ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಲಭ್ಯಕ್ಕಾಗಿ ಮಾಜಿ ಸೈನಿಕರ ಹಕ್ಕೊತ್ತಾಯ

Last Updated 19 ಡಿಸೆಂಬರ್ 2018, 12:04 IST
ಅಕ್ಷರ ಗಾತ್ರ

ಬೆಳಗಾವಿ: ಹಳ್ಳಿಗಳಲ್ಲಿ ವಾಸಿಸುತ್ತಿರುವ ಮಾಜಿ ಸೈನಿಕರು ಹಾಗೂ ಅವರ ಕುಟುಂಬದವರ ಮನೆ ಕರ ರದ್ದುಪಡಿಸುವಂತೆ ಆಗ್ರಹಿಸಿ ಮಾಜಿ ಸೈನಿಕರು ಬುಧವಾರ ಸುವರ್ಣ ವಿಧಾನಸೌಧದ ಬಳಿ ಪ್ರತಿಭಟನೆ ನಡೆಸಿದರು.

‘ಪ್ರಾಣದ ಹಂಗು ತೊರೆದು ಗಡಿಯಲ್ಲಿ ನಿಂತು ದೇಶ ಸೇವೆ ಸಲ್ಲಿಸಿ ನಿವೃತ್ತರಾದ ನಾವು ಅಲ್ಪ ಪಿಂಚಣಿಯಲ್ಲಿ ಜೀವನ ನಡೆಸುವುದು ಬಹಳ ಕಷ್ಟಸಾಧ್ಯವಾಗಿದೆ. ನಿವೃತ್ತಿ ಹೊಂದಿದ ನಮಗೆ ಪುನರ್ವಸತಿ ಕಲ್ಪಿಸುವುದು ಹಾಗೂ ನೆಮ್ಮದಿಯ ಜೀವನ ನಡೆಸಲು ಅನುಕೂಲ ಮಾಡಿಕೊಡುವುದು ಸರ್ಕಾರದ ಕರ್ತವ್ಯವಾಗಿದೆ. ಈ ಮೂಲಕ ನಮ್ಮನ್ನು ಗೌರವಿಸಬೇಕು’ ಎಂದು ಕೋರಿದರು.‌

‘ಚಿಕ್ಕೋಡಿ, ರಾಯಬಾಗ ಹಾಗೂ ಹುಕ್ಕೇರಿ ತಾಲ್ಲೂಕುಗಳಲ್ಲಿ ಅಪಾರ ಸಂಖ್ಯೆಯ ಮಾಜಿ ಸೈನಿಕರು ಮತ್ತು ಕುಟುಂಬದವರು ವಾಸಿಸುತ್ತಿದ್ದಾರೆ. ಹೀಗಾಗಿ, ಇವುಗಳಿಗೆ ಕೇಂದ್ರ ಸ್ಥಾನದಲ್ಲಿರುವ ಚಿಕ್ಕೋಡಿ ಪಟ್ಟಣದಲ್ಲಿ ಸಿಎಸ್‌ಡಿ ಕ್ಯಾಂಟೀನ್ ಪ್ರಾರಂಭಿಸಲು ಸೈನಿಕ ಕಲ್ಯಾಣ ಹಾಗೂ ಪುನರ್ವಸತಿ ಇಲಾಖೆ ಕ್ರಮ ಕೈಗೊಳ್ಳಬೇಕು. ಪ್ರಸ್ತುತ ಇಂದಿರಾ ಆವಾಸ್‌ ಯೋಜನೆಯಲ್ಲಿ ಮಾತ್ರವೇ ಮಾಜಿ ಸೈನಿಕರಿಗೆ ಮನೆಗಳನ್ನು ಮಂಜೂರು ಮಾಡಲಾಗುತ್ತಿದೆ. ನಮಗೆ ಬಸವ ವಸತಿ ಹಾಗೂ ಅಂಬೇಡ್ಕರ್‌ ವಸತಿ ಯೋಜನೆಗಳಲ್ಲೂ ಮನೆಗಳನ್ನು ಕಟ್ಟಿಸಿಕೊಡಬೇಕು. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವಾಗ ಟೋಲ್‌ ಪಡೆಯುವುದನ್ನು ರದ್ದುಪಡಿಸಬೇಕು ಎಂದು’ ಒತ್ತಾಯಿಸಿದರು.

‘ಮಾಜಿ ಸೈನಿಕರಿಗೆ ಬಿಪಿಎಲ್‌ ಪಡಿತರ ಚೀಟಿಗಳನ್ನು ನೀಡುವಂತೆ ಆದೇಶ ಹೊರಡಿಸಬೇಕು. ಸೈನಿಕ ಕಲ್ಯಾಣ ಹಾಗೂ ಪುನರ್ವಸತಿ ಇಲಾಖೆಯಿಂದ ನೀಡುವ ಸೇವೆಗಳಿಗೆ ಶುಲ್ಕ ಪಡೆಯುವುದನ್ನು ರದ್ದುಪಡಿಸಬೇಕು. ನಮ್ಮ ಮಕ್ಕಳಿಗೆ ಶಿಷ್ಯವೇತನ ಮತ್ತು ಪುಸ್ತಕ ಖರೀದಿ ಸಹಾಯಧನವನ್ನು ಹೆಚ್ಚಿಸಬೇಕು’ ಎಂದು ಆಗ್ರಹಿಸಿದರು.

ಚಿಕ್ಕೋಡಿಯ ಮಾಜಿ ಸೈನಿಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಿ.ಎಂ. ಸಂಗ್ರೋಳ್, ರಮೇಶ ಬಸ್ತವಾಡ, ಕುಮಾರ ಹಿರೇಮಠ, ಲಕ್ಷ್ಮಣ ಖವಾಸಪುರ, ಶಿವಾಜಿ ಚಿಂಗಳೆ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT