ಮುಂಬೈ ನಗರದ ನಂತರ ಬೆಳಗಾವಿಯಲ್ಲೇ ಚತುರ್ಥಿ ವೈಭವ ದೊಡ್ಡದು. ಈ ಬಾರಿ ಗಲ್ಲಿಗಲ್ಲಿಗಳಲ್ಲಿ, ವೃತ್ತ, ಚೌಕಗಳಲ್ಲಿ 350ಕ್ಕೂ ಹೆಚ್ಚು
ಬೃಹತ್ ಮೂರ್ತಿಗಳ ಪ್ರತಿಷ್ಠಾಪನೆ ಮಾಡಲಾಗಿದೆ. ಇವುಗಳ ಸಡಗರ ನೋಡಲು ಲಕ್ಷಾಂತರ ಜನ ಬರುತ್ತಾರೆ. ಆದರೆ, ರೈತ ಗಲ್ಲಿಯ ಮೂರ್ತಿಗಳು ಒಂದೂವರೆ ಅಡಿಯಿಂದ ಮೂರು ಅಡಿಯಷ್ಟು ಮಾತ್ರ ಇವೆ. ಅಲಂಕಾರದ ಕಾರಣಕ್ಕೇ ಇಲ್ಲಿಗೂ ಜನ ಮುಗಿಬೀಳುತ್ತಾರೆ.
ಆಕರ್ಷಣೆ ಏನೇನು?: ಈ ಬಾರಿಯೂ ಪೌರಾಣಿಕ ಕಥೆಗಳು, ಐತಿಹಾಸಿಕ ಘಟನೆಗಳು, ಸಾಮಾಜಿಕ ಚಿಂತನೆಗಳು, ಕೃಷಿಕರ ಬದುಕು, ಜನಪದ ಆಚರಣೆಗಳು, ಅತ್ಯಾಧುನಿಕ
ಪ್ರಪಂಚದ ಬೆಳವಣಿಗೆಗಳನ್ನು ಆಧರಿಸಿ ಗೊಂಬೆಗಳ ಅಲಂಕಾರ ಮಾಡಲಾಗಿದೆ. ಅಂಗೈನಲ್ಲಿ ಇಟ್ಟುಕೊಳ್ಳ
ಬಹುದಾದ ಪುಟಾಣಿ ಗೊಂಬೆಗಳಿಂದ ಹಿಡಿದು ಐದಡಿ ಎತ್ತರದವೂ ಇವೆ. ಪ್ರತಿಯೊಂದು ಗೊಂಬೆಗೂ ಯಂತ್ರಗಳ ಮೂಲಕ ಚಲನಶೀಲತೆ ನೀಡಲಾಗಿದೆ. ಹೀಗಾಗಿ, ಈ ಅಲಂಕಾರಗಳಿಗೆ ಜೀವಂತಿಕೆ ಬಂದಿದೆ.
0.25 ಎಚ್.ಪಿ ಮೋಟರ್, ಟೇಬಲ್ ಫ್ಯಾನಿನಲ್ಲಿ ಬಳಸುವ ಯಂತ್ರಗಳು, ಕೀಲಿ ಕೊಡುವ ಆಟದ ಗಾಡಿಗಳನ್ನು ಬಳಸಿ ಗೊಂಬೆಗಳು ತಿರುಗುವಂತೆ, ಕುಣಿಯುವಂತೆ, ಕೆಲಸ ಮಾಡುವಂತೆ ಚಲನಶೀಲತೆ ನೀಡಿದ್ದು ನಿಬ್ಬೆರಗು ಮೂಡಿಸುತ್ತದೆ. ಕಟ್ಟಿಗೆ, ರಬ್ಬರ್, ಬಟ್ಟೆಗಳಿಂದ ಮಾಡಿದ ಮದ್ದಾದ ಗೊಂಬೆಗಳ ಓಡಾಟವೇಚಂದ.
ಕರ್ನಾಟಕ, ಮಹಾರಾಷ್ಟ್ರ, ಗೋವಾ, ಆಂಧ್ರ, ಗುಜರಾತ್‌ನಿಂದಲೂ ಅಲಂಕಾರ ನೋಡಲು ಬರುತ್ತಾರೆ. ಇಲ್ಲಿನ ಥೀಮ್, ಆಕರ್ಷಣೆ, ತಾಂತ್ರಿಕ ಕೌಶಲ, ಗೊಂಬೆಗಳ ಬಗ್ಗೆ ಅಧ್ಯಯನಕ್ಕಾಗಿಯೇ ಹಲವರು ಬರುತ್ತಾರೆ.
ರೈತರಾದ ರಘುನಾಥ ಡೋಗರೆ, ಅಪ್ಪಯ್ಯ ಸಪಲೆ, ವೆಂಕಟೇಶ ಹೊಸೂರಕರ, ರಾಜು ತಾರಿಹಾಳಕರ, ಅಮೃತ್ ಧಾಮನೇಕರ, ಮಾರುತಿ ಭಿರ್ಜೆ, ಭೈರು ತಾರಿಹಾಳಕರ, ಮನೋಹರ ಕಾಜೋಳಕರ, ತಾನಾಜಿ ಹಲಗೇಕರ, ದತ್ತಾ ಕಾಜೋಳಕರ, ಆದಿನಾಥ ಮಠಕರ, ನಾಗೇಂದ್ರ ಕಾಜೋಳಕರ, ದೇವಕುಮಾರ ತಾರಿಹಾಳಕರ ಅವರು ಅಲಂಕಾರ ಮಾಡಿದ್ದಾರೆ.
1995ರಿಂದ ರೈತ ಕುಟುಂಬದವರೆಲ್ಲ ನಿರ್ಧರಿಸಿದೆವು. ಚತುರ್ಥಿ ನಮ್ಮ ಬದುಕಿನ ಪ್ರತಿಬಿಂಬ ಆಗಬೇಕು ಎಂಬ ಕಾರಣಕ್ಕೆ ಹಬ್ಬಕ್ಕೇ ಹೊಸ ರೂಪ ಕೊಟ್ಟೆವುರಾಜು ಮರವೆ,ರೈತ ಮುಖಂಡ, ಬೆಳಗಾವಿ
ಸಮಸ್ಯೆಗಳ ಮೇಲೂ ಬೆಳಕು
ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿ, ಕಾಡು ನಾಶ, ಭೂ ಒತ್ತುವರಿಯಂಥ ಸಮಸ್ಯೆಗಳ ಮೇಲೂ ರೈತರು ಇಲ್ಲಿ ಬೆಳಕು ಚೆಲ್ಲಿದ್ದಾರೆ.
ಉಳಿದಂತೆ, ಭತ್ತ ನಾಟಿ ಮಾಡುವ ವನಿತೆಯರು, ರಾಶಿ ಮಾಡುವ ದಂಪತಿ, ಎತ್ತಿನಬಂಡಿ ಕಟ್ಟಿಕೊಂಡ ಜಾತ್ರೆಗೆ ಹೊರಟ ಕುಟುಂಬ, ಅಖಾಡದಲ್ಲಿ ಕುಸ್ತಿ ಪೈಲ್ವಾನರ ಕಸರತ್ತು ಹೀಗೆ ಯಾವ ಕುಟುಂಬ ಯಾವುದಕ್ಕೆ ಪ್ರಸಿದ್ಧವೋ ಅದರದೇ ಪ್ರತಿರೂಪಗಳನ್ನು ಮಾಡಿವೆ. ಕೆಲವರು ಸೀತಾರಾಮ ಕಲ್ಯಾಣ, ಕೃಷ್ಣಲೀಲೆ, ಛತ್ರಪತಿ ಶಿವಾಜಿಯ ಯುದ್ಧ ಸನ್ನಿವೇಶ, ಪಂಢರಪುರದ ಸಂತರ ಪಾದಯಾತ್ರೆ ಕಲ್ಪನೆಗಳ ಬಿಂಬಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.