ಗುರುವಾರ , ಅಕ್ಟೋಬರ್ 28, 2021
18 °C
ವಿಸರ್ಜನೆ ವೇಳೆ ಸೇರಿದ್ದ ನೂರಾರು ಭಕ್ತರು

ಬೆಳಗಾವಿ: ಗಣೇಶನಿಗೆ ಸಂಭ್ರಮದ ವಿದಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆ ಗಣೇಶ ಮೂರ್ತಿಗಳ ವಿಸರ್ಜನೆ ಕಾರ್ಯಕ್ರಮವನ್ನು ನೂರಾರು ಭಕ್ತರು ಸಂಭ್ರಮ ಮತ್ತು ಭಕ್ತಿ– ಭಾವದಿಂದ ಭಾನುವಾರ ನೆರವೇರಿಸಿದರು.

ಕೋವಿಡ್ ಆತಂಕದ ನಡುವೆಯೂ ಸಂಭ್ರಮದಿಂದ ಗಣೇಶೋತ್ಸವ ಮಹಾಮಂಡಳದವರು ಮತ್ತು ಭಕ್ತರು, ವಿನಾಯಕನನ್ನು ಹೊಂಡಗಳಲ್ಲಿ ವಿಸರ್ಜಿಸಿ ವಿದಾಯ ಹೇಳಿದರು. ಕೋವಿಡ್ ಸಂಕಷ್ಟ ನಿವಾರಣೆ ಆಗಲಿ ಮತ್ತು ಒಳಿತಾಗಲಿ ಎಂದು ಪ್ರಾರ್ಥಿಸಿದರು.


ಬೆಳಗಾವಿಯ ಕಪಿಲೇಶ್ವರ ಹೊಂಡದಲ್ಲಿ ಗಣೇಶ ಮೂರ್ತಿಯನ್ನು ಕ್ರೇನ್ ಬಳಸಿ ವಿಸರ್ಜಿಸಲಾಯಿತು - ಪ್ರಜಾವಾಣಿ ಚಿತ್ರ

ಸಾರ್ವಜನಿಕ ಗಣೇಶೋತ್ಸವಕ್ಕೆ ಸರ್ಕಾರದಿಂದ ಅನುಮತಿ ಸಿಕ್ಕಿದ್ದಿರಂದಾಗಿ, ನಗರದ ವಿವಿಧ ಬಡಾವಣೆಗಳಲ್ಲಿ 370ಕ್ಕೂ ಹೆಚ್ಚು ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿತ್ತು.

ಕೋವಿಡ್ 3ನೇ ಅಲೆಯ ಭೀತಿಯ ಹಿನ್ನೆಲೆಯಲ್ಲಿ ಮೆರವಣಿಗೆಗೆ ಅವಕಾಶವಿರಲಿಲ್ಲ. ಮಹಾಮಂಡಳದವರು ತೆರೆದ ವಾಹನಗಳಲ್ಲಿ ಮೂರ್ತಿಗಳನ್ನು ತಂದು ವಿಸರ್ಜಿಸಿದರು. ಮನೆಗಳಲ್ಲಿ ಪ್ರತಿಷ್ಠಾಪಿಸಿದ್ದ ಮೂರ್ತಿಗಳನ್ನು ಕುಟುಂಬದವರು ದ್ವಿಚಕ್ರವಾಹನ, ಕಾರು, ಜೀಪ್‌ ಮೊದಲಾದ ವಾಹನಗಳಲ್ಲಿ ತಂದು ಪೂಜೆ ಸಲ್ಲಿಸಿ ವಿಸರ್ಜಿಸಿ ಬೀಳ್ಕೊಡುಗೆ ನೀಡಿದರು. ಹೊಂಡಗಳ ಬಳಿ ಘೋಷಣೆಗಳು ಮೊಳಗಿದವು.

ನಗರದ ಕಪಿಲೇಶ್ವರ ಹಳೆಯ ಹೊಂಡ, ಹೊಸ ಹೊಂಡ, ಜಕ್ಕೇರಿ ಹೊಂಡ, ಕಲ್ಮೇಶ್ವರ ಹಳೆಯ ಹೊಂಡ, ಅನಗೋಳ, ಮಜಗಾವಿಯ ಬ್ರಹ್ಮದೇವ ಮಂದಿರ  ಕೆರೆ, ಕೋಟೆ ಕೆರೆ, ಕಣಬರ್ಗಿ ಕೆರೆ, ಕಂಗ್ರಾಳಿ ಬಿ.ಕೆ. ಮೊದಲಾದ ಕಡೆಗಳಲ್ಲಿ ವಿಗ್ರಹಗಳ ವಿಸರ್ಜನೆಗೆ ಸ್ಥಳೀಯ ಸಂಸ್ಥೆಗಳಿಂದ ವ್ಯವಸ್ಥೆ ಮಾಡಲಾಗಿತ್ತು. ನಗರದಲ್ಲಿ ನಗರಪಾಲಿಕೆಯಿಂದ ವ್ಯವಸ್ಥೆ ಮಾಡಲಾಗಿತ್ತು.


ಬೆಳಗಾವಿಯ ಕ‍ಪಿಲೇಶ್ವರ ಹೊಂಡದಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ ವೇಳೆ ನೂರಾರು ಜನರು ಭಾಗವಹಿಸಿದ್ದರು
- ಪ್ರಜಾವಾಣಿ ಚಿತ್ರ

ಕಪಿಲೇಶ್ವರ ದೇವಸ್ಥಾನದ ಹೊಂಡದ ಬಳಿ ಕ್ರೇನ್‌ಗಳನ್ನು ಕೂಡ ಬಳಸಲಾಯಿತು. ಕಪಿಲೇಶ್ವರ ಹಳೆಯ ಹೊಂಡದಲ್ಲಿ ಭಾತಖಾಂಡೆ ಮಹಾಮಂಡಳದ ಸಾರ್ವಜನಿಕ ಗಣೇಶ ವಿಗ್ರಹವನ್ನು ಮೊದಲಿಗೆ ವಿಸರ್ಜಿಸಲಾಯಿತು. ಕ್ರಮೇಣ ಹಲವರು ಬಂದು ಮೂರ್ತಿಗಳನ್ನು ವಿಸರ್ಜಿಸಿದರು. ರಾತ್ರಿಯವರೆಗೂ ವಿಸರ್ಜನೆ ಪ್ರಕ್ರಿಯೆ ನಡೆಯಿತು. ಜನರು ಮನೆಗಳಲ್ಲಿ ಪ್ರತಿಷ್ಠಾಪಿಸಿದ್ದ ವಿಗ್ರಹಗಳನ್ನು ತಂದು ವಿಸರ್ಜಿಸಿದರು.

ಗಣೇಶ ವಿಸರ್ಜನೆ ಅಂಗವಾಗಿ ಭಾನುವಾರ ನಡೆದ ಪೂಜಾ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಮಹಾನಗರಪಾಲಿಕೆ ಆಯುಕ್ತ ರುದ್ರೇಶ ಘಾಳಿ ಮತ್ತಿತರರು ಪಾಲ್ಗೊಂಡಿದ್ದರು.


ಬೆಳಗಾವಿಯ ಕಪಿಲೇಶ್ವರ ದೇವಸ್ಥಾನ ಬಳಿಯ ಹಳೆಯ ಹೊಂಡದಲ್ಲಿ ಗಣೇಶ ಮೂರ್ತಿಯನ್ನು ಭಕ್ತರ ಸಮ್ಮುಖದಲ್ಲಿ ಕ್ರೇನ್ ಮೂಲಕ ಭಾನುವಾರ ವಿರ್ಜಿಸಲಾಯಿತು

ಬಳಿಕ ಮೂರ್ತಿಗಳನ್ನು ಕುಟುಂಬದವರು ಅಥವಾ ಮಹಾಮಂಡಳದವರು ಪಟಾಕಿಗಳನ್ನು ಸಿಡಿಸುತ್ತಾ, ಜೈಕಾರ ಕೂಗುತ್ತಾ ಹೊಂಡಗಳ ಬಳಿಗೆ ತರುತ್ತಿದ್ದುದ್ದು ಸಾಮಾನ್ಯವಾಗಿತ್ತು.

ಕೋವಿಡ್‌ಗೂ ಹಿಂದೆ ಪ್ರತಿ ವರ್ಷ 11 ದಿನಗಳವರೆಗೆ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಅದ್ಧೂರಿ ಮೆರವಣಿಗೆಯೊಂದಿಗೆ ವಿಸರ್ಜನೆ ಮಾಡಲಾಗುತ್ತಿತ್ತು. ಹುತಾತ್ಮ ಚೌಕದಲ್ಲಿ ಆರಂಭಗೊಳ್ಳುತ್ತಿದ್ದ ಮೆರವಣಿಗೆಯು ನಿರಂತರ 24 ಗಂಟೆಗಳವರೆಗೆ ನಡೆಯುತ್ತಿತ್ತು. ಇದನ್ನು ವೀಕ್ಷಿಸಲು ನೆರೆಯ ಮಹಾರಾಷ್ಟ್ರ ಹಾಗೂ ಗೋವಾದಿಂದಲೂ ಭಕ್ತರು ಬರುತ್ತಿದ್ದರು. ಸಾವಿರಾರು ಮಂದಿ ಸಮಾವೇಶಗೊಳ್ಳುತ್ತಿದ್ದರು. ಆದರೆ, ಕೋವಿಡ್-19 ಹರಡುವಿಕೆ ನಿಯಂತ್ರಣಕ್ಕಾಗಿ ಈ ಬಾರಿ ಮೆರವಣಿಗೆಗೆ ಸರ್ಕಾರ ನಿರ್ಬಂಧ ಹೇರಿತ್ತು.

ಗಣೇಶ ವಿರ್ಸಜನೆ ವೇಳೆ ಕೋವಿಡ್ ಮಾರ್ಗಸೂಚಿ ಪಾಲನೆಯಾಗಲಿಲ್ಲ. ಹೊಂಡಗಳ ಬಳಿ ಜನಸಾಗರವೇ ಸೇರಿತ್ತು. ಬಹುತೇಕರು ಮಾಸ್ಕ್‌ ಧರಿಸಿರಲಿಲ್ಲ.  ಪರಸ್ಪರ ಅಂತರ ಕಾಯ್ದುಕೊಂಡಿರಲಿಲ್ಲ. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡಬೇಕಾಯಿತು. ಕತ್ತಲಾಗುತ್ತಿದ್ದಂತೆಯೇ ಹೊಂಡಗಳ ಬಳಿ ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಿ ಜನರು ನೂರಾರು ಸಂಖ್ಯೆಯಲ್ಲಿ ಸೇರಿದ್ದರು.

ಮುಂಜಾಗ್ರತಾ ಕ್ರಮವಾಗಿ ನಗರದಾದ್ಯಂತ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.


ಬೆಳಗಾವಿಯ ಸದಾಶಿವನಗರ ನಿವಾಸಿಗಳು ಗಣೇಶ ಮೂರ್ತಿಯನ್ನು ವಿಸರ್ಜಿಸುವುದಕ್ಕಾಗಿ ಟ್ರ್ಯಾಕ್ಟರ್‌ನಲ್ಲಿ ಸಾಗಿಸಿದ ಕ್ಷಣ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು