ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಧಾರಣೆಗೆ ‘ತೆರೆದು’ಕೊಂಡಿರುವ ಬೆಳಗಾವಿ ಗ್ರಂಥಾಲಯಗಳು

ಜ್ಞಾನಪಿಪಾಸುಗಳ ದಾಹ ನೀಗಿಸುವಲ್ಲಿ ಯಶಸ್ವಿ, ಅಲ್ಲಲ್ಲಿ ಸಮಸ್ಯೆಗಳು
Last Updated 28 ನವೆಂಬರ್ 2021, 20:45 IST
ಅಕ್ಷರ ಗಾತ್ರ

ಬೆಳಗಾವಿ: ನಗರದಲ್ಲಿ ಹಲವು ಗ್ರಂಥಾಲಯಗಳು ಸುಧಾರಣೆಗೆ ‘ತೆರೆದು’ಕೊಳ್ಳುತ್ತಿವೆ. ತಾಲ್ಲೂಲು ಕೇಂದ್ರ ಮತ್ತು ಗ್ರಾಮೀಣ ಪ್ರದೇಶದಲ್ಲಿರುವವು ಇನ್ನೂ ಪ್ರಗತಿಯತ್ತ ಮುಖ ಮಾಡಬೇಕಾದ ಸ್ಥಿತಿ ಇದೆ.

ಶಾಲಾ–ಕಾಲೇಜು ವಿದ್ಯಾರ್ಥಿಗಳು, ವಿವಿಧ ಕೋರ್ಸ್‌ಗಳ ಪ್ರವೇಶ ಅಥವಾ ಉದ್ಯೋಗದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಂಡಿರುವ ಬಹುತೇಕರು ಸರ್ಕಾರಿ ಗ್ರಂಥಾಲಯಗಳನ್ನು ಅವಲಂಬಿಸಿದ್ದಾರೆ. ಜ್ಞಾನಪಿಪಾಸುಗಳು ಓದಿನ ತಮ್ಮ ದಾಹ ತೀರಿಸಿಕೊಳ್ಳಲು ಈ ಆಲಯಗಳಿಗೆ ಬರುತ್ತಾರೆ. ದಿನಪತ್ರಿಕೆಗಳು, ವಾರಪತ್ರಿಕೆಗಳನ್ನು ಓದಲು ನೂರಾರು ಮಂದಿ ಸೇರುತ್ತಾರೆ. ಬೆಳಿಗ್ಗೆ ಹಾಗೂ ಸಂಜೆಯ ಸಮಯದಲ್ಲಿ ತೆರೆಯುತ್ತಿದ್ದ ಕೆಲವು ಗ್ರಂಥಾಲಯಗಳನ್ನು, ಶಾಲಾ–ಕಾಲೇಜುಗಳ ವಿದ್ಯಾರ್ಥಿಗಳು ಮೊದಲಾದವರಿಗೆ ಅನುಕೂಲ ಆಗಲೆಂದು ಬೆಳಿಗ್ಗೆ 8ರಿಂದ ರಾತ್ರಿ 8ವರೆಗೂ ಮುಕ್ತವಿಡುವ ವ್ಯವಸ್ಥೆಯನ್ನು ಇಲಾಖೆಯಿಂದ ಮಾಡಲಾಗಿದೆ.

ನಗರದಲ್ಲಿ 23 ಗ್ರಂಥಾಲಯಗಳು

ನಗರದಲ್ಲಿ ನಗರ ಹಾಗೂ ಜಿಲ್ಲಾ ಕೇಂದ್ರ ಗ್ರಂಥಾಲಯದೊಂದಿಗೆ 23 ಗ್ರಂಥಾಲಯಗಳಿವೆ. ಮಹಾಂತೇಶ ನಗರ, ತಿಲಕವಾಡಿ ಹಾಗೂ ಹಿಂದವಾಡಿ ಕೇಂದ್ರಗಳು ಶಾಲೆಗಳಲ್ಲಿ ನಡೆಯುತ್ತಿವೆ. ಮೂರನ್ನು ಬಾಡಿಗೆ ಕಟ್ಟಡದಲ್ಲಿ ನಿರ್ವಹಿಸಲಾಗುತ್ತಿದೆ. ಉಳಿದವುಗಳನ್ನು ನಗರಪಾಲಿಕೆ ನೀಡಿದ ಕಟ್ಟಡದಲ್ಲಿ ನಡೆಸಲಾಗುತ್ತಿದೆ. ಪುರಸಭೆ, ಪಟ್ಟಣ ಪಂಚಾಯಿತಿ ಮಟ್ಟದಲ್ಲಿ 25 ಹಾಗೂ 15 ತಾಲ್ಲೂಕುಗಳಲ್ಲೂ ಶಾಖಾ ಗ್ರಂಥಾಲಯಗಳಿವೆ.

ಮಳೆಯಾದಾಗ ಕೇಂದ್ರ ಗ್ರಂಥಾಲಯದಲ್ಲಿ ತಾಂತ್ರಿಕ ವಿಭಾಗದ ಬಳಿ ಸೋರುವ ಸಮಸ್ಯೆ ಇದೆ. ಇದರಿಂದ ಪುಸ್ತಕಗಳಿಗೆ ಸಮಸ್ಯೆಯಾಗುವ ಆತಂಕವಿದೆ. ಇದನ್ನು ತಪ್ಪಿಸಲು ಹಾಗೂ ಪುಸ್ತಕಗಳನ್ನು ಸಂಗ್ರಹಿಸುವುದಕ್ಕಾಗಿ ಮೊದಲ ಮಹಡಿ ನಿರ್ಮಿಸುವ ಯೋಜನೆ ಅಧಿಕಾರಿಗಳದು.

ಸಿಬ್ಬಂದಿ ಕೊರತೆ

ಅಲ್ಲಲ್ಲಿ ಸಿಬ್ಬಂದಿ ಕೊರೆಯಿಂದ ನಲುಗುತ್ತಿವೆ. ನಗರ ಕೇಂದ್ರ ಗ್ರಂಥಾಲಯಕ್ಕೆ 33 ಹುದ್ದೆಗಳು ಮಂಜೂರಾಗಿದ್ದು 20 ಹುದ್ದೆಗಳಷ್ಟೆ ಭರ್ತಿಯಾಗಿವೆ. ಜಿಲ್ಲೆಯ ಇತರ ಗ್ರಂಥಾಲಯಗಳಿಗೆ 34 ಹುದ್ದೆ ಮಂಜೂರಾಗಿದ್ದು, 19 ಮಾತ್ರ ಭರ್ತಿಯಾಗಿವೆ. ಸ್ಥಳೀಯ ಸಂಸ್ಥೆಗಳು ಗ್ರಂಥಾಲಯ ಸೆಸ್ ಮೂಲಕ ಅನುದಾನವನ್ನು ಸರಿಯಾಗಿ ಕೊಡುತ್ತಿಲ್ಲ. ಇಲಾಖೆಯವರು ಜಿಲ್ಲಾಧಿಕಾರಿಗೆ ಪತ್ರ ಬರೆದು ನಿರ್ದೇಶನ ನೀಡುವಂತೆ ಕೋರುವುದು ತಪ್ಪಿಲ್ಲ ಎನ್ನುತ್ತವೆ ಮೂಲಗಳು.

‘₹ 21 ಲಕ್ಷ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ. ಟೆಂಡರ್ ‍ಪ್ರಕ್ರಿಯೆ ನಡೆಯುತ್ತಿದೆ. ನಗರ ಕೇಂದ್ರ ಗ್ರಂಥಾಲಯ ಪಕ್ಕವೇ ಮಕ್ಕಳಿಗಾಗಿ ಪ್ರತ್ಯೇಕ ಗ್ರಂಥಾಲಯ ನಿರ್ಮಿಸಲಾಗಿದೆ. 12 ವರ್ಷದೊಳಗಿನವರಿಗೆ ಅಲ್ಲಿ ಅವಕಾಶ ಇರಲಿದೆ’ ಎಂದು ನಗರ ಹಾಗೂ ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ ರಾಮಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ಡಿಜಿಟಲ್‌ ಗ್ರಂಥಾಲಯ

‘ನಗರ ಕೇಂದ್ರ ಗ್ರಂಥಾಲಯದಲ್ಲಿ 75ಸಾವಿರಕ್ಕೂ ಹೆಚ್ಚಿನ ಪುಸ್ತಕಗಳ ಸಂಗ್ರಹವಿದೆ. 10 ಕಂಪ್ಯೂಟರ್‌ಗಳ ಡಿಜಿಟಲ್‌ ಲೈಬ್ರರಿ ವ್ಯವಸ್ಥೆ ಮಾಡಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಾದ ಪುಸ್ತಕ ಮೊದಲಾದ ಸಂಪನ್ಮೂಲ ಒಳಗೊಂಡಿರುವ ಪ್ರತ್ಯೇಕ ವಿಭಾಗವಿದೆ. ಒಪನ್ ರೀಡಿಂಗ್‌ ಹಾಲ್ ಇದೆ. ನಿತ್ಯವೂ ಸಾವಿರಾರು ಮಂದಿ ಗ್ರಂಥಾಲಯಗಳ ಪ್ರಯೋಜನ ಪಡೆಯುತ್ತಿದ್ದಾರೆ. ಬಸ್ಸೊಂದನ್ನು ಸಂಚಾರಿ ಗ್ರಂಥಾಲಯವನ್ನಾಗಿ ರೂಪಿಸಲಾಗಿದೆ. ಅದು ವೇಳಾಪಟ್ಟಿ ಪ್ರಕಾರ ಬಡಾವಣೆಗಳಲ್ಲಿ ಲಭ್ಯವಿರುತ್ತದೆ’ ಎನ್ನುತ್ತಾರೆ ಅವರು.

‘ನಗರದ ಶಹಾಪುರ, ಮಹಾಂತೇಶ ನಗರ, ತಿಲಕವಾಡಿ, ವಡಗಾವಿ, ಮಾರುತಿಗಲ್ಲಿ, ಜಿಲ್ಲೆಯ ಹುಕ್ಕೇರಿ, ಚಿಕ್ಕೋಡಿ, ಗೋಕಾಕ, ಸವದತ್ತಿ, ರಾಮದುರ್ಗ, ರಾಯಬಾಗ ಮೊದಲಾದ ಶಾಖಾ ಗ್ರಂಥಾಲಯಗಳನ್ನು ವಿದ್ಯಾರ್ಥಿಗಳ ಅನುಕೂಲಕ್ಕೆಂದು ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೆ ತೆರೆದಿಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ನಗರದ ಎಸ್‌‍ಪಿಎಂ ರಸ್ತೆಯ ಛತ್ರಪತಿ ಶಿವಾಜಿ ಉದ್ಯಾನದ ಸಮೀಪ ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಅತ್ಯಾಧುನಿಕ ‘ಇ–ಲೈಬ್ರರಿ’ ನಿರ್ಮಿಸಲಾಗಿದೆ. ಜಿಲ್ಲಾ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳ ಸಹಯೋಗದಲ್ಲಿ ಪಂಚಾಯ್ತಿ ಕೇಂದ್ರಗಳ ಮಟ್ಟದಲ್ಲೂ ‘ಡಿಜಿಟಲ್ ಗ್ರಂಥಾಲಯ’ಗಳನ್ನು ನಿರ್ಮಿಸಿಕೊಡಲಾಗುತ್ತಿದೆ.

ಸೌಲಭ್ಯವಿಲ್ಲ

ಸವದತ್ತಿ: ತಾಲ್ಲೂಕಿನ ಉಗರಗೋಳ ಗ್ರಂಥಾಲಯದಲ್ಲಿ ಸೌಲಭ್ಯಗಳ ಕೊರತೆ ಇದೆ. ರ‍್ಯಾಕ್‌, ಪೀಠೋಪಕರಣ ವ್ಯವಸ್ಥೆಯಿಲ್ಲದೆ ಪುಸ್ತಕಗಳನ್ನು ಇಡುವುದಕ್ಕೆ ಸಮಸ್ಯೆಯಾಗಿದೆ. ಮೂಟೆ ಕಟ್ಟಿಡಲಾಗಿದೆ. ಅಂತೆಯೆ, ಇತರ ಕಡೆಗಳಲ್ಲಿ ನಿರ್ವಹಣೆ ಇಲ್ಲದಾಗಿದೆ. 2019ರಿಂದ ಅವುಗಳ ನಿರ್ವಹಣೆ ಗ್ರಾಮ ಪಂಚಾಯಿತಿಗೆ ಸೇರಿದೆ. ದಿನಪತ್ರಿಕೆಗಳ ಬಿಲ್ ಕೂಡ ಪಾವತಿ ಆಗದಿರುವುದು ಕಂಡುಬಂದಿದೆ.

ನೂತನ ಕಟ್ಟಡಕ್ಕೆ ₹ 40 ಲಕ್ಷ

ಚನ್ನಮ್ಮನ ಕಿತ್ತೂರು: ತಾಲ್ಲೂಕು ಪಂಚಾಯಿತಿ ಅನುದಾನದಿಂದ ದಶಕಗಳ ಹಿಂದೆ ನಿರ್ಮಾಣವಾಗಿದ್ದ ಇಲ್ಲಿಯ ಸಾರ್ವಜನಿಕ ಶಾಖಾ ಗ್ರಂಥಾಲಯ ಶಿಥಿಲಗೊಂಡಿದೆ. ಚಾವಣಿಯಲ್ಲಿ ನೀರು ಜಿನುಗುತ್ತದೆ. ನಿಯತಕಾಲಿಕೆ ಓದುವ ವಿಭಾಗದಲ್ಲಿ ಛತ್ರಿ ಹಿಡಿದುಕೊಂಡು ಕುಳಿತುಕೊಳ್ಳುವ ಪರಿಸ್ಥಿತಿ ಓದುಗರಿದೆ. ಮಳೆಯಾಯಿತೆಂದರೆ ಪೇಪರ್ ಓದುವ ವಿಭಾಗ ಮುಚ್ಚಿ ಅದನ್ನು ಪುಸ್ತಕ ವಿಭಾಗಕ್ಕೆ ಸ್ಥಳಾಂತರಿಸುತ್ತಾರೆ.

ಈ ಪರಿಸ್ಥಿತಿ ತಿಳಿದ ಶಾಸಕ ಮಹಾಂತೇಶ ದೊಡ್ಡಗೌಡರ ಹಾಗೂ ಇಲಾಖೆ ಹಿರಿಯ ಅಧಿಕಾರಿಗಳು ಇಲಾಖೆಯಿಂದಲೇ ₹ 40 ಲಕ್ಷ ವೆಚ್ಚದಲ್ಲಿ ನೂತನ ಕಟ್ಟಡಕ್ಕೆ ಅನುದಾನ ಮಂಜೂರು ಮಾಡಿಸಿದ್ದಾರೆ.

ಸೌಲಭ್ಯವಿದ್ದರೂ ಓದುಗರ ಕೊರತೆ!

ಮೂಡಲಗಿ: ಇಲ್ಲಿನ ಗಾಂಧಿ ವೃತ್ತದ ಬಳಿ ಪುರಸಭೆಗೆ ಸೇರಿದ ಉತ್ತಮ ಸ್ಥಿತಿಯಲ್ಲಿರುವ ಕಟ್ಟಡದಲ್ಲಿ ಸಾರ್ವಜನಿಕ ಗ್ರಂಥಾಲಯವಿದೆ. ಇಬ್ಬರು ಸಿಬ್ಬಂದಿ ಇದ್ದಾರೆ. 11ಸಾವಿರಕ್ಕೂ ಅಧಿಕ ವಿವಿಧ ವಿಷಯಗಳ ಪುಸ್ತಕಗಳ ಸಂಗ್ರಹವಿದೆ. ಮೇಜು, ಕುರ್ಚಿಗಳು, ಲೈಟ್‌ ವ್ಯವಸ್ಥೆ ಇದೆ. 30 ಜನರು ಕುಳಿತು ಓದುವ ವ್ಯವಸ್ಥೆ ಇದೆ. 12 ದಿನ ಪತ್ರಿಕೆಗಳು, 6 ನಿಯತಕಾಲಿಕಗಳನ್ನು ತರಿಸಲಾಗುತ್ತಿದೆ.

ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸದ ನೂರಾರು ಪುಸ್ತಕಗಳು ಇವೆ. ಆದರೆ, ಓದುಗರ ಕೊರತೆ ಇದೆ. ನಿತ್ಯ 12ರಿಂದ 15 ಜನರು ಮಾತ್ರ ಬರುತ್ತಾರೆ.

‘ಇಲಾಖೆಯು ಭಾನುವಾರ ಬದಲಿಗೆ ಸೋಮವಾರ ರಜೆ ಕೊಟ್ಟಿರುವುದರಿಂದ ಭಾನುವಾರ ಗ್ರಂಥಾಲಯ ತೆರೆದಿರುತ್ತದೆ. ಅಂದು ಓದುಗರ ಸಂಖ್ಯೆ ಹೆಚ್ಚಿರುತ್ತದೆ’ ಎಂದು ಗ್ರಂಥಾಲಯ ಮೇಲ್ವಿಚಾರಕ ಈರಪ್ಪ ಬಾಗೇವಾಡಿ ತಿಳಿಸಿದರು.

ಆಸಕ್ತಿ ವಹಿಸುತ್ತಿಲ್ಲ

ಗ್ರಂಥಾಲಯವು ಪಟ್ಟಣದ ಒಳ ಭಾಗದಲ್ಲಿರುವುದರಿಂದ ಓದುಗರು ಅಲ್ಲಿ ಬರಲು ಆಸಕ್ತಿ ವಹಿಸುತ್ತಿಲ್ಲ. ಕಾಲೇಜು ರಸ್ತೆಯಲ್ಲಿ ಸಾರ್ವಜನಿಕ ಗ್ರಂಥಾಲಯಕ್ಕೆ ಸ್ಥಳಾವಕಾಶ ಮಾಡಿದರೆ ಓದುಗರ ಸಂಖ್ಯೆಯು ಖಂಡಿತ ಹೆಚ್ಚಾಗುತ್ತದೆ. ಇಲಾಖೆಯವರು ಇತ್ತ ಗಮನಹರಿಸಬೇಕು ಎನ್ನುವುದು ಬಹಳಷ್ಟು ಜನರ ಅಭಿಪ್ರಾಯವಾಗಿದೆ.

‘ಮುನವಳ್ಳಿ ಪಟ್ಟಣ ಪುರಸಭೆಯಾಗಿ ಮೇಲ್ದರ್ಜೆಗೇರಿ 6 ವರ್ಷಗಳು ಕಳೆದಿವೆ. ಆದರೆ ಗ್ರಂಥಾಲಯ ಮೇಲ್ದರ್ಜೆಗೇರಿಲ್ಲ. ಹಳೆಯ ಗ್ರಾ.ಪಂ. ಕಾರ್ಯಾಲಯದ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಹೆಚ್ಚಿನ ಪುಸ್ತಕಗಳು ಸಿಗುವಂತೆ ಹಾಗೂ ಹಲವು ದಿನಪತ್ರಿಕೆಗಳು ಬರುವಂತೆ ಮಾಡಿ ಓದುಗರನ್ನು ಆಕರ್ಷಿಸಬೇಕು. ಸ್ಪರ್ಧಾತ್ಮಕ ಪರೀಕ್ಷೆಗೆ ಅಗತ್ಯವಾದ ಪುಸ್ತಕಗಳನ್ನು ಪುರಸಭೆಯವರು ಖರೀದಿಸಿ ಒದಗಿಸಬೇಕು. ಆಗ ಹೆಚ್ಚಿನ ಜನರನ್ನು ಆಕರ್ಷಸಿಸಬಹುದಾಗಿದೆ’ ಎನ್ನುತ್ತಾರೆ ನಿವಾಸಿ ಕಿರಣ ಯಲಿಗಾರ.

(ಪ್ರಜಾವಾಣಿ ತಂಡ: ಎಂ.ಮಹೇಶ, ಪ್ರದೀಪ ಮೇಲಿನಮನಿ, ಬಸವರಾಜ ಶಿರಸಂಗಿ, ಬಾಲಶೇಖರ ಬಂದಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT