ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ನಲ್ಲಿನ್ನೂ ಕುಟುಂಬ ರಾಜಕಾರಣ

ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಟೀಕೆ
Last Updated 8 ಮಾರ್ಚ್ 2020, 13:12 IST
ಅಕ್ಷರ ಗಾತ್ರ

ಬೆಳಗಾವಿ: ‘ಕಾಂಗ್ರೆಸ್‌ನಲ್ಲಿ ಇನ್ನೂ ಕುಟುಂಬ ರಾಜಕಾರಣವಿದೆ. ಅಲ್ಲಿ ಅಪ್ಪ-ಮಕ್ಕಳು, ಅಮ್ಮ-ಮಗನಿಗೆ ಅಧಿಕಾರ ಸಿಗುತ್ತದೆ. ಆದರೆ, ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತರು ಕೂಡ ದೊಡ್ಡ ಹುದ್ದೆ ಪಡೆಯಬಹುದು. ಎಲ್ಲರಿಗೂ ಸಮಾನ ಅವಕಾಶಗಳು ದೊರೆಯುತ್ತವೆ’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದರು.

ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ನಡೆದ ಬೆಳಗಾವಿ ಗ್ರಾಮೀಣ ಬಿಜೆಪಿ ಮಂಡಲ ಅಧ್ಯಕ್ಷ ಧನಂಜಯ ಜಾಧವ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕಾರ್ಯಕರ್ತರು ನಿಷ್ಠಾವಂತ ಹಾಗೂ ಪ್ರಾಮಾಣಿಕವಾಗಿರಬೇಕು. ಪಕ್ಷದ ಬೆಳವಣಿಗೆಗೆ ಶ್ರಮಿಸಬೇಕು. ಆಗ, ದೊಡ್ಡ ಹುದ್ದೆಗಳು ಸಿಗುತ್ತವೆ. ಚಹಾ ಮಾರುತ್ತಿದ್ದ ಬಾಲಕ ಪ್ರಧಾನಿ ಹುದ್ದೆಗೆ ಏರಿರುವುದು ನಮ್ಮ ಪಕ್ಷದ ವಿಶೇಷ’ ಎಂದರು.

ದೊಡ್ಡ ಪಕ್ಷ

‘ದೇಶದ ಅನೇಕ ಪಕ್ಷಗಳಲ್ಲಿ ಕುಟುಂಬ ರಾಜಕಾರಣವಿದೆ. ಹಿಂದೆ ಅಧಿಕಾರ ನಡೆಸಿದ ಅನೇಕ ಸರ್ಕಾರಗಳು ದ್ವೇಷದ ರಾಜಕಾರಣ ಮಾಡಿವೆ. ಇಬ್ಬರು ಸಂಸದರನ್ನು ಹೊಂದಿದ್ದ ಬಿಜೆಪಿ ಈಗ ಅಧಿಕಾರದ ಚುಕ್ಕಾಣಿ ಹಿಡಿಯುವ ಹಂತಕ್ಕೆ ಬೆಳೆದಿದೆ. ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಡವರನ್ನು ಮುಖ್ಯವಾಹಿನಿಗೆ ತರುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ’ ಎಂದು ತಿಳಿಸಿದರು.

ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಮಾತನಾಡಿ, ‘ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಬಹಳ ವ್ಯತ್ಯಾಸ ಇದೆ. ನಾನು ಕಾಂಗ್ರೆಸ್‌ನಲ್ಲಿ ಇದ್ದಾಗ ಪ್ರಧಾನಿ ಯಾರಾಗುತ್ತಾರೆ ಎನ್ನುವುದನ್ನು ಊಹಿಸಬಹುದಾಗಿತ್ತು. ಬಿಜೆಪಿಯಲ್ಲಿ ಮುಂದಿನ ಪ್ರಧಾನಿ ಅಭ್ಯರ್ಥಿ ಯಾರಾಗುತ್ತಾರೆ ಎನ್ನುವುದು ತಿಳಿಯುವುದಿಲ್ಲ. ಬಿಜೆಪಿಯಲ್ಲಿ ಚಿಕ್ಕವರಿಗೂ ಅಧಿಕಾರ ಸಿಗುತ್ತದೆ’ ಎಂದರು.

ಸಾಮಾನ್ಯರಿಗೂ

‘ನಾನು ಕಾಂಗ್ರೆಸ್‌ನಲ್ಲಿದ್ದಾಗ, ಸುರೇಶ ಅಂಗಡಿ ಧ್ವಜ ಹಿಡಿದುಕೊಂಡು ಚನ್ನಮ್ಮ ವೃತ್ತದಲ್ಲಿ ಹೋರಾಟ ಮಾಡುತ್ತಿದ್ದರು. ಇನ್ನೂ ಎಷ್ಟು ವರ್ಷ ಧ್ವಜ ಹಿಡಿದುಕೊಂಡು ಇರುತ್ತೀರಿ ಎಂದು ಕಿಚಾಯಿಸುತ್ತಿದ್ದೆ. ಹಾಗೆಯೇ ಹೋರಾಡಿದ ಅವರೀಗ ಕೇಂದ್ರದಲ್ಲಿ ಸಚಿವರಾಗಿದ್ದಾರೆ. ಸಾಮಾನ್ಯ ಕಾರ್ಯಕರ್ತನಿಗೂ ಬಿಜೆಪಿಯಲ್ಲಿ ದೊಡ್ಡ ಸ್ಥಾನಗಳು ಸಿಗುತ್ತವೆ ಎನ್ನುವುದಕ್ಕೆ ಇದು ಉದಾಹರಣೆಯಾಗಿದೆ’ ಎಂದು ತಿಳಿಸಿದರು.

ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ, ‘ನಾನು ಹಾಗೂ ಧನಂಜಯ ಸೇರಿ ಇಲ್ಲಿ ಪಕ್ಷ ಬೆಳೆಸುವ ಜವಾಬ್ದಾರಿ ಹೊತ್ತುಕೊಂಡಿದ್ದೇವೆ’ ಎಂದರು.

ಧನಂಜಯ ಜಾಧವ ಮಾತನಾಡಿದರು. ಬುಡಾ ಅಧ್ಯಕ್ಷ ಗೂಳಪ್ಪ ಹೊಸಮನಿ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಕ್ತಾರ ಪಠಾಣ, ನಿರ್ಗಮಿತ ಅಧ್ಯಕ್ಷ ಮೋಹನ ಅಂಗಡಿ, ನಗರ ಘಟಕದ ಅಧ್ಯಕ್ಷ ಶಶಿಕಾಂತ ಪಾಟೀಲ, ಮುಖಂಡರಾದ ಮನೋಹರ ಕಡೋಲಕರ, ಎಂ.ಬಿ. ಜಿರಲಿ, ಶಿವಾಜಿ ಸುಂಠಕರ, ರಾಜೇಂದ್ರ ಹರಕುಣಿ, ಮಹೇಶ ಮೋಹಿತೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT