‘ಗೋವಾ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ ತೀರ್ಪು’

7
ವಕೀಲರ ತಂಡದಲ್ಲಿದ್ದ ಎಂ.ಜಿ. ಝಿರಲಿ ಅಭಿಮತ

‘ಗೋವಾ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ ತೀರ್ಪು’

Published:
Updated:
Deccan Herald

ಬೆಳಗಾವಿ: ‘ಮಹದಾಯಿ ನದಿ ನೀರು ಹಂಚಿಕೆ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಸ್ಪಂದಿಸದೇ, ರಾಜ್ಯದ ವಿರುದ್ಧ ವಿನಾಕಾರಣ ದೋಷಾರೋಪಗಳನ್ನು ಮಾಡುತ್ತಲೇ ಬಂದಿದ್ದ ಗೋವಾ ರಾಜ್ಯಕ್ಕೆ ನ್ಯಾಯಮಂಡಳಿಯ ತೀರ್ಪು ಬಿಸಿ ಮುಟ್ಟಿಸಿದೆ. ರಾಜ್ಯಕ್ಕೆ ಒಟ್ಟು 13.07 ಟಿಎಂಸಿ ಅಡಿ ನೀರು ಹಂಚಿಕೆ ಮಾಡಿರುವುದು ಹೋರಾಟಕ್ಕೆ ಸಂದ ಜಯವೆಂದೇ ಹೇಳಬಹುದು’. 
– ಕರ್ನಾಟಕದ ಪರ ವಕೀಲರ ತಂಡದ ಸದಸ್ಯ, ಬೆಳಗಾವಿಯವರೇ ಆದ ಎಂ.ಬಿ. ಝಿರಲಿ ಅವರ ಅಭಿ‍ಪ್ರಾಯವಿದು.

‘ಪ್ರಜಾವಾಣಿ’ಯೊಂದಿಗೆ ಮಂಗಳವಾರ ಮಾತನಾಡಿದ ಅವರು, ವಕೀಲರ ತಂಡ ನಡೆಸಿದ ಪ್ರಯತ್ನಗಳನ್ನು ಹಂಚಿಕೊಂಡರು.

‘ನ್ಯಾಯಮಂಡಳಿ ರಚನೆಯಾದ ದಿನದಿಂದಲೂ ರಾಜ್ಯದ ಪರ ವಕೀಲರ ತಂಡದಲ್ಲಿದ್ದೇನೆ. ಜಿಲ್ಲಾ ನ್ಯಾಯಾಲಯದ ವ್ಯಾಜ್ಯಗಳ ವಕೀಲನಾಗಿ, ನಮ್ಮ ನೆಲಕ್ಕೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ತಂಡದೊಂದಿಗೆ ಕೆಲಸ ಮಾಡಿದ ತೃಪ್ತಿ ಇದೆ’ ಎಂದು ಹೇಳಿದರು.

ವಾಸ್ತವ ಒಪ್ಪುತ್ತಿರಲಿಲ್ಲ:

‘ನೆರೆಯ ಗೋವಾ ರಾಜ್ಯವು ವಾಸ್ತವ ಒಪ್ಪುವುದಕ್ಕೆ ಸಿದ್ಧವಿರಲಿಲ್ಲ. ಕೇಂದ್ರ ಜಲ ಆಯೋಗವು ಮಹದಾಯಿ ಕಣಿವೆಯಲ್ಲಿ ಒಟ್ಟು 200 ಟಿಎಂಸಿ ಅಡಿ ನೀರು ಲಭ್ಯವಿದೆ (ಇದರಲ್ಲಿ ರಾಜ್ಯದ ಕೊಡುಗೆ 45 ಟಿಎಂಸಿ ಅಡಿ ಸೇರಿದಂತೆ). ಇದನ್ನು ಗೋವಾ ತಿರಸ್ಕರಿಸಿತ್ತು. ನೀರಿನ ಕೊರತೆ ಇದೆ ಎಂದು ವಾದಿಸುತ್ತಿತ್ತು. ಸಮರ್ಪಕ ದಾಖಲೆಗಳನ್ನು ನಾವು ಸಲ್ಲಿಸಿದ್ದರಿಂದಾಗಿ, ಕಣಿವೆಯಲ್ಲಿ 188 ಟಿಎಂಸಿ ಅಡಿ ನೀರು ಲಭ್ಯವಿದೆ ಎಂದು ನ್ಯಾಯಮಂಡಳಿಯೂ ಹೇಳಿದೆ. 110 ಟಿಎಂಸಿ ಅಡಿ ಮಾತ್ರವಿದೆ ಎಂದು ವಾದಿಸುತ್ತಿದ್ದ, ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದ ಗೋವಾಕ್ಕೆ ಮುಖಭಂಗವಾಗಿದೆ’ ಎನ್ನುತ್ತಾರೆ ಅವರು.

‘ವ್ಯರ್ಥವಾಗಿ ಹರಿದು ಸಮುದ್ರ ಸೇರುತ್ತಿದ್ದ ನೀರನ್ನು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ನ್ಯಾಯಮಂಡಳಿಯ ತೀರ್ಪು ಸಹಕಾರಿಯಾಗಿದೆ. ನಾವು ನೀರು ಕೇಳುತ್ತಿರುವುದೇ ತಪ್ಪು ಎನ್ನುವ ರೀತಿಯಲ್ಲಿ ಗೋವಾ ಸರ್ಕಾರ ವಾದ ಮಾಡುತ್ತಿದ್ದುದ್ದರಿಂದ ನೋವಾಗುತ್ತಿತ್ತು. ಕೃಷ್ಣಾ, ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ರಾಜ್ಯದ ಪರ ಕಾನೂನು ಹೋರಾಟ ನಡೆಸಿದ ಫಾಲಿ ಎಸ್. ನಾರಿಮನ್ ಅವರ ನೇತೃತ್ವದಲ್ಲಿ ವಾದ ಮಂಡಿಸಿದ್ದೆವು. ಕರ್ನಾಟಕದಿಂದ ಸುಪ್ರೀಂ ಕೋರ್ಟ್‌ ಆದೇಶ ಉಲ್ಲಂಘಿಸಲಾಗುತ್ತಿದೆ ಎಂದು ಗೋವಾದವರು ಪದೇ ಪದೇ ಅರ್ಜಿಗಳನ್ನು ಸಲ್ಲಿಸುತ್ತಿದ್ದರು. ನಾವು ಯಾವುದೇ ಹಂತದಲ್ಲೂ ಕಾನೂನು ಉಲ್ಲಂಘಿಸುತ್ತಿಲ್ಲ ಎನ್ನುವುದನ್ನು ಸಾಬೀತುಪಡಿಸುತ್ತಲೇ ಹೋಗಬೇಕಾಯಿತು’ ಎಂದು ಕಾನೂನು ಹೋರಾಟದ ಹಾದಿಯನ್ನು ಬಿಚ್ಚಿಟ್ಟರು.

ತಾಂತ್ರಿಕ ಮಾಹಿತಿ:

‘ಬಹಳ ವರ್ಷಗಳ ಹಳೆಯ ಹೋರಾಟವಿದು. ಇದಕ್ಕಾಗಿ ಪೂರಕ ದಾಖಲೆಗಳನ್ನು ಸಂಗ್ರಹಿಸುವುದು ಸವಾಲಿನ ಸಂಗತಿಯೇ ಆಗಿತ್ತು. ನಾನು ಬೆಳಗಾವಿಯವನೇ ಆಗಿದ್ದರಿಂದ, ಕಣಿವೆಯ ಪರಿಚಯ ಇದ್ದುದ್ದು ಸಹಕಾರಿಯಾಯಿತು. ಜಲಸಂಪನ್ಮೂಲ ಇಲಾಖೆ ಎಂಜಿನಿಯರ್‌ಗಳು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಪೂರಕವಾಗಿ, ತಾಂತ್ರಿಕ ಮಾಹಿತಿಗಳನ್ನು ಸಕಾಲಕ್ಕೆ ಒದಗಿಸುತ್ತಿದ್ದರು’ ಎಂದು ತಿಳಿಸಿದರು.

‘ಗೋವಾದ ಸರ್ಕಾರವು ವಿವಾದವನ್ನು, ಆಸ್ತಿ ವ್ಯಾಜ್ಯ ಎನ್ನುವಂತೆ ಪರಿಗಣಿಸಿ ಹೋರಾಟ ನಡೆಸಿತು. ಜಲ ವಿವಾದ ಎನ್ನುವುದನ್ನು ಮರೆತು, ತನ್ನದೇ ಹಠ ಸಾಧಿಸುತ್ತಿತ್ತು. ನೆರೆಯ ಮಹಾರಾಷ್ಟ್ರ, ಗೋವಾದ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ಮೂಲಕ ವಿವಾದ ಬಗೆಹರಿಸಿಕೊಳ್ಳಲು, ಸರ್ಕಾರದಿಂದ ನಡೆಸಿದ ಪ್ರಯತ್ನಗಳು ಹಾಗೂ ಜಲಸಂಪನ್ಮೂಲ ಇಲಾಖೆಯಿಂದ ನಡೆಸಲಾದ ಪತ್ರ ವ್ಯವಹಾರಗಳನ್ನು ನ್ಯಾಯಮಂಡಳಿ ಎದುರು ಹಾಜರುಪಡಿಸಿದ್ದೆವು. ಬಹಳಷ್ಟು ಸವಾಲುಗಳ ನಡುವೆಯೂ ರಾಜ್ಯಕ್ಕೆ ಸಮಾಧಾನಕರ ತೀರ್ಪು ದೊರೆತಿದೆ’ ಎಂದು ಅನಿಸಿಕೆ ಹಂಚಿಕೊಂಡರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !