ಭಾನುವಾರ, ಸೆಪ್ಟೆಂಬರ್ 15, 2019
30 °C

‘ರಂಗಭೂಮಿಗೆ ಬಾಳಪ್ಪ ಕೊಡುಗೆ ಅಪಾರ’

Published:
Updated:
Prajavani

ಬೆಳಗಾವಿ: ‘ರಂಗಭೂಮಿ ಕ್ಷೇತ್ರದ ಬೆಳವಣಿಗೆ ಜತೆಗೆ, ಗಡಿಯಲ್ಲಿ ಕನ್ನಡದ ಉಳಿವಿಗೆ ಶ್ರಮಿಸಿದ‌ ಏಣಗಿ‌ ಬಾಳಪ್ಪ‌ ಇಂದಿನ ರಂಗಭೂಮಿ ಕಲಾವಿದರಿಗೆ ಆದರ್ಶಪ್ರಾಯ‌ವಾಗಿದ್ದಾರೆ’ ಎಂದು ಸಾಹಿತಿ ಬಿ.ಎಸ್. ಗವಿಮಠ ಹೇಳಿದರು.

ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ರಂಗಸಂಪದ‌ ಹಾಗೂ ಕರ್ನಾಟಕ ರಂಗಭೂಮಿ ಸಹಕಾರಿ ಸಂಘ ಭಾನುವಾರ ಹಮ್ಮಿಕೊಂಡಿದ್ದ ಏಣಗಿ‌ ಬಾಳಪ್ಪ ಅವರ 2ನೇ ಪುಣ್ಯತಿಥಿ ಕಾರ್ಯಕ್ರಮದಲ್ಲಿ‌ ಅವರು ಮಾತನಾಡಿದರು.

‘ರಂಗಭೂಮಿ ಕ್ಷೇತ್ರಕ್ಕೆ ಬಾಳಪ್ಪ‌ ನೀಡಿದ ಕೊಡುಗೆ ಅಪಾರವಾಗಿದೆ. ರಂಗಭೂಮಿ ಪರಂಪರೆಯನ್ನು ಯುವಪೀಳಿಗೆಗೆ ಪರಿಚಯಿಸುವ ಕೆಲಸವಾಗಬೇಕು’ ಎಂದರು.

ಸಾಹಿತಿ ಯ.ರು‌. ಪಾಟೀಲ ಮಾತನಾಡಿ, ‘ರಂಗಭೂಮಿ ಕ್ಷೇತ್ರಕ್ಕಾಗಿ ಬಾಳಪ್ಪ ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದರು.‌ ಅವರಿಂದ ಹೊರತಾದ ರಂಗಭೂಮಿ‌ ಊಹಿಸುವುದು ಕಷ್ಟ. ಅವರು ರಂಗಭೂಮಿಯ ದಿಗ್ಗಜ’ ಎಂದು ಸ್ಮರಿಸಿದರು.

‌ನಾಟಕಕಾರ ಶಿರೀಷ್ ಜೋಶಿ ಮಾತನಾಡಿ, ‘ಏಣಗಿ ಬಾಳಪ್ಪ ಅವರು ರಂಗಸಂಗೀತಕ್ಕಾಗಿ ಮಾಡಿದ‌ ಕೆಲಸಗಳನ್ನೆಲ್ಲ‌ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ದಾಖಲಿಸುವ ಕೆಲಸ‌ವಾಗಬೇಕು. ಅವರ 218 ರಂಗಗೀತೆಗಳ ಧ್ವನಿಮುದ್ರಿತ ಸಿ.ಡಿ.ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿದರು.

ಪಂಡಿತ ರಾಜಪ್ರಭು ಧೋತ್ರೆ, ಗುರುರಾಜ ಕುಲಕರ್ಣಿ ಮತ್ತು ಮಂಜುಳಾ ಜೋಶಿ ರಂಗಗೀತೆಗಳನ್ನು ಹಾಡಿದರು.

ರಂಗಸಂಪದ ಅಧ್ಯಕ್ಷ‌ ಅರವಿಂದ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಶರಣಗೌಡ ಪಾಟೀಲ ಸ್ವಾಗತಿಸಿದರು. ಪದ್ಮಾ ಕುಲಕರ್ಣಿ ನಿರೂಪಿಸಿದರು. ರಂಗಸಂಪದ‌ ಕೋಶಾಧ್ಯಕ್ಷ ರಾಮಚಂದ್ರ ಕಟ್ಟಿ ವಂದಿಸಿದರು.

Post Comments (+)