ಇವಿಎಂ ಇದೆ; ವಿವಿಪ್ಯಾಟ್‌ ಇಲ್ಲ

7
ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ: ಅಧಿಸೂಚನೆ ಪ್ರಕಟ

ಇವಿಎಂ ಇದೆ; ವಿವಿಪ್ಯಾಟ್‌ ಇಲ್ಲ

Published:
Updated:
Deccan Herald

ಬೆಳಗಾವಿ:  ಇದೇ ತಿಂಗಳ 29ರಂದು ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ವಿದ್ಯುನ್ಮಾನ ಮತ ಯಂತ್ರ (ಇವಿಎಂ) ಬಳಕೆಯಾಗಲಿದೆ. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಳಕೆಯಾಗಿದ್ದ ವಿವಿಪ್ಯಾಟ್‌ ಇರುವುದಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಎಸ್‌.ಜಿಯಾವುಲ್ಲಾ ಹೇಳಿದರು.

ಇಲ್ಲಿನ ತಮ್ಮ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಟ್ಟು 544 ಬ್ಯಾಲೆಟ್‌ ಯೂನಿಟ್‌ ಹಾಗೂ ಕಂಟ್ರೋಲ್‌ ಯೂನಿಟ್‌ಗಳನ್ನು ಬಳಸಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ ಅವಧಿ ಮುಕ್ತಾಯವಾಗುವ 14 ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗಿದೆ. ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಇದೇ ತಿಂಗಳ 17ರವರೆಗೆ ಸಲ್ಲಿಸಲು ಅವಕಾಶವಿದೆ. 18 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು 20ರಂದು ಕೊನೆಯ ದಿನವಾಗಿದೆ. 29ರಂದು ಬೆಳಿಗ್ಗೆ 7ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ (ಅವಶ್ಯವಿದ್ದರೆ) ಜರುಗಲಿದೆ. ಅವಶ್ಯವಿದ್ದಲ್ಲಿ 31ರಂದು ಮರು ಮತದಾನ ಜರುಗಲಿದೆ. ಸೆಪ್ಟೆಂಬರ್‌ 3ರಂದು ಮತ ಎಣಿಕೆ ನಡೆಯಲಿದೆ ಎಂದು ಅವರು ತಿಳಿಸಿದರು.

4.14 ಲಕ್ಷ ಮತದಾರರು;

ಜಿಲ್ಲೆಯ ಒಟ್ಟು 10 ಪುರಸಭೆ, 2 ನಗರಸಭೆ ಹಾಗೂ 2 ಪಟ್ಟಣ ಪಂಚಾಯ್ತಿಗಳ ಒಟ್ಟು 343 ವಾರ್ಡ್‌ಗಳಿಗೆ ಚುನಾವಣೆ ಜರುಗಲಿದೆ. ನಗರಸಭೆಯಲ್ಲಿ 57,235 ಪುರುಷರು, 58,974 ಮಹಿಳೆಯರು ಸೇರಿದಂತೆ ಒಟ್ಟು 1,16,209 ಮತದಾರರು ಇದ್ದಾರೆ. 10 ಪುರಸಭೆಗಳಲ್ಲಿ 1,32,415 ಪುರುಷರು ಹಾಗೂ 1,34,318 ಮಹಿಳೆಯರು ಸೇರಿದಂತೆ ಒಟ್ಟು 2,66,733 ಮತದಾರರು ಇದ್ದಾರೆ. 2 ಪಟ್ಟಣ ಪಂಚಾಯ್ತಿಗಳಲ್ಲಿ 16,201 ಪುರುಷರು ಹಾಗೂ 15,676 ಮಹಿಳೆಯರು ಸೇರಿದಂತೆ ಒಟ್ಟು 31,877 ಮತದಾರರು ಇದ್ದಾರೆ.

ಒಟ್ಟು 14 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 2,05,851 ಪುರುಷರು ಹಾಗೂ 2,08,968 ಮಹಿಳೆಯರು ಸೇರಿದಂತೆ ಒಟ್ಟು 4,14,819 ಮತದಾರರಿದ್ದಾರೆ.

ಪೊಲೀಸ್ ಸಿಬ್ಬಂದಿ:
ಒಟ್ಟು 832 ಪೊಲೀಸ್ ಅಧಿಕಾರಿ, ಪೋಲಿಸ್ ಸಿಬ್ಬಂದಿಗಳನ್ನು ಸಿಬ್ಬಂದಿಗಳನ್ನು ಚುನಾವಣಾ ಕಾರ್ಯಕ್ಕಾಗಿ ನಿಯೋಜನೆ ಮಾಡಲಾಗಿದೆ.

ವೆಚ್ಚಮಿತಿ:
ಅಭ್ಯರ್ಥಿಗಳ ಚುನಾವಣಾ ವೆಚ್ಚದ ಗರಿಷ್ಠ ಮಿತಿಯು ನಗರ ಸಭೆಗೆ ₹ 2 ಲಕ್ಷ, ಪುರಸಭೆಗೆ ₹ 1.50 ಲಕ್ಷ, ಪಟ್ಟಣ ಪಂಚಾಯ್ತಿಗೆ ₹ 1 ಲಕ್ಷ ನಿಗದಿಪಡಿಸಲಾಗಿದೆ.

ನೋಟಾ:
ಇದೇ ಮೊದಲ ಬಾರಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತದಾರರ ಪಟ್ಟಿಯಲ್ಲಿ ನೋಟಾಗೆ (ಮೇಲ್ಕಾಣಿಸಿದ ಯಾವ ಅಭ್ಯರ್ಥಿಗೂ ನನ್ನ ಮತ ಇಲ್ಲ) ಅವಕಾಶ ನೀಡಲಾಗಿದೆ. ಮತದಾರರ ಎಡಗೈ ಉಂಗುರದ ಬೆರಳಿಗೆ ಅಳಿಸಲಾಗದ ಶಾಹಿಯನ್ನು ಹಾಕಲಾಗುವುದು. ಅಭ್ಯರ್ಥಿಗಳನ್ನು ಗುರುತಿಸಲು ಮತಪತ್ರದಲ್ಲಿ ಅವರ ಹೆಸರಿನ ಮುಂದೆ ವಿಳಾಸ  ಹಾಗೂ ಫೋಟೊ ಅಳವಡಿಸಲಾಗುವುದು.

ಪರಿಷ್ಕೃತ ಪ್ರಮಾಣ ಪತ್ರ:
ಪ್ರತಿಯೊಬ್ಬ ಅಭ್ಯರ್ಥಿಯು ತನ್ನ ಚರಾಸ್ತಿ ಮತ್ತು ಸ್ಥಿರಾಸ್ತಿಗಳ ವಿವರಗಳ ಜೊತೆಗೆ ವಿದ್ಯಾರ್ಹತೆ, ಆದಾಯದ ಮೂಲಗಳನ್ನು ತಿಳಿಸಲು ಪರಿಷ್ಕೃತ ನಮೂನೆಯಲ್ಲಿ ಪ್ರಮಾಣ ಪತ್ರ ಸಲ್ಲಿಸಬೇಕಾಗಿದೆ. ಮತದಾರರ ಪಟ್ಟಿಯಲ್ಲಿ ಹೆಸರಿರುವ ಪ್ರತಿಯೊಬ್ಬ ಮತದಾರನಿಗೆ ಅವರ ವಾರ್ಡಿನ ಸಂಖ್ಯೆ, ಮತದಾರರ ಪಟ್ಟಿಯ ಭಾಗದ ಸಂಖ್ಯೆ, ಮತದಾರರ ಪಟ್ಟಿ ಕ್ರಮ ಸಂಖ್ಯೆ, ಮತಗಟ್ಟೆಯ ಸಂಖ್ಯೆ ಮತ್ತು ಹೆಸರು/ವಿಳಾಸ, ಮತದಾನದ ದಿನಾಂಕ ಹಾಗೂ ಮತದಾನ ಸಮಯದ ಬಗ್ಗೆ ಮಾಹಿತಿಯನ್ನು ಮತದಾರರ ಚೀಟಿಯಲ್ಲಿ ನೀಡಲಾಗುವುದು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !