ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣೇಶೋತ್ಸವ, ಮೊಹರಂಗೆ ಬಿಗಿ ಬಂದೋಬಸ್ತ್‌

Last Updated 31 ಆಗಸ್ಟ್ 2019, 14:19 IST
ಅಕ್ಷರ ಗಾತ್ರ

ಬೆಳಗಾವಿ: ‘ಸೆಪ್ಟೆಂಬರ್‌ 2ರಿಂದ 12ರವರೆಗೆ ಗಣೇಶೋತ್ಸವ ಹಾಗೂ 10ರಂದು ಮೊಹರಂ ನಡೆಯಲಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಗಟ್ಟಲು ಬಿಗಿ ಬಂದೋಬಸ್ತ್‌ ಮಾಡಲಾಗಿದೆ. ಶಾಂತಿ ಕದಡುವ ಪ್ರಯತ್ನಕ್ಕೆ ಕೈಹಾಕಿದರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ನಗರ ಪೊಲೀಸ್‌ ಆಯುಕ್ತ ಬಿ.ಎಸ್‌. ಲೋಕೇಶಕುಮಾರ್‌ ಹೇಳಿದರು.

‘ಕಮಿಷನರೇಟ್‌ ವ್ಯಾಪ್ತಿಯಲ್ಲಿ ಸೆ.2ರಂದು 1,072 ಗಣೇಶ ಮೂರ್ತಿಗಳು ಸ್ಥಾಪನೆಯಾಗಲಿವೆ. ಸೆ.5ರಂದು ಮೊಹರಂ ಹಬ್ಬದ ನಿಮಿತ್ತ 103 ಪಾಂಜಾಗಳು, 13 ತಾಬೂತಗಳು ಪ್ರತಿಷ್ಠಾಪನೆಯಾಗಲಿವೆ. ಪಾಂಜಾಗಳು ಹಾಗೂ ತಾಬೂತಗಳು ಸೆ.10ರಂದು ವಿಸರ್ಜನೆಯಾಗಲಿವೆ. ಸಾರ್ವಜನಿಕ ಗಣೇಶ ಮೂರ್ತಿಗಳು ಸೆ.12ರಂದು ವಿಸರ್ಜನೆಯಾಗಲಿವೆ’ ಎಂದು ಹೇಳಿದರು.

‘ಎರಡು ಹಂತಗಳಲ್ಲಿ ಬಂದೋಬಸ್ತ್‌ ಮಾಡಿಕೊಳ್ಳಲಾಗಿದ್ದು, ಸೆ.2ರಿಂದ 9ರವರೆಗೆ ಒಂದನೇ ಹಂತ ಹಾಗೂ ಸೆ.9ರಿಂದ ಗಣೇಶ ಮೂರ್ತಿ ವಿಸರ್ಜನೆ ಪೂರ್ಣಗೊಳ್ಳುವವರೆಗೆ ಎರಡನೇ ಹಂತದಲ್ಲಿ ಬಂದೋಬಸ್ತ್‌ ಮಾಡಲಾಗಿದೆ. ಸ್ಥಳೀಯ ಸಿಬ್ಬಂದಿಗಳ ಜೊತೆ ನೆರೆಯ ಜಿಲ್ಲೆಗಳಿಂದಲೂ ಹೆಚ್ಚಿನ ಸಿಬ್ಬಂದಿ ಆಗಮಿಸಲಿದ್ದಾರೆ. ಇದರ ಜೊತೆಗೆ 5– ಪ್ರಹಾರ ದಳ, 9– ಕೆಎಸ್‌ಆರ್‌‍ಪಿ, 1 ಕೇಂದ್ರ ಮೀಸಲು ಪಡೆ ಕೂಡ ಆಗಮಿಸಲಿದೆ’ ಎಂದರು.

‘ಆಯಕಟ್ಟಿನ ಪ್ರದೇಶ, ಸೂಕ್ಷ್ಮ ಸ್ಥಳಗಳು, ಮೆರವಣೆಗೆ ಮಾರ್ಗದುದ್ದಕ್ಕೂ ಹಾಗೂ ಪ್ರಾರ್ಥನಾ ಸ್ಥಳಗಳ ಹತ್ತಿರ ಮತ್ತು ಜನದಟ್ಟಣೆ ಸ್ಥಳಗಳಲ್ಲಿ ಕಣ್ಗಾವಲು ಇಡಲು 152 ಸಿ.ಸಿ.ಟಿ.ವಿ. ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಹೆಚ್ಚುವರಿಯಾಗಿ ಮೆರವಣೆಗೆ ವೇಳೆ 258 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗುವುದು. ಇವುಗಳ ಮೇಲೆ ದಿನದ 24 ಗಂಟೆಯೂ ಕಣ್ಣಿಡಲು ಪ್ರತ್ಯೇಕ ತಂಡ ರಚಿಸಲಾಗಿದೆ. ಅಗತ್ಯ ಬಿದ್ದರೆ ಡ್ರೋಣ್‌ ಕ್ಯಾಮರಾ ಕೂಡ ಬಳಸಲಾಗುವುದು’ ಎಂದು ಹೇಳಿದರು.

ಹಬ್ಬದ ವೇಳೆಯಲ್ಲಿ ಯಾವುದೇ ಅಹಿತಕರ ಘಟನೆಗಳಲ್ಲಿ ಭಾಗಿಯಾಗದಂತೆ ಗೂಂಡಾ ಮತ್ತು ರೌಡಿ ಪ್ರವೃತ್ತಿಯ ಜನರಿಗೆ ಎಚ್ಚರಿಕೆ ನೀಡಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT