ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಳ್‌ ಗಾಬರಿಯಾಗಿತ್ತು: ಮತ್ತ್‌ ಹುಟ್ಟಿ ಬಂದಂಗಾಯ್ತು

ಪ್ರವಾಹದಲ್ಲಿ ಸಿಲುಕಿದ್ದ ಸುರೇಶಗೌಡ ಅನುಭವ
Last Updated 11 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ರಾಮದುರ್ಗ: ‘ಸುತ್ತ ಎಲ್ಲಿ ನೋಡಿದರೂ ನೀರು. ಆಸರೆಗೆ ಯಾರು ಬರುತ್ತಿಲ್ಲ. ಇನ್ನೇನು ಬದುಕುವ ಆಸೆ ಬಿಟ್ಟಿದ್ವಿ. ಬಾಳ್‌ ಗಾಬರಿಯಾಗಿತ್ತು. ಹೆಲಿಕಾಪ್ಟರ್‌ ಬಂದ್‌ ನಮ್ಮನ್ನ ರಕ್ಷಿಸಿದಾಗ ಮತ್ತ್‌ ಹುಟ್ಟಿ ಬಂದಂಗಾಯ್ತು’.

ಇದು ಮಲಪ್ರಭೆಯ ಪ್ರವಾಹದಲ್ಲಿ 3 ದಿನ ಸಿಲುಕಿ ಹೆಲಿಕಾಪ್ಟರ್‌ ಮೂಲಕ ಹೊರಬಂದಿರುವ ಸುನ್ನಾಳ ಗ್ರಾಮದ ರೈತ ಸುರೇಶಗೌಡ ಶಂಕರಗೌಡ ಪಾಟೀಲ (35) ಅನುಭವ.

‘ಇಷ್ಟೊಂದು ಪ್ರಮಾಣದ ಪ್ರವಾಹ ಮಲಪ್ರಭೆಗೆ ಬಂದಿರಲಿಲ್ಲ. ನೂರು ವರ್ಷದ ಯಜಮಾನರೊಬ್ಬರು ತಮ್ಮೊಂದಿಗೆ ಪ್ರವಾಹದಲ್ಲಿ ಸಿಲುಕಿದ್ದರು. ಇಷ್ಟೊಂದು ಪ್ರವಾಹ ಬಂದ ನೆನಪು ಅವರಿಗೂ ಇಲ್ಲ. ಚಾವಣಿ ಹತ್ತಿ ಕುಳಿತರೆ ಒಂದು ದಿನದಲ್ಲಿ ಪ್ರವಾಹ ಕುಗ್ಗಬಹುದು ಎಂಬ ನಂಬಿಕೆ ಹುಸಿಯಾಯಿತು. ಆಗ ಬದುಕುವ ಆಸೆಯನ್ನೇ ಬಿಟ್ಟಿದ್ದೆವು’ ಎಂದು ಆ ಕ್ಷಣಗಳನ್ನು ನೆನೆದರು.

‘ನದಿಯಲ್ಲಿ ಪ್ರವಾಹ ಬರುತ್ತಿದ್ದಂತೆ ಗ್ರಾಮದ ಎಲ್ಲರೂ ಮನೆಯ ಸಾಮಗ್ರಿಗಳನ್ನು ಹೊತ್ತು ಸಾಗಿಸುತ್ತಿದ್ದೆವು. ಮೂರು ನಾಲ್ಕು ಸಾರಿ ನಮ್ಮ ವಾಹನ ಸಾಮಗ್ರಿ ಸಾಗಿಸಿ ಮರಳುತ್ತಿದ್ದಂತೆಯೇ ಒಮ್ಮೆಲೆ ನೀರು ಗ್ರಾಮವನ್ನು ಆವರಿಸಿತು. 23 ಜನ ಗೌಡರ ಮೂರಂತಸ್ತಿನ ಕಟ್ಟಡದಲ್ಲಿ ಸಿಲುಕಿಕೊಂಡೆವು. ಮೊದಲನೇ ಅಂತಸ್ತಿನಲ್ಲಿ ನೀರು ಹಂತಹಂತವಾಗಿ ಏರುತ್ತಲೇ ಇತ್ತು. ನಾವಿದ್ದ ಅಂತಸ್ತಿಗೆ ನೀರು ಬರಲಾರಂಭಿಸಿದಾಗ ತುಂಬಾ ಭಯ ಉಂಟಾಯಿತು. ಅಷ್ಟೊತ್ತಿಗೆ ಹೆಲಿಕಾಪ್ಟರ್‌ನಲ್ಲಿ ಬಂದ ಯೋಧರು ನಮ್ಮೆಲ್ಲರನ್ನೂ ರಕ್ಷಣೆ ಮಾಡಿದರು’ ಎಂದು ವಿವರಿಸಿದರು.

‘ನಮ್ಮನ್ನು ಸುನ್ನಾಳದಿಂದ ಹೆಲಿಕಾಪ್ಟರ್‌ನಲ್ಲಿ ಬೆಳಗಾವಿಯ ಸಾಂಬ್ರಾ ವಿಮಾನನಿಲ್ದಾಣದಲ್ಲಿ ಬಂದಿಳಿಸಿದರು. ಅಲ್ಲಿ ಊಟ ನೀಡಿ ಆರೋಗ್ಯ ತಪಾಸಣೆ ಮಾಡಲಾಯಿತು. ಅಲ್ಲಿಂದ ಗಂಜಿ ಕೇಂದ್ರದಲ್ಲಿ ಸೇರಿಸಿದ್ದರು. ಗಂಜಿ ಕೇಂದ್ರದಿಂದ ಯಾರನ್ನೂ ಹೊರಗೆ ಬಿಡುವುದಿಲ್ಲ. ದನಕರುಗಳನ್ನು ನೋಡಿಕೊಳ್ಳಬೇಕು ಎಂದು ಹೇಳಿದಾಗ ಒಬ್ಬರನ್ನೇ ಕಳುಹಿಸಿದ್ದಾರೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT