ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ| ಜಿಲೆಟಿನ್ ಬಾಂಬ್ ಸ್ಫೋಟ: ವ್ಯಕ್ತಿ ಸಾವು

ಕಾಡು ಪ್ರಾಣಿಗಳ ಬೇಟೆಗೆ ಸಾಗಿಸುತ್ತಿದ್ದರು
Last Updated 25 ನವೆಂಬರ್ 2020, 12:50 IST
ಅಕ್ಷರ ಗಾತ್ರ

ಖಾನಾಪುರ (ಬೆಳಗಾವಿ): ತಾಲ್ಲೂಕಿನ ಬಿಜಗರ್ಣಿ ಬಳಿ ದ್ವಿಚಕ್ರವಾಹನ ಮತ್ತು ಟ್ರ್ಯಾಕ್ಟರ್‌ ನಡುವೆ ಬುಧವಾರ ಸಂಭವಿಸಿದ ಅಪಘಾತದ ವೇಳೆ, ದ್ವಿಚಕ್ರವಾಹನದಲ್ಲಿ ಚೀಲದಲ್ಲಿದ್ದ ಜಿಲೆಟಿನ್ ಬಾಂಬ್ ಸ್ಫೋಟಗೊಂಡು ವ್ಯಕ್ತಿ ಸಾವಿಗೀಡಾಗಿದ್ದಾರೆ. ಇನ್ನೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೃತರನ್ನು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕು ಹಕ್ಕಿಪಿಕ್ಕಿ ಕ್ಯಾಂಪ್ ನಿವಾಸಿ ಗಿರೀಶ ರಜಪೂತ (28) ಎಂದು ಗುರುತಿಸಲಾಗಿದೆ. ಶಿವಕುಮಾರ ರಜಪೂತ (27) ಗಾಯಗೊಂಡಿದ್ದಾರೆ. ಕಾಡು ಹಂದಿಗಳ ಬೇಟೆ ಉದ್ದೇಶದಿಂದ ಅವರು ಜಿಲೆಟಿನ್‌ ಕಡ್ಡಿಗಳಿಂದ ತಯಾರಿಸಿದ ಬಾಂಬ್ ಸಾಗಿಸುತ್ತಿದ್ದರು ಎಂದು ಗೊತ್ತಾಗಿದೆ.

‘ಕೆಲ ದಿನಗಳಿಂದ ತಾಲ್ಲೂಕಿನ ಬೀಡಿ ಗ್ರಾಮದಲ್ಲಿ ತಂಗಿದ್ದ ಅವರು, ಹಗಲಲ್ಲಿ ಅರಣ್ಯ ಪ್ರದೇಶ ಮತ್ತು ಅರಣ್ಯದಂಚಿನ ಕೃಷಿ ಜಮೀನುಗಳಿಗೆ ತೆರಳಿ ಕಾಡು ಹಂದಿಗಳ ಚಲನವಲನದ ಮಾಹಿತಿ ಸಂಗ್ರಹಿಸುತ್ತಿದ್ದರು. ರಾತ್ರಿ ಅಲ್ಲಿಗೆ ತೆರಳಿ ಜಿಲೆಟಿನ್ ಬಾಂಬ್‌ಗಳನ್ನು ಹುದುಗಿಸಿಡುತ್ತಿದ್ದರು. ಮಂಗಳವಾರ ರಾತ್ರಿ ಬಿಜಗರ್ಣಿ, ಮಾಚಿಗಡ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಹಂದಿಗಳ ಬೇಟೆಗಾಗಿ ಬಾಂಬ್‌ ಹುದುಗಿಸಿಟ್ಟಿದ್ದರು. ಬುಧವಾರ ಆ ಸ್ಥಳಕ್ಕೆ ತೆರಳಿದ್ದ ಅವರು, ಬೇಟೆ ಸಿಗದಿದ್ದರಿಂದ ಹುದುಗಿಸಿಟ್ಟಿದ್ದ ಬಾಂಬ್‌ಗಳನ್ನು ತೆಗೆದುಕೊಂಡು ವಾಪಸಾಗುತ್ತಿದ್ದರು. ಈ ವೇಳೆ ಎದುರಿನಿಂದ ಬರುತ್ತಿದ್ದ ಟ್ರ್ಯಾಕ್ಟರ್‌ಗೆ ದ್ವಿಚಕ್ರವಾಹನ ಡಿಕ್ಕಿಯಾಗಿದೆ. ಆಗ, ಬಾಂಬ್ ಇದ್ದ ಚೀಲ ಟ್ರ್ಯಾಕ್ಟರ್‌ ಚಕ್ರಕ್ಕೆ ಸಿಲುಕಿದ್ದರಿಂದ ಸ್ಫೋಟಗೊಂಡಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸ್ಫೋಟದ ತೀವ್ರತೆಗೆ ಟ್ರ್ಯಾಕ್ಟರ್‌ 20 ಅಡಿ ದೂರದಲ್ಲಿ ಮಗುಚಿ ಬಿದ್ದಿದೆ. ಚಕ್ರವೂ ಬ್ಲಾಸ್ಟ್ ಆಗಿದೆ. ಹಿಂಬದಿ ಸವಾರ ಗಿರೀಶ ದೇಹ ಮೂರು ಭಾಗಗಳಾಗಿ ರಸ್ತೆ ಪಕ್ಕದ ಜಮೀನಿನಲ್ಲಿ ಬಿದ್ದಿತ್ತು ಎಂದು ಸ್ಥಳೀಯರು ‘ಪ್ರಜಾವಾಣಿ’ ಗೆ ಮಾಹಿತಿ ನೀಡಿದರು.

‘ಘಟನೆಯಿಂದಾಗಿ ಅರಣ್ಯದಲ್ಲಿ ಸದ್ದಿಲ್ಲದೆ ನಡೆಯುತ್ತಿದ್ದ ಅಕ್ರಮ ಚಟುವಟಿಕೆಯೊಂದು ಬಹಿರಂಗಗೊಂಡಿದೆ. ಬೇಟೆ ನಡೆಯುತ್ತಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ವಿಷಾದನೀಯ’ ಎಂದು ಗ್ರಾಮಸ್ಥರು ಹೇಳಿದರು.

ಸ್ಥಳಕ್ಕೆ ಸಿಪಿಐ ಸುರೇಶ ಶಿಂಗಿ ಹಾಗೂ ನಂದಗಡ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT