ಬುಧವಾರ, ಜನವರಿ 26, 2022
25 °C

ಬೆಳಗಾವಿ: ಭಾವುಕ ಕ್ಷಣಗಳಿಗೆ ಸಾಕ್ಷಿಯಾದ ಕಾರ್ಯಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಈಚೆಗೆ ಲಿಂಗೈಕ್ಯರಾದ ತಮ್ಮ ಗುರು ಸಂಗನಬಸವ ಸ್ವಾಮೀಜಿ ಅವರನ್ನು ನೆನೆದು, ಗದಗ ಜಿಲ್ಲೆ ನರೇಗಲ್‌ ಹೋಬಳಿಯ ಹಾಲಕೆರೆಯ ಅನ್ನದಾನೇಶ್ವರ ಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿ ಕಣ್ಣೀರಿಟ್ಟರು.

ಶಿವಬಸವನಗರದ ಎನ್.ಆರ್. ಶೆಟ್ಟಿ ಪಾಲಿಟೆಕ್ನಿಕ್ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಲಿಂ.ಶಿವಬಸವ ಸ್ವಾಮೀಜಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಗುರುಗಳಿಗೆ ನಾಗನೂರು ರುದ್ರಾಕ್ಷಿಮಠ ಹಾಗೂ ಲಿಂ.ಶಿವಬಸವ ಸ್ವಾಮೀಜಿ ಬಗ್ಗೆ ಅಪಾರ ಗೌರವವಿತ್ತು. ಬಹಳಷ್ಟು ವಿಷಯಗಳನ್ನು ತಿಳಿಸಿ ಹೆಮ್ಮೆ ಪಡುತ್ತಿದ್ದರು. ನನ್ನನ್ನು ಅತ್ಯಂತ ಅಂತಃಕರಣದಿಂದ ಕಂಡರು’ ಎಂದು ಸ್ಮರಿಸಿದರು.

ಅವರು ಕಣ್ಣೀರಿಟ್ಟಿದ್ದು ಹಾಗೂ ಗುರುವನ್ನು ಸ್ಮರಿಸಿದ್ದು ನೆರೆದಿದ್ದವರ ಕಣ್ಣಾಲಿಗಳು ಕೂಡ ತುಂಬಿ ಬರುವಂತೆ ಮಾಡಿತು.

ಬಳಿಕ, ಆ ಸ್ವಾಮೀಜಿಯನ್ನು ಸಿರಿಗೆರೆಯ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಬೆನ್ನು ನೇವರಿಸಿ ಸಮಾಧಾನಪಡಿಸಿ ಸಾಂತ್ವನ ಹೇಳಿದರು.

‘ಸ್ವಾಮೀಜಿಗಳಾದ ನಾವು ಪೂರ್ವಾಶ್ರಮದ ತಂದೆ–ತಾಯಿಯನ್ನು ತೊರೆದು ಬಂದಿರುತ್ತೇವೆ. ಗುರುವಿನಲ್ಲೇ ತಂದೆ–ತಾಯಿ ಕಾಣುತ್ತಿರುತ್ತೇವೆ. ಅವರು ತೋರುವ ಪ್ರೀತಿ ದೊಡ್ಡದು. ಅವರನ್ನು ಕಳೆದುಕೊಂಡಾಗ ದುಃಖ ಸಹಜ. ನನ್ನ ಗುರುಗಳಾಗಿದ್ದ ಲಿ.ಶಿವಬಸವ ಸ್ವಾಮೀಜಿ ಪೋಷಕರಿಗಿಂತಲೂ ಹೆಚ್ಚಿನ ಪ್ರೀತಿ ತೋರಿದರು. ಎರಡು ಹಣ್ಣುಗಳಿದ್ದರೆ ನನಗೊಂದನ್ನು ಕೊಟ್ಟೇ ತಿನ್ನುತ್ತಿದ್ದರು’ ಎಂದು ಸ್ಮರಿಸಿದರು. ಆಗಲೂ, ಸಭಿಕರು ಭಾವುಕರಾದರು.

‘ರುದ್ರಾಕ್ಷಿಮಠ–ಅನ್ನದಾನೇಶ್ವರ ಮಠದ ಬಾಂಧವ್ಯವನ್ನು ಡಾ.ಅಲ್ಲಮಪ್ರಭು ಸ್ವಾಮೀಜಿ ಮತ್ತು ಮುಪ್ಪಿನ ಬಸವಲಿಂಗ ಸ್ವಾಮೀಜಿ ಮುಂದುವರಿಸಿಕೊಂಡು ಹೋಗಬೇಕು’ ಎಂದು ಆಶಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.