ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್: 92ರ ವೃದ್ಧ ಗುಣಮುಖ, ಆಸ್ಪತ್ರೆಯಿಂದ ಬಿಡುಗಡೆ

Last Updated 1 ಅಕ್ಟೋಬರ್ 2020, 15:15 IST
ಅಕ್ಷರ ಗಾತ್ರ

ಬೆಳಗಾವಿ: ಕೋವಿಡ್–19 ದೃಢಪಟ್ಟಿದ್ದ 92ರ ವೃದ್ಧರೊಬ್ಬರು ಇಲ್ಲಿನ ಕೆಎಲ್‌ಇ ಸಂಸ್ಥೆಯ ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದು, ಅವರನ್ನು ಗುರುವಾರ ಬೀಳ್ಕೊಡಲಾಯಿತು.

ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಂ.ವಿ. ಜಾಲಿ ಬೀಳ್ಕೊಡುಗೆ ನೀಡಿದರು.

ಈ ಮೂಲಕ ವಿಶ್ವ ಹಿರಿಯ ನಾಗರಿಕರ ದಿನವನ್ನು ಸರಳವಾಗಿ ಆಚರಿಸಿ ಮಾತನಾಡಿದ ಅವರು, ‘ಕೊರೊನಾ ಸಾಂಕ್ರಾಮಿಕದ ಈ ಸಂದರ್ಭದಲ್ಲಿ ವೃದ್ಧರ ಮೇಲೆ ಅತ್ಯಂತ ಗಂಭೀರ ಪರಿಣಾಮಗಳು ಉಂಟಾಗುತ್ತಿವೆ. ಅವರ ಆರೋಗ್ಯ ಕಾಪಾಡುವುದು ಅತ್ಯಂತ ಮುಖ್ಯವಾಗಿದೆ. ಕೋವಿಡ್‌ನಿಂದ ಗುಣಮುಖರಾದ ಹಿರಿಯರಿಗೆ ಧೈರ್ಯ ತುಂಬುತ್ತಾ ಸಾಂಕ್ರಾಮಿಕ ರೋಗಗಳನ್ನು ಎದುರಿಸಲು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಜಾಗೃತಿಯಷ್ಟೇ ಸಾಲದು; ಅನುಷ್ಠಾನಕ್ಕೂ ತರಬೇಕು’ ಎಂದು ಸಲಹೆ ನೀಡಿದರು.

‘ಹಿರಿಯ ನಾಗರಿಕರ ಆರೈಕೆಗಾಗಿ ಪ್ರಭಾಕರ ಕೋರೆ ಆಸ್ಪತ್ರೆಯು ದಶಕದಿಂದ ತೊಡಗಿದೆ. ಅವರಿಗಾಗಿ ಪ್ರತ್ಯೇಕ ವಿಭಾಗವಿದೆ. ವಿಶೇಷವಾಗಿ ನ್ಯುಮೊನಿಯಾ ರೋಗನಿರೋಧಕ ಲಸಿಕೆಗಳನ್ನು ಕೊಡಲಾಗುತ್ತಿದೆ. ಉಸಿರಾಟದ ಕಾಯಿಲೆ, ಕ್ಯಾನ್ಸರ್‌, ಫ್ಲ್ಯೂ ಸೇರಿದಂತೆ ವಿವಿಧ ರೋಗಗಳ ವಿರುದ್ಧ ಹೋರಾಡುವ ರೋಗನಿರೋಧಕ ಚುಚ್ಚುಮದ್ದು ನೀಡಲಾಗುತ್ತದೆ’ ಎಂದು ವಿವರಿಸಿದರು.

‘ಕೆಎಲ್‍ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರ ಮಾರ್ಗದರ್ಶನದಂತೆ ಕೆಎಲ್‍ಇ ಹೆಲ್ಪ್‌ ಎಂಬ ಘಟಕ ಸ್ಥಾಪಿಸಲಾಗಿದೆ. ಡಾ.ನಯನಾ ಜೋಷಿ ಹಾಗೂ ಡಾ.ಜೀವನ ದೋಶಿ ತಪಾಸಣೆ ಮಾಡಿ ಸಲಹೆ ನೀಡಲಿದ್ದಾರೆ. ನವದೆಹಲಿಯ ಜಿರಿಯಾಟ್ರಿಕ್ ಸೊಸೈಟಿ ಆಫ್ ಇಂಡಿಯಾ ಮೂರು ತಿಂಗಳ ಜಿರಿಯಾಟ್ರಿಕ್ ಅಂಡ್ ಜಿರೊನಾಟಾಲಾಜಿ ಕೋರ್ಸ್‌ ಪ್ರಾರಂಭಿಸಿದೆ’ ಎಂದು ತಿಳಿಸಿದರು.

ಕೋವಿಡ್‌ಕೇರ್ ತಂಡದ ಡಾ.ಮಾಧವ ಪ್ರಭು, ‘ಕೆಎಲ್‍ಇ ಆಸ್ಪತ್ರೆಯಲ್ಲಿ ಈವರೆಗೆ 1,450 ಮಂದಿ ಚಿಕಿತ್ಸೆ ಪಡೆದಿದ್ದಾರೆ. ಶೇ.76 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ’ ಎಂದರು.

ಡಾ.ಜಿ.ಎಸ್. ಗಾವಡೆ, ಡಾ.ರಾಜೇಶ ಪವಾರ ಸೇರಿದಂತೆ ಕೊರೊನಾ ಯೋಧರನ್ನು ಅಭಿನಂದಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT