ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಟುಂಬ ಬೇರೆ, ರಾಜಕಾರಣವೇ ಬೇರೆ: ಬಾಲಚಂದ್ರ ಜಾರಕಿಹೊಳಿ

ಪ್ರಚಾರ ಸಭೆಯಲ್ಲಿ ಬಾಲಚಂದ್ರ ಜಾರಕಿಹೊಳಿ ಹೇಳಿಕೆ
Last Updated 12 ಏಪ್ರಿಲ್ 2021, 16:17 IST
ಅಕ್ಷರ ಗಾತ್ರ

ಗೋಕಾಕ: ‘ಕುಟುಂಬವೇ ಬೇರೆ. ರಾಜಕಾರಣವೇ ಬೇರೆ. ಕಾರ್ಯಕರ್ತರು ಯಾವುದೇ ಗೊಂದಲಕ್ಕೆ ಒಳಗಾಗದೆ ಈ ಉಪ ಚುನಾವಣೆಯಲ್ಲಿ ದೇಶದ ಸಮಗ್ರತೆ, ಸುರಕ್ಷತೆ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಬಿಜೆಪಿಗೆ ಆಶೀರ್ವಾದ ಮಾಡಬೇಕು’ ಎಂದು ಕೆಎಂಎಫ್ ಅಧ್ಯಕ್ಷರೂ ಆಗಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ಪ್ರಚಾರದಲ್ಲಿ ಭಾಗವಹಿಸುವ ಮೂಲಕ, ಕೆಲವು ದಿನಗಳಿಂದ ನಡೆಯುತ್ತಿದ್ದ ರಾಜಕೀಯ ಊಹಾಪೋಹಗಳಿಗೆ ತೆರೆ ಎಳೆದರು.

ಹೊರವಲಯದಲ್ಲಿ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಪರವಾಗಿ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ‘ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕೈ ಜೋಡಿಸಬೇಕು’ ಎಂದು ಕೋರಿದರು.

‘ಕೆಲ ಕಾರ್ಯದ ಒತ್ತಡದಿಂದ ಕ್ಷೇತ್ರಕ್ಕೆ ಬರಲು ಆಗಲಿಲ್ಲ. ನನ್ನ ಅನುಪಸ್ಥಿತಿಯಲ್ಲಿ ನಮ್ಮೆಲ್ಲ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಬಿಜೆಪಿ ಪರ ಪ್ರಚಾರ ಕೈಗೊಂಡಿದ್ದು ಇದಕ್ಕೆ ನಮ್ಮ ಎನ್‌ಎಸ್‌ಎಫ್ ತಂಡ ಸಾಥ್ ನೀಡಿದೆ. ಬಿಜೆಪಿ ನಾಯಕರುಗಳೊಂದಿಗೆ ನಿತ್ಯ ಸಂಪರ್ಕಿದಲ್ಲಿದ್ದು, ಪ್ರಚಾರದ ಬಗ್ಗೆ ಚರ್ಚಿಸುತ್ತಿದ್ದೆ. ನಾವು ಸೂಚಿಸಿದ ರೀತಿಯಲ್ಲೇ ಪ್ರಚಾರ ಕಾರ್ಯ ನಡೆಯುತ್ತಿದೆ. ಕಳೆದ ಚುನಾವಣೆಗಿಂತ ಈ ಬಾರಿ ಅತ್ಯಧಿಕ ಮತಗಳ ಮುನ್ನಡೆ ದೊರಕಿಸಿಕೊಡುವ ಜವಾಬ್ದಾರಿ ನನ್ನದು ಎಂದು ಪಕ್ಷದ ಮುಖಂಡರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಈ ಚುನಾವಣೆಯಲ್ಲಿ ಕುಟುಂಬಕ್ಕಿಂತ ನಮಗೆ ಪಕ್ಷ ಮುಖ್ಯ. ಕಾಂಗ್ರೆಸ್ ಪಕ್ಷವನ್ನು ವಿರೋಧಿಸುತ್ತಾ ಬಂದಿರುವ ನಮಗೆ ಬಿಜೆಪಿ ಗೆಲ್ಲಿಸುವ ಗುರಿ ಇದೆ’ ಎಂದರು.

‘ಈ ಸಂದೇಶವನ್ನು ಕಾರ್ಯಕರ್ತರು ಎಲ್ಲ ಮತದಾರರಿಗೂ ಮುಟ್ಟಿಸಬೇಕು. ತಪ್ಪು ಗ್ರಹಿಕೆಗೆ ಅವಕಾಶ ಮಾಡಿಕೊಡಬೇಡಿ. ದಾರಿ ತಪ್ಪಬೇಡಿ’ ಎಂದು ಕೋರಿದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ‘ಚುನಾವಣೆ ನಂತರ ಕಾಂಗ್ರೆಸ್ ಇಬ್ಭಾಗವಾಗಲಿದೆ. ಆ ಪಕ್ಷವನ್ನು ಹುಡುಕಬೇಕಾದ ಪರಿಸ್ಥಿತಿ ಬರಲಿದೆ. ಇದನ್ನು ಸಿದ್ದರಾಮಯ್ಯ ಅರ್ಥ ಮಾಡಿಕೊಳ್ಳಲಿ’ ಎಂದು ಹೇಳಿದರು.

ಅಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಉಮೇಶ ಕತ್ತಿ, ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ, ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ, ಅರಭಾವಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ, ಜಿ.ಪಂ. ಸದಸ್ಯ ಗೋವಿಂದ ಕೊಪ್ಪದ, ಸುಭಾಷ ಪಾಟೀಲ, ಮುಖಂಡರಾದ ಬಸನಗೌಡ ಪಾಟೀಲ, ರಾವಸಾಬ ಪಾಟೀಲ, ಹಣಮಂತ ತೇರದಾಳ, ವಿಠ್ಠಲ ಸವದತ್ತಿ, ರಾಮಣ್ಣ ಮಹಾರೆಡ್ಡಿ, ಶಂಕರ ಬಿಲಕುಂದಿ, ಬಸವಂತ ಕಮತಿ, ಕೆಂಚಗೌಡ ಪಾಟೀಲ, ವಕೀಲ ಎಂ.ಕೆ. ಕುಳ್ಳೂರ, ರವಿ ಪರುಶೆಟ್ಟಿ, ಲಕ್ಷ್ಮಣ ಗಣಪ್ಪಗೋಳ, ಲಕ್ಷ್ಮಣ ಮುಸಗುಪ್ಪಿ, ಪರಮೇಶ್ವರ ಹೊಸಮನಿ, ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ದಲಿಂಗ ಕಂಬಳಿ, ಶಿವನಗೌಡ ಪಾಟೀಲ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT